ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಕ್ಕೆ ತುಟಿಬಿಚ್ಚದ ಕಾಂಗ್ರೇಸ್ ಅಧ್ಯಕ್ಷ ‘ಕಂ’ಎಂಎಲ್ಸಿ

ಕರಾವಳಿ

SPECIAL STORY

ದಕ್ಷಿಣ ಕನ್ನಡ ಜಿಲ್ಲೆ ಈ ಹಿಂದೆ ಕಾಂಗ್ರೆಸ್ ಪಕ್ಷದ ಭದ್ರಕೋಟೆ.ಆದರೆ ಕೆಲವು ವರ್ಷಗಳಿಂದ ಜಿಲ್ಲೆ ಕೋಮುವಾದಿಗಳ ಪ್ರಯೋಗ ಶಾಲೆಯಾಗಿ ಪರಿವರ್ತನೆಯಾದ ಕಾರಣ ಕಾಂಗ್ರೆಸ್ ಪಕ್ಷ ಹೀನಾಯ ಸ್ಥಿತಿಗೆ ಬಂದು ತಲುಪಿದೆ. ಕಳೆದ ಬಾರಿ ಲೋಕಸಭೆಗೆ ಯುವ ಅಭ್ಯರ್ಥಿಯನ್ನು ಕಾಂಗ್ರೆಸ್ ಪಕ್ಷ ಕಣಕ್ಕಿಳಿಸಿದರೂ ಸೋಲಿನ ಅಂತರ ಹೆಚ್ಚಾಯಿತೆ ವಿನಃ ಯಾವುದೇ ಲಾಭ ಉಂಟಾಗಲಿಲ್ಲ. ಇನ್ನು ಮಂಗಳೂರು ಲೋಕಸಭಾ ಸ್ಥಾನವನ್ನು ಕಾಂಗ್ರೆಸ್ ಪಕ್ಷ ಮರೆತು ಬಿಡುವುದೇ ಲೇಸು.!

ವಿಧಾನಸಭಾ ಚುನಾವಣೆಯಲ್ಲಿ 8 ರಲ್ಲಿ 7 ಸ್ಥಾನವನ್ನು ದ.ಕ ಜಿಲ್ಲೆಯಲ್ಲಿ ವೈಭೋಗದಿಂದ ಪಡೆದಿದ್ದ ಕಾಂಗ್ರೆಸ್ ಪಕ್ಷ 4 ಉಸ್ತುವಾರಿ ಸಚಿವ ಸ್ಥಾನವನ್ನು ಬಗಲಿಗೆ ಹಾಕಿಕೊಂಡಿತ್ತು. ಕಳೆದ ಬಾರಿ ಫಲಿತಾಂಶ ಕಂಪ್ಲೀಟ್ ಉಲ್ಟಾಪಲ್ಟಾ ಆಗಿದೆ. 8 ರಲ್ಲಿ ಒಂದು ಮಾತ್ರ ಕಾಂಗ್ರೆಸ್ ಖಾತೆಗೆ. ಅದು ಕೂಡ ಉಳ್ಳಾಲದಲ್ಲಿ ಖಾದರ್ ರವರ ವೈಯಕ್ತಿಕ ವರ್ಚಸ್ಸಿನಿಂದ ಕಾಂಗ್ರೆಸ್ ಪಾಲಾಗಿತ್ತು. ಈ ಬಾರಿ ಕಾಂಗ್ರೆಸ್ ಪಕ್ಷದಲ್ಲಿ 8 ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ದಂಡು ಸರಿ-ಸುಮಾರು 100 ರ ಸನಿಹದಲ್ಲಿದ್ದರೂ ಗ್ಯಾರಂಟಿಯಾಗಿ ಪಕ್ಷ ಗೆಲ್ಲುವ ಕ್ಷೇತ್ರ ಇದು ಎಂದು ಹೇಳುವ ಧೈರ್ಯ ಯಾರಿಗೂ ಇಲ್ಲ. ಕಾಂಗ್ರೆಸ್ ಗೆದ್ದಿದ್ದ ಉಳ್ಳಾಲದಲ್ಲು ಕೂಡ ಈ ಬಾರಿ ಟಫ್ ಫೈಟ್ ಏರ್ಪಟ್ಟಿದೆ.

ಪಕ್ಷ ಸಂಘಟಿಸಲು ಜಿಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಅಧ್ಯಕ್ಷ ಅನ್ನುವುದಿದೆ. ಅಧ್ಯಕ್ಷ ಅನ್ನುವವರು ಕ್ಷೇತ್ರ,ಕ್ಷೇತ್ರಕ್ಕೆ ಭೇಟಿ ಕೊಟ್ಟು ಪಕ್ಷವನ್ನು ಸಂಘಟಿಸುವ ಕೆಲಸ ಮಾಡಬೇಕು.ಆದರೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಅಧ್ಯಕ್ಷರೊಬ್ಬರಿದ್ದಾರೆ,ಕಳೆದ 5-6 ವರ್ಷಗಳಿಂದ ಅಧ್ಯಕ್ಷ ಗಾದಿಯಲ್ಲಿ ಬೀಡು ಬಿಟ್ಟಿದ್ದಾರೆಯೇ ಹೊರತು ಪಕ್ಷವನ್ನು ತಳಮಟ್ಟದಲ್ಲಿ ಕಟ್ಟಿ ನಾಯಕರನ್ನು,ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಅಧ್ಯಕ್ಷರಲ್ಲಿರುವ ‘ಅಹಂ’ ನಿಂದ ನಾಯಕರು ಬಿಡಿ ಕಾರ್ಯಕರ್ತರೇ ಹತ್ತಿರ ಸುಳಿಯುತ್ತಿಲ್ಲ. ಇಂತಹ ಅಧ್ಯಕ್ಷರನ್ನು ಈವರೆಗೆ ಕಾಂಗ್ರೆಸ್ ಸಹಿಸಿಕೊಂಡು ಬಂದದ್ದೇ ಒಂದು ಸೋಜಿಗ ಅನ್ನಬೇಕು.

ಕಳೆದ ಒಂದು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಅನೇಕ ಘಟನೆಗಳು ನಡೆದು ಹೋದವು. ಮಸೂದ್, ಪ್ರವೀಣ್, ಫಾಝಿಲ್, ಇದೀಗ ಜಲೀಲ್ ಹತ್ಯಾ ಸರಣಿಗಳು ನಡೆದು ಹೋದವು. ಅವರ ಮನೆಗೆ ತೆರಳಿ ಸಾಂತ್ವನ ಬಿಡಿ, ಕನಿಷ್ಠ ಪಕ್ಷ ಪತ್ರಿಕೆ ಹೇಳಿಕೆಯನ್ನಾದರೂ ನೀಡಬಹುದಿತ್ತು. ಅದನ್ನು ಮಾಡಲಿಲ್ಲ ಈಗಿನ ಅಧ್ಯಕ್ಷರು. ಹಿಜಾಬ್-ಹಲಾಲ್,ಅಲ್ಪಸಂಖ್ಯಾತರ ಮೇಲಿನ ಸರಣಿ ಅನೈತಿಕ ಗೂಂಡಾಗಿರಿ ನಡೆಯುತ್ತಿದ್ದರೂ ತುಟಿಕ್ ಪಿಟಿಕ್ ಅನ್ನುತ್ತಿಲ್ಲ.ಇವರು ಕೇವಲ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಮಾತ್ರವಲ್ಲ ವಿಧಾನಪರಿಷತ್ ಸದಸ್ಯರು ಕೂಡ ಆಗಿದ್ದಾರೆ.ಇವರಿಗೆ ಸದನದಲ್ಲಿ ಈ ಬಗ್ಗೆ ಧ್ವನಿ ಎತ್ತಬಹುದಿತ್ತು ಅದನ್ನು ಮಾಡಿಲ್ಲ.ಕೇವಲ ಸಿದ್ದರಾಮಯ್ಯ, ಯು.ಟಿ ಖಾದರ್, ಜೆಡಿಎಸ್ ಪಕ್ಷದ ಬಿ.ಎಂ ಪಾರೂಕ್ ಇವರುಗಳು ಮಾತ್ರ ಧ್ವನಿಯೆತ್ತಿದರೆ ಸಾಕೇ.? ಹರೀಶ್ ಕುಮಾರ್ ರವರೇ ಮತ್ತೇಕೆ ಅಧ್ಯಕ್ಷ ಹುದ್ದೆ ಜೊತೆ ಜೊತೆಗೆ ಎಂಎಲ್ಸಿ ಪಟ್ಟ. ಕಾಂಗ್ರೆಸ್ ಪಕ್ಷದಲ್ಲಿ ನಿರಂತರ ಹೋರಾಟ ಮಾಡುವ ಅನೇಕ ಮುಖಂಡರಿದ್ದರೂ ಅವರನ್ನೆಲ್ಲ ಮೂಲೆಗೆ ಸರಿಸಿ ಏಕೆ ಎರಡೆರಡು ಹುದ್ದೆ?

ಬಿಲ್ಲವರು ಎಂಬ ಕಾರಣಕ್ಕಾಗಿ ಅವರಿಗೆ ಅಧ್ಯಕ್ಷ ಕಂ ಎಂಎಲ್ಸಿ ಹುದ್ದೆ ನೀಡಲಾಗಿದೆ ಅನ್ನುವ ಮಾತು ಕಾಂಗ್ರೆಸ್ ಪಡಸಾಲೆಯಲ್ಲಿ ಕಾಂಗೈ ನೇತಾರರಿಂದ ಕೇಳಿ ಬರುತ್ತಿದೆ.ತಾವು ಅಧ್ಯಕ್ಷರಾಗಿದ್ದ ಅವಧಿಯಲ್ಲಿ 8 ರಲ್ಲಿ 7 ಅಭ್ಯರ್ಥಿಗಳು ಸೋತು ಮಕಾಡೆ ಮಲಗಿದರು.ಹೋಗಲಿ ಇವರಿಗೆ ವರ್ಚಸ್ಸು ಇದೆ ಅನ್ನುವುದಾದರೆ ಇವರ ತವರೂರಾದ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಗೆಲ್ಲಬಹುದಿತ್ತು.ಅದನ್ನು ಉಳಿಸಲು ಸಾಧ್ಯವಾಗಿಲ್ಲ.ಬೆಳ್ತಂಗಡಿ ಯಲ್ಲಿ ಕಾಂಗ್ರೆಸ್ ಈ ಬಾರಿ ಗೆಲ್ಲುತ್ತದೆ ಎಂದರೆ ಆಶ್ಚರ್ಯದ ವಿಷಯ.ತನ್ನ ತವರು ಕ್ಷೇತ್ರದಲ್ಲಿಯೇ ಅದು ಕೂಡ ಬಿಲ್ಲವ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲಾಗದವರು,ಒಬ್ಬನೇ ಒಬ್ಬ ಸಮರ್ಥ ಬಿಲ್ಲವ ಮುಖಂಡರ ನ್ನಾದರೂ ಸೃಷ್ಟಿಸುತ್ತಿದ್ದರೆ ಅದನ್ನಾದರೂ ನಂಬಬಹುದಿತ್ತು.ಅತ್ತ ತಿರುಗಿ ನೋಡಿಲ್ಲ.ಪಕ್ಷಕ್ಕಾಗಿ ದುಡಿಯುವ,ಸಮರ್ಥ ನಾಯಕತ್ವದ ಎಲ್ಲರನ್ನೂ ಒಗ್ಗಟ್ಟಾಗಿ ಕೊಂಡು ಹೋಗುವ, ಅನ್ಯಾಯವನ್ನು ಜಾತಿ, ಧರ್ಮ ನೋಡದೆ ಮುಲಾಜಿಲ್ಲದೆ ಖಂಡಿಸುವ ನಾಯಕತ್ವ ಜಿಲ್ಲಾ ಕಾಂಗ್ರೆಸ್ ಗೆ ಯಾವಾಗ ದಕ್ಕುತ್ತದೋ ಅಲ್ಲಿಯವರೆಗೆ ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿಯ ಪ್ರಯೋಗಶಾಲೆ ಯಾಗುವುದರಲ್ಲಿ ಸಂಶಯವಿಲ್ಲ. ಮೊದಲು ತಮ್ಮ ಮನೆಯಲ್ಲೇ ಸಮರ್ಥ ನಾಯಕತ್ವ ಹುಟ್ಟು ಹಾಕದೆ ಇದ್ದರೆ ಪಕ್ಕದ್ಮನೆಯವನ ಹಾರಾಟ ಜಾಸ್ತಿ ಇದೆ ಎಂದು ಮನಸ್ಸಿನಲ್ಲಿ ಕೊರಗಿದರೆ ಯಾವ ಪ್ರಯೋಜನ ಇದೆ? ಇದನ್ನಾದರೂ ಅರ್ಥ ಮಾಡಿ ಕೊಂಡರೆ ಒಳ್ಳೆಯದು.