ಮಹಿಳೆ ಮೇಲೆ ಅತ್ಯಾಚಾರ ಕುರಿತು ರಾಹುಲ್ ಆಡಿದ ಮಾತು ಹೆಜ್ಜೆ ಹೆಜ್ಜೆಗೂ ಸಂಕಷ್ಟ ತರುತ್ತಿದೆ. ಈ ಕುರಿತು ಉತ್ತರಿಸುವಂತೆ ದೆಹಲಿ ಪೊಲೀಸರ ನೊಟಿಸ್‌ಗೆ ರಾಹುಲ್ ಉತ್ತರಿಸಿದ್ದಾರೆ. ಆದರೆ ರಾಹುಲ್ ಗಾಂಧಿ ಉತ್ತರ ನೋಡಿದ ದೆಹಲಿ ಪೊಲೀಸರಿಗೆ ಒಂದು ಕ್ಷಣ ಏನೂ ಅನ್ನೋದೇ ಅರ್ಥವಾಗಿಲ್ಲ. ಈ ಉತ್ತರ ಹಿಡಿದು ತನಿಖೆ ಮುಂದುವರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಕಾಶ್ಮೀರದಲ್ಲಿ ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಆಡಿದ ಮಾತು ಇದೀಗ ಕಾಂಗ್ರೆಸ್‌ಗೆ ತೀವ್ರ ತಲೆನೋವು ತಂದಿದೆ. ಮಹಿಳೆಯರ ಮೇಲೆ ಈಗಲೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದ ರಾಹುಲ್ ಗಾಂಧಿ, ಇದಕ್ಕೆ ಎರಡು ಘಟನೆಯನ್ನು ಉದಾಹರಣೆಯಾಗಿ ನೀಡಿದ್ದಾರೆ. ರಾಹುಲ್ ಗಾಂಧಿ ಹೇಳಿಕೆ ದೆಹಲಿ ಪೊಲೀಸರು ಉತ್ತರಿಸುವಂತೆ ನೊಟೀಸ್ ನೀಡಿದ್ದರು. ಇಂದು ರಾಹುಲ್ ಗಾಂಧಿ ನಿವಾಸಕ್ಕೆ ತೆರಳಿದ ಪೊಲೀಸರು ಉತ್ತರ ನೀಡುವಂತೆ ಸೂಚಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ ದೆಹಲಿ ಪೊಲೀಸರಿಗೆ ಉತ್ತರ ನೀಡಿದ್ದಾರೆ. ಆದರೆ ರಾಹುಲ್ ನೀಡಿದ ಉತ್ತರದಲ್ಲಿ ಕಾಶ್ಮೀರದಲ್ಲಿ ಹೇಳಿದ ಅತ್ಯಾಚಾರ ಘಟನೆ ಯಾವುದೇ ಮಾಹಿತಿ ಇಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಇಷ್ಟೇ ಅಲ್ಲ ರಾಹುಲ್ ಉತ್ತರ ಹಿಡಿದು ತನಿಖೆ ನಡೆಸಲು ಸಾಧ್ಯವಿಲ್ಲ ಎಂದಿದ್ದಾರೆ.
ರಾಹುಲ್ ಗಾಂಧಿ ನೀಡಿದ ಉತ್ತರದಲ್ಲಿ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ತಮ್ಮ ಹೇಳಿಕೆ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ. ಹೀಗಾಗಿ ರಾಹುಲ್ ಗಾಂಧಿ ಉತ್ತರ ಅಸಮರ್ಪಕವಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ರಾಹುಲ್ ಗಾಂಧಿ ಮಾತನ್ನು ಸಮರ್ಥಿಸಿಕೊಂಡಿರುವ ಕಾಂಗ್ರೆಸ್, ದೆಹಲಿ ಪೊಲೀಸರ ನಡೆಯನ್ನು ಪ್ರಶ್ನಿಸಿದೆ. ಅದಾನಿ ಪ್ರಕರಣವನ್ನು ಮುಚ್ಚಿಹಾಕಲು, ಜನರ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರ ಇದೀಗ ರಾಹುಲ್ ನಿವಾಸಕ್ಕೆ ಪೊಲೀಸರನ್ನು ಕಳುಹಿಸಿದೆ ಎಂದು ಆರೋಪಿಸಿದೆ.
ದೆಹಲಿ ಪೊಲೀಸರು ದಿಢೀರ್ ರಾಹುಲ್ ನಿವಾಸಕ್ಕೆ ಭೇಟಿ ನೀಡಿ ಮಾಹಿತಿ ಕೇಳಿದ್ದಾರೆ. ಇದರ ಬೆನ್ನಲ್ಲೇ ರಾಹುಲ್ ಅಸಮರ್ಪಕ ಉತ್ತರ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ