ದ.ಕ ಜಿಲ್ಲೆ ಬಿಜೆಪಿಗೆ ಬಿಗ್ ಶಾಕಿಂಗ್.!

ಕರಾವಳಿ

ಶೆಟ್ಟಿ, ಕೋಟ್ಯಾನ್, ಮಠಂದೂರು, ಅಂಗಾರ ಅಭಿಮಾನಿಗಳಲ್ಲಿ ತಳಮಳ.. ಏನಿದು ಲಾಜಿಕ್.?

ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮೊದಲ ಪಟ್ಟಿ ಬಿಡುಗಡೆ ಮಾಡಿ ಚುನಾವಣೆಗೆ ಗ್ರ್ಯಾಂಡ್ ಎಂಟ್ರಿ ಪಡೆದಿದೆ. ಆದರೆ ಈ ಬಾರಿ ಆಡಳಿತಾರೂಢ ಬಿಜೆಪಿ ಕಾದು ನೋಡುವ ತಂತ್ರಕ್ಕೆ ಇಳಿದಿದ್ದು ಕಾಂಗ್ರೆಸ್ ನ ಹೊಸ ಅಭ್ಯರ್ಥಿಗಳಿಗೆ ಟಾಂಗ್ ನೀಡಲು, ಬಿಜೆಪಿಗೆ ಮೈನಸ್ ಇರುವ ಕ್ಷೇತ್ರದಲ್ಲಿ ಹಾಲಿ ಶಾಸಕರನ್ನು ಬದಲಾಯಿಸಿ ಹೊಸ ಅಭ್ಯರ್ಥಿಗಳಿಗೆ ಮಣೆ ಹಾಕುವ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಬಿರುಸಿನ ಚರ್ಚೆ ನಡೆಯುತ್ತಿರುವುದು ಬಿಜೆಪಿ ಕಾರ್ಯಕರ್ತರಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ದ.ಕ ಜಿಲ್ಲೆಯ ಕೆಲವು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸುವ, ಇನ್ನು ಕೆಲವು ಶಾಸಕರ ಕ್ಷೇತ್ರ ಅದಲು ಬದಲಾಗುವ ಸಾಧ್ಯತೆ ಬಗ್ಗೆ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.

ಮಂಗಳೂರು ಉತ್ತರ ಕ್ಷೇತ್ರದಲ್ಲಿ ಹಾಲಿ ಶಾಸಕ ಭರತ್ ಶೆಟ್ಟಿ ಬಿರುಸಿನ ಪ್ರಚಾರದಲ್ಲಿ ತೊಡಗಿದರೂ ಈ ಕ್ಷಣದವರೆಗೂ ಹೈಕಮಾಂಡ್ ಮಟ್ಟದಲ್ಲಿ ಅವರಿಗೆ ಸ್ಥಾನ ಕನ್ ಫರ್ಮ್ ಆಗಿಲ್ಲ ಅನ್ನುವ ಗುಸುಗುಸು ಇದೆ. ಬಿಜೆಪಿ ಗುಪ್ತ ಸರ್ವೆಯಲ್ಲಿ ಭರತ್ ಶೆಟ್ಟಿ ಯವರಿಗೆ ಮತ್ತೆ ಟಿಕೆಟ್ ನೀಡಿದರೆ ಸೋಲುವ ಸಾಧ್ಯತೆ ಇದೆ ಅನ್ನುವ ಮಾಹಿತಿ ಹೊರಬಂದಿದೆ. ಭರತ್ ಶೆಟ್ಟಿ ಯವರನ್ನು ಮುಂದಿನ ಸಂಸದ ಸ್ಥಾನದ ಅಭ್ಯರ್ಥಿ ಮಾಡುವ ಬಗ್ಗೆ ಪಕ್ಷದೊಳಗೆ ಬಿರುಸಿನ ಚರ್ಚೆ ನಡೆಯುತ್ತಿದ್ದು, ಅವರ ಸ್ಥಾನಕ್ಕೆ ಮೂಡುಬಿದಿರೆ ಅಭಿವೃದ್ಧಿಯ ಹರಿಕಾರ ಉಮಾನಾಥ ಕೋಟ್ಯಾನ್ ರನ್ನು ಉತ್ತರದಲ್ಲಿ ಅಭ್ಯರ್ಥಿ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ. ಬಿಲ್ಲವ ಮತದಾರರು ಉತ್ತರದಲ್ಲಿ ಭಾರೀ ಪ್ರಮಾಣದಲ್ಲಿ ಬಿಜೆಪಿಗೆ ಕೈ ಕೊಡುವ ಸಾಧ್ಯತೆ ಇರುವುದರಿಂದ ಉತ್ತರದಲ್ಲಿ ಬಿಲ್ಲವ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ.

ಇನ್ನೂ ಮೂಡುಬಿದಿರೆ ಕ್ಷೇತ್ರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ರನ್ನು ಕಣಕ್ಕಿಳಿಸುವ ಸಾಧ್ಯತೆ ದಟ್ಟವಾಗಿದೆ. ಕಳೆದ ಬಾರಿ ಆಕಾಂಕ್ಷಿಯಾಗಿದ್ದರೂ ಕೊನೆ ಕ್ಷಣದಲ್ಲಿ ಟಿಕೆಟ್ ಕೋಟ್ಯಾನ್ ಪಾಲಾಗಿತ್ತು.

ಪುತ್ತೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಸಂಜೀವ ಮಠಂದೂರು ಕಾರ್ಯವೈಖರಿ ಬಗ್ಗೆ ಬಿಜೆಪಿಯಲ್ಲಿಯೇ ದೊಡ್ಡ ಅಸಮಾಧಾನವಿದೆ. ಸಾಫ್ಟ್ ವ್ಯಕ್ತಿಯಾಗಿರುವ ಮಠಂದೂರು ಬದಲಾಯಿಸಿ ಯಂಗ್ ಅಂಡ್ ಡೈನಾಮಿಕ್ ವ್ಯಕ್ತಿಯನ್ನು ಕಣಕ್ಕಿಳಿಸುವಂತೆ ಬಿಜೆಪಿಯ ಒಂದು ಬಣ ಹೈಕಮಾಂಡ್ ಗೆ ಒತ್ತಾಯಿಸುತ್ತಾ ಬಂದಿದೆ.

ಇನ್ನೂ ಸುಳ್ಯದಲ್ಲಿ ಆರು ಬಾರಿ ಶಾಸಕ, ಸಚಿವರಾಗಿರುವ ಅಂಗಾರ ರಿಗೆ ಈ ಬಾರಿ ಕೊಕ್ ನೀಡಿ ಹೊಸಬರನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಾಗಿದೆ.

ಮಂಗಳೂರು (ಉಳ್ಳಾಲ) ದಲ್ಲಿ ಕೃಷ್ಣ ಪಾಲೇಮಾರ್ ಹೆಸರು ಜೋರಾಗಿ ಕೇಳಿ ಬರುತ್ತಿದ್ದರೂ, ಕೊನೆ ಕ್ಷಣದವರೆಗೂ ಅಭ್ಯರ್ಥಿ ಯಾರಾಗಬಹುದು ಅನ್ನುವ ಕುತೂಹಲವಿದೆ.

ಬಿಜೆಪಿ ಹೈಕಮಾಂಡ್ ನ ಇಂತಹ ಅನಿರೀಕ್ಷಿತ ನಿರ್ಧಾರದ ಬಗ್ಗೆ ಚರ್ಚೆ ಆಗುತ್ತಿರುವುದು ಹಾಲಿ ಬಿಜೆಪಿ ಶಾಸಕರು, ಅವರ ಅಭಿಮಾನಿಗಳಲ್ಲಿ ಭಾರೀ ತಳಮಳಕ್ಕೆ ಕಾರಣವಾಗಿದೆ. ಗುಜರಾತ್ ಪ್ರಯೋಗ ಹೆಸರಿನಲ್ಲಿ ಬಿಜೆಪಿ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4 ಸ್ಥಾನಗಳಲ್ಲಿ ಭಾರೀ ಬದಲಾವಣೆ ಮಾಡುವ ಸಾಧ್ಯತೆ ಇರುವುದರಿಂದ, ಕಾರ್ಯಕರ್ತರು ತಮ್ಮ ಕ್ಷೇತ್ರಕ್ಕೆ ಅಭ್ಯರ್ಥಿ ಯಾರಾಗಬಹುದು ಅನ್ನುವುದರಲ್ಲಿ ದಿನದೂಡುತ್ತಿದ್ದಾರೆ. ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಮಾಡಿ ಅಧಿಕೃತವಾಗಿ ಚುನಾವಣಾ ರಾಜಕೀಯದಲ್ಲಿ ಮೊದಲ ಯಶಸ್ಸು ಸಾಧಿಸಿದೆ. ಆದರೆ ಇದೀಗ ಬಿಜೆಪಿಯಲ್ಲೂ ಮೇಜರ್ ಸರ್ಜರಿ ನಡೆಯುವ ಬಗ್ಗೆ ಪಕ್ಷದೊಳಗೆ ಚರ್ಚೆ ಆಗುತ್ತಿರುವುದರಿಂದ ಕಾರ್ಯಕರ್ತರಲ್ಲಿ ಗೊಂದಲ ಮನೆ ಮಾಡಿದೆ. ಈ ಪ್ರಯೋಗ ಯಶಸ್ವಿಯಾಗುತ್ತದೋ ಅಥವಾ ಮತ್ತೆ ಅದೇ ಮುಖಕ್ಕೆ ಟಿಕೆಟ್ ನೀಡುತ್ತದೊ ಎಂಬುದು ಪಟ್ಟಿ ಬಿಡುಗಡೆ ನಂತರ ತಿಳಿದುಬರಲಿದೆ. ಕಾರ್ಯಕರ್ತರಲ್ಲಿ ಭಾರೀ ಆತಂಕ, ಕುತೂಹಲ ಇರುವುದಂತೂ ಮಾತ್ರ ಸುಳ್ಳಲ್ಲ.