ಮಂಗಳೂರು: ಕಂದಾವರ ಗ್ರಾಮದ ಅಕ್ರಮ ಗಣಿಗಾರಿಕೆಗೆ ಅಧಿಕಾರಿಗಳ ಧಾಳಿ. ವಾಹನ ಸಮೇತ ಕಟ್ಟಿಂಗ್ ಮೆಷೀನ್ ವಶ

ಕರಾವಳಿ

BIG IMPACT

ಕಂದಾಯ ಇಲಾಖೆಯ ಅಧಿಕಾರಿಗಳು, ಭೂ ದಾಖಲೆಗಳ ಸಹಾಯಕ ನಿರ್ದೇಶಕರುಗಳು, ಭೂಮಾಪನ ಇಲಾಖೆಯ ಅಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಕಂದಾವರ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಜಂಟಿ ದಾಳಿ.ಅಕ್ರಮ ಮಣ್ಣು ಮಾಫಿಯಾದ ವಿರುದ್ದ ಸ್ಪೆಷಲ್ ನ್ಯೂಸ್ ಮೀಡಿಯಾದಲ್ಲಿ ವರದಿ ಪ್ರಕಟವಾಗಿತ್ತು.

ಮಂಗಳೂರು ತಾಲೂಕಿನ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂದಾವರ ಪದವು ಸರ್ವೆ ಸಂಖ್ಯೆ 104 ರ ಜಮೀನಿನಲ್ಲಿ ಜನ ವಸತಿ ಪ್ರದೇಶದ ಸಮೀಪ ಕೆಂಪು ಕಲ್ಲು ಕಲ್ಲಿನ ಗಣಿಗಾರಿಕೆ ನಡೆಯುತ್ತಿದ್ದು, ಸದರಿ ಗಣಿಗಾರಿಕೆಯಲ್ಲಿ ಕ್ರಷರ್ ಯಂತ್ರಗಳನ್ನು ಬಳಸಿ ಹಗಲು, ರಾತ್ರಿ ಎನ್ನದೆ ಗಣಿಗಾರಿಕೆ ಮಾಡಿ ಕೆಂಪು ಕಲ್ಲು ಮತ್ತು ಮಣ್ಣನ್ನು ಸೂಕ್ತ ಸುರಕ್ಷತೆಯ ನಿಯಮಗಳನ್ನು ಪಾಲನೆ ಮಾಡದೇ ಬೃಹತ್ತ್ ಗಾತ್ರದ ವಾಹನ ಬಳಸಿ ಜನವಸತಿ ಪ್ರದೇಶಗಳ ರಸ್ತೆಗಳ ಮೂಲಕವೇ ಹೊರಗಡೆ ಸಾಗಿಸುತ್ತಿದ್ದರು.ಇದರಿಂದ ಸಮೀಪದ ನಿವಾಸಿಗಳಲ್ಲಿ ಅದರಲ್ಲೂ ಮುಖ್ಯವಾಗಿ ಮಕ್ಕಳಿಗೆ, ವಯೋವೃದ್ಧರಿಗೆ, ಗರ್ಭಿಣಿ ಮಹಿಳೆಯರಿಗೆ ಶ್ವಾಸಕೋಶ ಸಂಬಂಧಿತ ಅನಾರೋಗ್ಯ ಸಮಸ್ಯೆಗಳು ಕಂಡು ಬರುತ್ತಿದ್ದು, ಗ್ರಾಮಸ್ಥರ ಆರೋಗ್ಯ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಸದ್ರಿ ಗಣಿಗಾರಿಕೆಯನ್ನು ತಕ್ಷಣ ನಿಲ್ಲಿಸುವಂತೆ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಸದ್ರಿ ಗಣಿಗಾರಿಕೆಯು ಯಾವುದೋ ಇತರ ಉದ್ದೇಶದ ಅನುಮತಿ ಪಡೆದು ಅಕ್ರಮವಾಗಿ ಕೆಂಪು ಕಲ್ಲಿನ ಗಣಿಗಾರಿಕೆ ನಿರ್ವಹಿಸುತ್ತಿರುವ ಬಗ್ಗೆ ಸಂಶಯವಿದ್ದು,ಸಂಬಂಧ ಪಟ್ಟವರು ಈ ಬಗ್ಗೆ ಪರಿಶೀಲಿಸಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಸಂಬಂದ ಪಟ್ಟ ಇಲಾಖೆಗಳಿಗೆ ದೂರು ನೀಡಿದ್ದರು.

ಪರಿಸರದ ನಾಗರಿಕರ ದೂರಿನನ್ವಯ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕು ಗುರುಪುರ ಹೋಬಳಿಯ ಕಂದಾವರ ಪದವು ಗ್ರಾಮದ ಸರ್ವೆ ನಂಬರ್ 104, 138 ರ ಪ್ರದೇಶದಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರ ಆದೇಶದಂತೆ 19-05-2023 ರಂದು ಕಂದಾಯ ಇಲಾಖೆಯ ಅಧಿಕಾರಿಗಳು, ಭೂ ದಾಖಲೆಗಳ ಸಹಾಯಕ ನಿರ್ದೇಶಕರುಗಳು, ಭೂ ಮಾಪನ ಇಲಾಖೆಯ ಅಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಕಂದಾವರ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಜಂಟಿಯಾಗಿ ಗ್ರಾಮಸ್ಥರ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಸಿ ಮಹಜರು ತಯಾರಿಸಿರುತ್ತಾರೆ.

ಕಂದಾಯ ಇಲಾಖೆಯನ್ನು ವಿಚಾರಿಸಿದಾಗ ಸದ್ರಿ ಪ್ರದೇಶದ ಸರ್ವೇ ನಂಬ್ರ 104 ಹಾಗೂ 138 ರ ಪ್ರದೇಶ ಎಂಬುದಾಗಿ ತಿಳಿದುಬಂದಿರುತ್ತದೆ ಹಾಗೂ ಈ ಪ್ರದೇಶದಲ್ಲಿ ಈಗಾಗಲೇ ಕೆಂಪು ಕಲ್ಲು ಹಾಗೂ ಮಣ್ಣನ್ನು ತೆಗೆದು ಸಮತಟ್ಟು ಮಾಡಿರುವ ಪ್ರದೇಶ, ಸಮತಟ್ಟು ಮಾಡುತ್ತಿರುವ ಪ್ರದೇಶ ಹಾಗೂ ಮಣ್ಣನ್ನು ಮತ್ತು ಅನುಪಯುಕ್ತ ಕಲ್ಲುಗಳನ್ನು ಇಳಿಜಾರಾದ ಪ್ರದೇಶದಲ್ಲಿ ದಾಸ್ತಾನು ಇಡುವುದು ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಕಂಡುಬಂದಿರುತ್ತದೆ. ತಾಲೂಕು ಸರ್ವೇಯರ್ ಗಳು ಈ ಪ್ರದೇಶಗಳನ್ನು ಪ್ರತ್ಯೇಕವಾಗಿ ಅಳತೆಯಿಂದ ಗುರುತಿಸಿ ಸರ್ವೇ ಕಾರ್ಯವನ್ನು ಪೂರ್ಣಗೊಳಿಸಿರುತ್ತಾರೆ ಹಾಗೂ ನಕಾಶೆಯನ್ನು ಸಿದ್ಧಪಡಿಸಿ ನೀಡುವುದಾಗಿ ತಿಳಿಸಿರುತ್ತಾರೆ. ಪ್ರಸ್ತುತ ಸಮತಟ್ಟು ಮಾಡುತ್ತಿರುವ ಪ್ರದೇಶದಲ್ಲಿ ಕೆಂಪು ಕಲ್ಲು ತೆಗೆದು ಸಾಗಾಟ ಮಾಡುತ್ತಿರುವುದು ಕೂಡ ಈ ಸಂದರ್ಭದಲ್ಲಿ ಕಂಡು ಬಂದಿರುತ್ತದೆ. ಸ್ಥಳದಲ್ಲಿದ್ದ ಕೆಎ 19 ಎಡಿ 6539 ವಾಹನ ಹಾಗೂ ಕಟ್ಟಿಂಗ್ ಮೆಷಿನ್ ನನ್ನು ಇಲಾಖೆ ವಶಕ್ಕೆ ಪಡೆದಿರುತ್ತಾರೆ. ಸದ್ರಿ ಸ್ಥಳದಿಂದ ಸರಿ-ಸುಮಾರು 100 ಮೆಟ್ರಿಕ್ ಟನ್ನಿನಷ್ಟು ಖನಿಜಾಂಶಗಳನ್ನು ಸಾಗಾಟ ಮಾಡಿರುವುದಾಗಿ ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುತ್ತಾರೆ. ಮುಂದಿನ ಕ್ರಮಕ್ಕೆ ಸಂಬಂದ ಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿರುತ್ತಾರೆ. ಸದ್ಯಕ್ಕೆ ಸಾರ್ವಜನಿಕರು ನಿಟ್ಟುಸಿರು ಬಿಟ್ಟಂತಾಗಿದೆ.