ಕೈಕಂಬ: ಕೈಕಂಬದಿಂದ ಮರ್ಕಝ್ ನಗರಕ್ಕೆ ಹೋಗುವ ರಾಜ ರಸ್ತೆಯ ಪಕ್ಕದಲ್ಲೇ ಪ್ಲಾಸ್ಟಿಕ್, ಮನೆ ಕಸ, ಹೋಟೆಲ್ ತ್ಯಾಜ್ಯ ಸೇರಿದಂತೆ ವಿವಿಧ ರೀತಿಯ ಕಸಗಳ ರಾಶಿ ಬಿದ್ದು ದುರ್ವಾಸನೆ ಬೀರುತ್ತಿರುವ ಸಮಸ್ಯೆಯಿಂದ ಪರಿಸರದ ನಿವಾಸಿಗಳಿಗೆ ಬಹಳ ತೊಂದರೆಯಾಗುತ್ತಿತ್ತು. ಹಲವು ಸಮಯಗಳಿಂದ ಕಸ ವಿಲೇವಾರಿ ಮಾಡಿಲ್ಲ. ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾಗಿತ್ತು. ಇದು ಅಸಹ್ಯವಾಗಿ ಕಾಣುತ್ತಿತ್ತು. ಈ ಕುರಿತು ಸ್ಪೆಷಲ್ ನ್ಯೂಸ್ ಮೀಡಿಯಾ ಸಚಿತ್ರ ವರದಿಯನ್ನು ಪ್ರಕಟಿಸಿತ್ತು. ಇದೀಗ ಗಂಜಿಮಠ ಗ್ರಾಮ ಪಂಚಾಯತಿನ ಜನಪ್ರತಿನಿದಿಗಳು ಈ ಸಮಸ್ಯೆಗೆ ಸ್ಪಂದಿಸಿ, ಮುರ್ತುವರ್ಜಿ ವಹಿಸಿ ತ್ಯಾಜ್ಯವನ್ನು ವಿಲೇವಾರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಜನರ ದೂರಿಗೆ ಕಾಳಜಿ ವಹಿಸಿ ಪರಿಸರವನ್ನು ಶುಚಿಗೊಳಿಸಿ ನಾಗರಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪಂಚಾಯತ್ ಅಧ್ಯಕ್ಷರಾದ ನೊಣಯ್ಯ ಪೂಜಾರಿ ನೇತ್ರತ್ವದಲ್ಲಿ ಬಡಗುಳಿಪಾಡಿ 3ನೇ ವಾರ್ಡಿನ ಸದಸ್ಯೆ ಅನಿತಾ ನೋಬರ್ಟ್ ಡಿಸೋಜ ಮತ್ತು ಇತರ ಸದಸ್ಯರ ಈ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.

ಕೈಕಂಬ-ಮಳಲಿ ರಸ್ತೆಯ ನಡುವೆ ಇರುವ ಅಸ್ರಾರ್ ನಗರ, ಮರ್ಕಝ್ ನಗರ ಈ ಪ್ರದೇಶದ ಬಳಿ ಇಂತಹ ಸಮಸ್ಯೆ ಎದುರಾಗಿದೆ. ಬೇಡದ ಕಸಗಳನ್ನು ರಾತ್ರಿ ಹೊತ್ತು ಬೈಕುಗಳಲ್ಲಿ, ಅಟೋ ರಿಕ್ಷಾಗಳಲ್ಲಿ ತಂದು ಇಲ್ಲಿ ಸುರಿದು ಹೋಗುತ್ತಿದ್ದರು.ಇದೀಗ ಪರಿಸರದ ನಿವಾಸಿಗಳು ಅ ಪರಿಸರದಲ್ಲಿ ಗುಪ್ತ ಕ್ಯಾಮರ ಅಳವಡಿಸಿ ರಾತ್ರಿ-ಹಗಲು ಎನ್ನದೆ ಕಸ ಬಿಸಾಡಿ ಹೋಗುವವರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಹೊಂಚು ಹಾಕಿ ಕುಳಿತಿದ್ದಾರೆ.