ರುಚಿ ಗೋಲ್ಡ್ ಗೆ ಬೀಗ ಜಡಿಯಿರಿ, ಭ್ರಷ್ಟ ಪರಿಸರ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ, ಜೀವ ನದಿ ಪಲ್ಗುಣಿ, ತುಳುನಾಡ ಪರಿಸರ ಉಳಿಸಿ

ಕರಾವಳಿ

ಇದು ಜೋಕಟ್ಟೆ ಸಮೀಪ ಇರುವ ರುಚಿ ಗೋಲ್ಡ್ (ಬಾಬಾ ರಾಮ್ ದೇವ್ ಮಾಲಕತ್ವದ) ಕಂಪೆನಿ ಪಲ್ಗುಣಿ ನದಿಗೆ ಕೈಗಾರಿಕಾ ತ್ಯಾಜ್ಯದ ವಿಷ ಹರಿಸುತ್ತಿರುವುದಕ್ಕೆ ಸಾಕ್ಷ್ಯ ಒದಗಿಸುವ ಚಿತ್ರ.

ನಾಗರಿಕ ಹೋರಾಟ ಸಮಿತಿಯ ಸತತ ದೂರು, ಪ್ರತಿಭಟನೆಗಳು, ಕೆಲವು ಮಾಧ್ಯಮಗಳ ಜವಾಬ್ದಾರಿಯುತ ವರದಿ ಕಾರಣಕ್ಕೆ ಪಲ್ಗುಣಿ ನದಿ ಹಾಗೂ ತೋಕೂರು ಹಳ್ಳಕ್ಕೆ MRPL, Sez, ಅದಾನಿ ವಿಲ್ಮರ್, ರುಚಿಗೋಲ್ಡ್ ಸೇರಿದಂತೆ ಹಲವು ಉದ್ಯಮಗಳು ಕೈಗಾರಿಕಾ ತ್ಯಾಜ್ಯ ಹರಿಸಿ ನದಿ ಹಾಗೂ ಪರಿಸರವನ್ನು ವಿಷಮಯಗೊಳಿಸುವ ವಿಷಯ ಹಸಿರು ಪೀಠದ ಗಮನಕ್ಕೆ ಬರುವಂತಾಯ್ತು. ಆ ಕಾರಣದಿಂದ ಜಿಲ್ಲಾಡಳಿತ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ಉದ್ಯಮಗಳ ಮೇಲೆ ಕಟುವಾದ ಕ್ರಮಕ್ಕಾಗಿ ನೋಟೀಸುಗಳು ಬಂದಿದೆ.

ಇಷ್ಟಾದರು ತುಳುನಾಡಿನ ನದಿ, ಸಮುದ್ರಗಳನ್ನು ಪೂರ್ತಿಯಾಗಿ ನಾಶ ಪಡಿಸುತ್ತಿರುವ ಬೇಜವಾಬ್ದಾರಿ ಕೈಗಾರಿಕೆಗಳ ಮೇಲೆ ಯಾವುದೇ ನಿರ್ಣಾಯಕ ಕ್ರಮಗಳು ಜರುಗಿಲ್ಲ. ಬಾಬಾ ರಾಮದೇವ್ ಮಾಲಕತ್ವದ ರುಚಿಗೋಲ್ಡ್ ಕೈಗಾರಿಕೆಯಂತೂ ತೀರಾ ದುರಹಂಕಾರದಿಂದ ನಡೆದುಕೊಳ್ಳುತ್ತಿದ್ದು, ತೋಕೂರು ಹಳ್ಳದ ಮೂಲಕ ನೇರವಾಗಿ ಪಲ್ಗುಣಿ ನದಿಗೆ ಮಾರಕ ಕೈಗಾರಿಕಾ ತ್ಯಾಜ್ಯವನ್ನು ಬಹಿರಂಗವಾಗಿ ಹರಿಸುತ್ತಿದೆ.

ಈ ಕುರಿತು ದೂರಿನ ಆಧಾರದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಎರಡು ದಿನಗಳ ಹಿಂದೆ ಸ್ಥಳ ಪರಿಶೀಲನೆ ಮಾಡಿದ್ದು, ಮಾರಕ ತ್ಯಾಜ್ಯವನ್ನು ದೊಡ್ಡ ಪ್ರಮಾಣದಲ್ಲಿ ತೋಕೂರು ಹಳ್ಳಕ್ಕೆ ಹರಿಸುತ್ತಿರುವುದನ್ನು ಗುರುತಿಸಿದ್ದಾರೆ. ಸಿಕ್ಕಿರುವ ಸಾಕ್ಷ್ಯಾಧಾರಗಳು ತಕ್ಷಣವೇ ರುಚಿಗೋಲ್ಡ್ ಗೆ ಬೀಗ ಜಡಿಯುವಷ್ಟು ಗಂಭೀರಾವಾಗಿದೆ ಎಂಬುದನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳೇ ಒಪ್ಪುತ್ತಾರೆ.

ಅಧಿಕಾರಿಗಳು ಮಾತ್ರ ರುಚಿ ಗೋಲ್ಡ್ ಆಡಳಿತಕ್ಕೆ ಮೌಕಿಕವಾಗಿ ವಿಷಯದ ಗಂಭೀರತೆ ತಿಳಿಸಿದ್ದು, ಕಂಪೆನಿ ಎರಡು ದಿನಗಳ ತರುವಾಯ ಇಂದು (2. 6. 2023) ತೋಕೋರು ಹಳ್ಳದಲ್ಲಿ ಶೇಖರಣೆಗೊಂಡಿರುವ (ಬಹುತೇಕ ಹರಿದು ಪಲ್ಗುಣಿ ನದಿ, ಆ ಮೂಲಕ ಅರಬ್ಬಿ ಸಮುದ್ರ ಸೇರಿದೆ) ಮಾರಕ ತ್ಯಾಜ್ಯವನ್ನು ಸಂಗ್ರಹಿಸಿ ಬೇರೆಡೆಗೆ ಸಾಗಿಸುತ್ತಿದೆ. ಆ ಮೂಲಕ ಎಲ್ಲರೂ ಸೇರಿ ಹಸಿರು ಪೀಠ, ಪರಿಸರ ನಿಯಮ ಹಾಗೂ ಜನತೆಯ ಕಣ್ಣಿಗೆ ಮಣ್ಣೆರಚುವ ಕಾರ್ಯ ಮಾಡುತ್ತಿದ್ದಾರೆ.

ಸ್ಥಳೀಯ ಶಾಸಕರು ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು ತುಳುನಾಡಿನ ಭವಿಷ್ಯವನ್ನೇ ಮುಳುಗಿಸುತ್ತಿರುವ ಗಂಭೀರವಾದ ಕೈಗಾರಿಕಾ ಮಾಲಿನ್ಯದ ಕುರಿತು ತಲೆಕೆಡಿಸಿಕೊಳ್ಳುತ್ತಿಲ್ಲ. ತುಳುನಾಡಿನ ಜನತೆ ಹಾಗೂ ಮಾಧ್ಯಮಗಳಾದರು ನಮ್ಮ ಜೀವನದಿ, ಸಮುದ್ರವನ್ನು ನಾಶಪಡಿಸುತ್ತಿರುವ ಕೈಗಾರಿಕೆಗಳು, ಕಂಪೆನಿಗಳೊಂದಿಗೆ ಕೈ ಜೋಡಿಸಿರುವ ಅಧಿಕಾರಿ ವರ್ಗ, ಜನಪ್ರತಿನಿಧಿಗಳ ವಿರುದ್ದ ಪ್ರಬಲ ಧ್ವನಿ ಎತ್ತಲೇಬೇಕಿದೆ.

ಈ ಸಲ ತಿಪ್ಪೆ ಸಾರಿಸುವ ಯತ್ನ ಬೇಡ. ರುಚಿ ಗೋಲ್ಡ್ (ತಾಳೆ ಎಣ್ಣೆ ಘಟಕ) ಕ್ಕೆ ಬೀಗ ಜಡಿಯಲೇ ಬೇಕು. ಅದು ಉಳಿದ ಬೇಜವಾಬ್ದಾರಿ ಕೈಗಾರಿಕೆಗಳಿಗೆ ಪಾಠ ಆಗಬೇಕು. ತುಳುನಾಡಿನ ಯುವಜನರಿಗೆ ಉದ್ಯೋಗವನ್ನೂ ನಿರಾಕರಿಸಿ, ನೆಲ ಜಲವನ್ನೂ ನಾಶ ಪಡಿಸುವ ಇಂತಹ ಖತರ್ ನಾಕ್ ಉದ್ಯಮಗಳಿಗೆ ಸರಿಯಾದ ಶಿಕ್ಷೆ ಆಗಲೇಬೇಕು ಎಂದು “ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ” ಆಗ್ರಹಿಸುತ್ತದೆ. ಸರಿಯಾದ ಕ್ರಮಗಳು ಆಗದಿದ್ದಲ್ಲಿ ತೀವ್ರ ಹೋರಾಟವನ್ನು ನಡೆಸಲಿದೆ.

ಮುನೀರ್ ಕಾಟಿಪಳ್ಳ,
ಸಂಚಾಲಕರು, ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ