ನೂರ್ ಸಾಬ್ರ ನೂರೊಂದು ಕತೆ.!!
ಪಡುಪೆರಾರ ಗ್ರಾಮ ಪಂಚಾಯತ್ ಸದಸ್ಯ ನೂರ್ ಅಹಮದ್ ಎಂಬವರ ಮೇಲೆ ಗುತ್ತಿಗೆದಾರ ಮತ್ತು ಸ್ಥಳೀಯ ಬಿಜೆಪಿ ಮುಖಂಡನೊಬ್ಬ ಕಬ್ಬಿಣದ ರಾಡ್ ನಿಂದ ಗಂಭೀರ ಹಲ್ಲೆ ನಡೆಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯವಾಗಿ ವ್ಯಾಪಕ ತಿರುವು ದೊರೆಯುತ್ತಿದ್ದು, ವೈಯಕ್ತಿಕ ಕಾರಣಕ್ಕಾಗಿ ನಡೆದ ಗಲಾಟೆಯನ್ನು ಕಾಂಗ್ರೆಸ್-ಬಿಜೆಪಿ, ಭಜರಂಗದಳ ಎಂಬ ರೀತಿಯಲ್ಲಿ ತಿರುಚಲು ಹುನ್ನಾರ ನಡೆದಿದೆ ಅನ್ನುವ ಅಭಿಪ್ರಾಯ ಇದೀಗ ಸ್ಥಳೀಯರಿಂದ ಪ್ರಬಲವಾಗಿ ಕೇಳಿ ಬರುತ್ತಿದೆ.ಒಟ್ಟಾರೆ ಪಡುಪೆರಾರ ಗ್ರಾಮ ಪಂಚಾಯತ್ ಸದಸ್ಯರ ಮೇಲೆ ನಡೆದ ಹಲ್ಲೆಯ ಘಟನೆಯ ಹಿಂದೆ ಬೇರೆಯದ್ದೇ ಕಾರಣ ಇರುವುದಾಗಿ ಇದರ ಸತ್ಯಾಸತ್ಯತೆಗಳು ಇದೀಗ ತಿಳಿದುಬಂದಿದೆ.
ಕೊರಕಂಬ್ಳ ವಾರ್ಡ್ ಸದಸ್ಯ ನೂರ್ ಸಾಬ್ರ ಮೇಲೆ ನೂರ್ ಬಾಗ್ ನಲ್ಲಿ ನಡೆದ ಹಲ್ಲೆಯ ಹಿಂದಿನ ಕಾರಣ ಹುಡುಕುತ್ತಾ ಹೋದರೆ ಘಟನೆಗೆ ವ್ಯಾಪಕ ತಿರುವು ದೊರೆಯುತ್ತಿದೆ. ಕೊರಕಂಬ್ಳ ವಾರ್ಡ್ ನಲ್ಲಿ ನೂರ್ ಸಾಬ್ರುರವರ ಸಮುದಾಯಕ್ಕೆ ಸೇರಿದ ಮುಸ್ಲಿಂ ವ್ಯಕ್ತಿಯೊಬ್ಬರ ಬಹು ಮಹಡಿ ಕಟ್ಟಡವೊಂದು ತಲೆಯೆತ್ತುತ್ತಿದ್ದು, ಅದಕ್ಕೆ ಸಂಬಂಧಿಸಿದ 5.75 ಸೆಂಟ್ಸ್ ಜಾಗದ ಕನ್ವರ್ಷನ್, ಏಕ ವಿನ್ಯಾಸ ನಕ್ಷೆ ಸೇರಿದಂತೆ ವಿವಿಧ ದಾಖಲೆಗಳನ್ನು ಪತ್ರಗಳನ್ನು ಸರಿ-ಸುಮಾರು ಸುಮಾರು 70,000 ರೂಪಾಯಿ ಪಡೆದುಕೊಂಡು ಇದೇ ನೂರ್ ಸಾಬ್ರು ಮಾಡಿಕೊಟ್ಟಿದ್ದರಂತೆ. ಮೌಖಿಕವಾಗಿ ಇದೇ ನೂರ್ ಸಾಬ್ರುರವರಿಗೆ ಈ ಜಾಗದ ಒಡೆಯ ತನ್ನ ಕಟ್ಟಡವನ್ನು ನಿರ್ಮಿಸುವಂತೆ ಸೂಚಿಸಿದ್ದರು ಎನ್ನಲಾಗಿದೆ. ಆದರೆ ಏನೊ ಎಡವಟ್ಟಿನಿಂದ ನೂರ್ ಸಾಬ್ರನ್ನು ಅವರು ದೂರ ಮಾಡಿದರು ಎನ್ನಲಾಗಿದೆ. ತದ ನಂತರ ಕಟ್ಟಡದ ಗುತ್ತಿಗೆಯನ್ನು ಬಜಪೆ ಪರಿಸರದ ಇಂಜಿನಿಯರ್ ‘ಕಂ’ ಗುತ್ತಿಗೆದಾರ ರಾಘವೇಂದ್ರ ಎಂಬವರಿಗೆ ವಹಿಸಲಾಗಿತ್ತು. ಈ ಜಾಗದ ಮಾಲಿಕರು ಸಮಾಜ ಸೇವಕರು,ಸಾದು ಸ್ವಭಾವದ ವ್ಯಕ್ತಿ ಮಾತ್ರವಲ್ಲದ ಕೊಡುಗೈ ಧಾನಿಯೂ ಆಗಿದ್ದಾರೆ. ಮಳೆಗಾಲ ಬರುವ ಮುಂಚೆ ಅಡಿಪಾಯ ಹಾಕಿ ಬಿಡುವ ತರಾತುರಿಯಲ್ಲಿ ಪಂಚಾಯತ್ ನಿಂದ ಪರವಾನಿಗೆ ಪಡೆಯದೆ ಕೆಲಸ ಆರಂಭಿಸಿದರು. ಇದೇ ಅವರು ಮಾಡಿರುವ ಮಹಾ ದೊಡ್ಡ ತಪ್ಪು.

ಪಂಚಾಯತ್ ನಿಂದ ಯಾವುದೇ ಅನುಮತಿ ಪಡೆಯದೆ ಕಟ್ಟಡ ನಿರ್ಮಾಣಕ್ಕೆ ತೊಡಗಿದ್ದರು. ಈ ಸಂಬಂಧ ಯಾರೋ ಅನಧಿಕೃತವಾಗಿ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂದು ಪಂಚಾಯತ್ ಗೆ ದೂರು ಕೂಡ ನೀಡಿದ್ದರು. ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಸೇರಿದ ಕಟ್ಟಡ ನಿರ್ಮಾಣದ ಗುತ್ತಿಗೆಯನ್ನು ಕಾಂಟ್ರಾಕ್ಟರ್ ರಾಘವೇಂದ್ರ ಆಚಾರ್ ಎಂಬವರು ನಡೆಸುತ್ತಿದ್ದು, ಇವರಿಗೆ ಸಹಕಾರಿಯಾಗಿ ಮಿತ್ರ ಬಿಜೆಪಿ ಮುಖಂಡ ರಾಜೇಶ್ ಎಂಬವರು ಕೈ ಜೋಡಿಸಿದ್ದರು. ಬಿಜೆಪಿ ಮುಖಂಡರಾದ ರಾಜೇಶ್ ಸಾಲ್ಯಾನ್, ನೂರ್ ಅಹಮದ್ ವಿರುದ್ಧ ಸ್ಪರ್ಧಿಸಿ ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕೇವಲ 40 ಮತಗಳ ಅಂತರದಿಂದ ಸೋತ ವ್ಯಕ್ತಿಯಾಗಿದ್ದರು. ಇವರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರೂ,ಸ್ಥಳೀಯವಾಗಿ ಹಿಂದೂ-ಮುಸ್ಲಿಂ ರೊಂದಿಗೆ ಅನ್ಯೊನ್ಯತೆಯಲ್ಲಿ ಉಳ್ಳವರು.ಈ ವಾರ್ಡ್ ನಲ್ಲಿ ಬಹು ಸಂಖ್ಯಾತ ಮುಸ್ಲಿಮರು ರಾಜೇಶ್ ರವರೊಂದಿಗೆ ಗಟ್ಟಿಯಾಗಿ ನಿಂತಿದ್ದರು. ರಾಜೇಶ್ ಒಬ್ಬ ಸ್ನೇಹ ಜೀವಿಯಾಗಿದ್ದು ಪರೋಪಕಾರದ ವ್ಯಕ್ತಿ. ಯಾವುದೇ ಕ್ರಿಮಿನಲ್ ಹಿನ್ನೆಲೆ,ಕೋಮು ಭಾವನೆ ಇಲ್ಲದ ವ್ಯಕ್ತಿಯಾಗಿದ್ದಾರೆ ಎಂದು ಅ ಪರಿಸರದ ಜನರ ಅಭಿಪ್ರಾಯ.
ಸದ್ರಿ ಕಟ್ಟಡದ ಮಾಲಿಕರು ಮಾಡಿದ ತಪ್ಪೆಂದರೆ ಕಟ್ಟಡ ನಿರ್ಮಿಸಲು ಮುಂದಾದಾಗ ಪಂಚಾಯತ್ ನಿಂದ ಅನುಮತಿ ಪತ್ರ ಪಡೆಯದೇ ಇರುವುದೊಂದು.ಪಂಚಾಯತ್ ಸದಸ್ಯ ನೂರ್ ಸಾಬ್ರು ಇತ್ತೀಚೆಗೆ ಬಜ್ಪೆಯಲ್ಲಿರುವ ಕಾಂಟ್ರಾಕ್ಟರ್ ರಾಘವೇಂದ್ರರವರ ಕಚೇರಿಗೆ ತೆರಳಿ ಅನಧಿಕೃತವಾಗಿ ಕಟ್ಟಡ ನಿರ್ಮಿಸುತ್ತಿದ್ದೀರಿ, ಈ ಬಗ್ಗೆ ನಮ್ಮಲ್ಲಿ ಮಾತುಕತೆ ಮಾಡಲಿಲ್ಲ. ಕಟ್ಟಡದ ಮಾಲಿಕರು ನಮ್ಮೊಂದಿಗೆ ಸಹಕರಿಸುತ್ತಿಲ್ಲ, ನಾನು ಆ ಭಾಗದ ಪಂಚಾಯತ್ ಸದಸ್ಯ ಎಂದು ಹೇಳಿ ಬಂದಿದ್ದರಂತೆ. ಆದರೆ ಅವರ್ರ್ಯಾರೂ ಇವರ ಮಾತಿಗೆ ಸೊಪ್ಪು ಹಾಕಲಿಲ್ಲ. ಈ ಬಗ್ಗೆ ಕಾಂಟ್ರಾಕ್ಟರ್ ರಾಘವೇಂದ್ರ ಹಾಗೂ ನೂರು ಸಾಬ್ರ ನಡುವೆ ಕಚೇರಿಯಲ್ಲಿ ಸ್ವಲ್ಪ ಏರು ಧ್ವನಿಯಲ್ಲಿ ಮಾತುಕತೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪಡುಪೆರಾರ ಗ್ರಾಮ ಪಂಚಾಯತ್ ಕೊರಕಂಬ್ಳ ವಾರ್ಡ್ ನಲ್ಲಿ ಪರವಾನಿಗೆ ಇಲ್ಲದೆ ಕಟ್ಟಡ ನಿರ್ಮಿಸುತ್ತಿರುವ ಕುರಿತು ಗ್ರಾಮ ಪಂಚಾಯತ್ ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಪಡುಪೆರಾರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಮೋದ್ ಅವರೊಂದಿಗೆ ಪಂಚಾಯತ್ ಸದಸ್ಯ ನೂರ್ ಅಹ್ಮದ್ ಸ್ಥಳಕ್ಕೆ ಭೇಟಿ ನೀಡಿದ್ದರು.ಪರಿಶೀಲನೆ ನಡೆಸಿ ಪರವಾನಿಗೆ ಪಡೆದುಕೊಳ್ಳುವಂತೆ ಗುತ್ತಿಗೆದಾರರಿಗೆ ಪಿಡಿಓ ಸೂಚನೆ ನೀಡಿದರು ಎನ್ನಲಾಗಿದೆ. ಆ ವೇಳೆ ಗುತ್ತಿಗೆದಾರ ‘ಕಂ’ ಇಂಜಿನಿಯರ್ ರಾಘವೇಂದ್ರರವರಿಗೆ ಸದಸ್ಯ ನೂರ್ ಸಾಬ್ರು ಕಟ್ಟಡ ನಿರ್ಮಿಸದಂತೆ ಗದರಿಸಿದ್ದರು ಎನ್ನಲಾಗಿದೆ. ಕಾನೂನಾತ್ಮಕವಾಗಿ ಪಂಚಾಯತ್ ಅಧಿಕಾರಿಗೆ ಈ ವಿಷಯದಲ್ಲಿ ನೋಟಿಸ್ ಜಾರಿ ಮಾಡುವ ಅಧಿಕಾರವಿತ್ತು. ಆದರೆ ಅಲ್ಲಿ ನೂರ್ ಸಾಬ್ರು ರವರು ರಂಪಾಟ ಮಾಡುವ ಅಗತ್ಯತೆ ಇರಲಿಲ್ಲ.ಅ ಸಂದರ್ಭದಲ್ಲಿ ಕಾಂಟ್ರಾಕ್ಟರ್ ರಾಘವೇಂದ್ರರಿಗೂ ನೂರ್ ಸಾಬ್ರುರಿಗೂ ಮಾತಿಗೆ ಮಾತು ಬೆಳೆದು ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಬಿಜೆಪಿ ಮುಖಂಡ ರಾಜೇಶ್ ಎಂಬವರು, ನೂರು ಸಾಬ್ರು ಏರು ಧ್ವನಿಯಲ್ಲಿ ಅವಾಜ್ ಹಾಕಿದ್ದನ್ನು ಪ್ರಶ್ನಿಸಿದ್ದಾರೆ. ಆಗ ‘ಸೋತಿನಾಯೆ ನಿಕ್ಕ್ ದಾಯೆಗ್ಂಬೆ’ ಎಂದು ನೂರ್ ಸಾಬ್ರು ತನ್ನ ಹರಕು ಮಾತುಗಳನ್ನು ಉದುರಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ.ಸ್ಥಳದಲ್ಲಿದ್ದ ಪಿಡಿಓ ರವರ ಸಮ್ಮುಖದಲ್ಲೆ ಇವರಿಬ್ಬರ ಮಧ್ಯೆ ಹೊಯ್ ಕೈ ನಡೆದಿದೆ. ರಾಜೇಶ್ ರವರಿಗೆ ಹೊಡೆಯಲು ಅಲ್ಲೇ ಇದ್ದ ಕಲ್ಲೊಂದನ್ನು ಎತ್ತಿದ್ದಾರೆ ನೂರ್ ಸಾಬ್ರು. ಗಲಾಟೆ ವಿಕೋಪಕ್ಕೆ ತಿರುಗಿ ನೂಕಾಟ,ತಳ್ಳಾಟದಲ್ಲಿ ತನ್ನ ದೇಹದ ನಿಯಂತ್ರಣ ತಪ್ಪಿ ಕಟ್ಟಡ ನಿರ್ಮಿಸುವ ಗುಂಡಿಗೆ ನೂರು ಸಾಬ್ರು ಜಾರಿ ಬಿದ್ದರಿಂದ ಮುಖ,ಮೂತಿಗೆ ಮತ್ತು ಕಾಲಿಗೆ ಸ್ವಲ್ಪ ತರದ ಪರಚಿದ ಗಾಯವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ. ಇದು ಅಲ್ಲಿ ನಡೆದ ಒಟ್ಟಾರೆ ಹಕೀಕತ್ತು.! ಅಲ್ಲಿ ನಡೆದದ್ದು ಕೇವಲ ವೈಯಕ್ತಿಕ ವಿಚಾರಕ್ಕಾಗಿ ಹಾಗೂ ಕುರುಡು ಕಾಂಚಾಣದ ರುಚಿಗಾಗಿ ನಡೆಸಿದ ರಂಪಾಟ.!
ಇದನ್ನೇ ನೆಪವೊಡ್ಡಿ ರಾಡುಗಳಿಂದ ದಾಳಿ ಮಾಡಿ,ಹತ್ಯೆಗೆ ಯತ್ನ , ಭಜರಂಗದಳ, ಕಾಂಗ್ರೆಸ್-ಬಿಜೆಪಿ ಎಂಬ ರೀತಿಯ ಬಣ್ಣ ಹಚ್ಚಿ ಗಿಮಿಕ್ಸ್. ಮಾಡಲಾಗಿದೆಯಂತೆ.ಒಟ್ಟಾರೆ ಈ ಎಲ್ಲಾ ಚಿತ್ರಣದ ಸತ್ಯಾಸತ್ಯತೆಗಳು ಪಡುಪೆರಾರ ಗ್ರಾಮದ ನಾಗರಿಕರೆಲ್ಲರಿಗೂ ತಿಳಿದ ವಿಷಯ. ಕಾಂಚಾಣ ಬಿಸಾಕಿದರೆ ಅಕ್ರಮ,ಸಕ್ರಮ ಎಲ್ಲವೂ ಸುಖಾಂತ್ಯ ಆಗುತ್ತಿತ್ತು. ಕಾಂಚಣ ಮಾತಾಡದೇ ಇರುವುದರಿಂದ ರಂಪಾಟ ಆಗಿದೆಯಂತೆ.! ನೂರು ಸಾಬ್ರು ಕೈ, ಬಾಯಿ ಶುದ್ಧ ಇಟ್ಟುಕೊಂಡಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಅಭಿಪ್ರಾಯ ನಾಗರಿಕರದ್ದು.! ಸ್ವಂತ ಸಹೋದರನ ಜಾಗದ ವಿಚಾರಲ್ಲೂ ತಕರಾರು ತೆಗೆದಿದ್ದಾರೆ ಎಂಬ ಮಾತು ಇದೀಗ ಕೇಳಿ ಬರುತ್ತಿದೆ. ಕೆಲವು ಸಮಯಗಳ ಹಿಂದೆ ಬಜ್ಪೆಯ ಪೆರ್ಮುದೆ ಎಂಬಲ್ಲಿ ಇವರ ಮುಂದಾಳತ್ವದಲ್ಲಿ ಕಟ್ಟಿಸಿದ ನಾಲ್ಕು ಅಂತಸ್ತಿನ ಫ್ಲ್ಯಾಟನ್ನು ಅಕ್ರಮವಾಗಿ ನಿರ್ಮಿಸಿ ಕೊನೆಗೆ ಅಡ್ಡ ದಾರಿಯಲ್ಲಿ ಸಕ್ರಮಗೊಳಿಸಲು ಪ್ರಯತ್ನಿಸಿ ಅದು ದೊಡ್ಡ ರಾದ್ಧಾಂತವಾಗಿ ಕೊನೆಗೆ ಸುಖ್ಯಾಂತ ಕಂಡಿತು.
ಇತ್ತೀಚೆಗೆ ಚುನಾವಣೆ ಸಂದರ್ಭದಲ್ಲಿ ಮಾಜಿಯೊಬ್ಬರಿಂದ ವ್ಯವಹಾರ ಕುದುರಿಸಿ, ಮಾತು ತಪ್ಪಿ ಉಲ್ಟಾ ಹೊಡೆದಾಗ ಮಾಜಿ ನೀಡಿದ ಮೊತ್ತದ ವಸೂಲಿಗೆ ರಾತ್ರಿ ಹೊತ್ತು ಮಾಜಿಯ ಕಡೆಯವರು ಯಾರ ಮನೆಗೆ ರೌಡಿಗಳೊಂದಿಗೆ ಹಾಜರಾದದ್ದು.? ಮಂತ್ರಿ ಆಪ್ತ ಎಂದು ಹೇಳಿ ಅನೇಕ ಸರಕಾರಿ ಇಲಾಖೆಯಲ್ಲಿನ ಅಧಿಕಾರಿಗಳನ್ನು ಗಧರಿಸಿ ತನ್ನ ಬೇಳೆ ಬೇಯಿಸುತ್ತಿರುವ ವ್ಯಕ್ತಿ ಯಾರು.? ವೈಯಕ್ತಿಕ ಕಾರಣಕ್ಕಾಗಿ ನಡೆದ ಗಲಾಟೆಯನ್ನು ಬಿಜೆಪಿ-ಕಾಂಗ್ರೆಸ್,ಭಜರಂಗಿ ಎಂಬ ರೀತಿಯಲ್ಲಿ ಬಿಂಬಿಸಿರುವ ನೂರು ಕತೆಯ ಬಣ್ಣ ಬಯಲಾಗಿದೆ. ಇತ್ತ ಕಾಂಟ್ರಾಕ್ಟರುದಾರ ರಾಘವೇಂದ್ರ ಕೂಡ ಬಜ್ಪೆ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಮುಸ್ಲಿಮ್ ಒಬ್ಬರ ಬೆನ್ನಿಗೆ ನಿಂತು ಸಹಕಾರ ನೀಡುತ್ತಿರುವ ಬಿಜೆಪಿ ಮುಖಂಡ ರಾಜೇಶ್,ಗುತ್ತಿಗೆದಾರ ರಾಘವೇಂದ್ರ ಇವರು ಕೋಮುವಾದಿಗಳೇ.? ಅಥವಾ ತನ್ನ ಸ್ವಜಾತಿ ಬಾಂಧವ ನಿರ್ಮಿಸುವ ಕಟ್ಟಡದ ಕಾಮಗಾರಿಕೆಗೆ ಅಡ್ಡಿಪಡಿಸಿ ಅಂತೆ-ಕಂತೆಗಳ ಕತೆ ಹೆಣೆಯುತ್ತಿರುವ ನೂರು ಸಾಬ್ರು ಜನ ಪ್ರತಿನಿಧಿಯೇ.? ಇಂತವರ ಬೆನ್ನಿಗೆ ನಿಂತಿರುವ ನಾಯಕರೇ ಸ್ವಲ್ಪ ಯೋಚಿಸಿ.!
