ಕಾರ್ಕಳ: ಶಿರ್ಲಾಲು ಮಂಗಳಬಾಕ್ಯರಿನ ಹೊಸ ಸೇತುವೆಗೆ ರಸ್ತೆ ಸಂಪರ್ಕಿಸಲು ಅಧಿಕಾರಿಗಳ ಮೀನಮೇಷ

ಕರಾವಳಿ

ಜನರ ಕಷ್ಟಗಳಿಗೆ ಸ್ಪಂದಿಸದೆ ಸೋಮಾರಿತನ ತೋರಿಸುತ್ತಿರುವ ಅಧಿಕಾರಿಗಳು

ಉಡುಪಿ: ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಮಂಗಳಬಾಕ್ಯಾರು ಎಂಬಲ್ಲಿ ಸರಕಾರದ ಅನುದಾನದಿಂದ ಸರಿ ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ನಾಗರಿಕರ ಅನುಕೂಲಕ್ಕಾಗಿ ಹೊಸ ಸೇತುವೆ ನಿರ್ಮಾಣಗೊಂಡಿದೆ. ಸೇತುವೆಯ ಕಾಮಗಾರಿ ಪೂರ್ಣಗೊಂಡು ಸರಿ-ಸುಮಾರು 6-7 ತಿಂಗಳು ಕಳೆದರೂ ಪ್ರಸ್ತುತ ಇರುವ ರಸ್ತೆಯನ್ನು ಹೊಸ ಸೇತುವೆಗೆ ಸಂಪರ್ಕ ಕಲ್ಪಿಸಲು ಇನ್ನೂ ಕೂಡ ಮೀನಮೇಷ ಎಣಿಸಲಾಗುತ್ತಿದೆ.

ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಇಲಾಖೆಗೆ ಸಾರ್ವಜನಿಕರು ಅಲೆದು ಅಲೆದು ಸುಸ್ತಾಗಿ ಅನೇಕ ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ.ಇನ್ನೂ ಕೂಡ ಸಂಪರ್ಕ ಕಲ್ಪಿಸುತ್ತಿಲ್ಲ. ಹೊಸ ಸೇತುವೆ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಇಲ್ಲಿನ ನಾಗರೀಕರಿಗೆ ಬಹಳ ಅನುಕೂಲವಾಗುತ್ತದೆ. ಈಗ ಐದಾರು ಕಿಲೋ ಮೀಟರ್ ಸುತ್ತಿ ಬಳಸಿ ಸಂಚಾರ ಮಾಡಬೇಕಿದೆ. ತುರ್ತು ಸಂದರ್ಭಗಳಲ್ಲಿ ಅನಾರೋಗ್ಯ ಪೀಡಿತರನ್ನು ತಕ್ಕ ಸಮಯಕ್ಕೆ ಅಸ್ಪತ್ರೆಗೆ ದಾಖಲಿಸಲು ಬಹಳ ಕಷ್ಟ ಪಟ್ಟು ಸುತ್ತಿ ಬಳಸಿ ಸಂಚಾರ ಮಾಡಬೇಕಾಗಿದೆ.

ಇದೀಗ ಮಳೆಗಾಲದ ಸಂದರ್ಭ ಆಗಿರುವುದರಿಂದ ಇನ್ನೂ ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ. ಈ ಹೊಸ ಸೇತುವೆಯಲ್ಲಿ ಸಂಚಾರ ಕಲ್ಪಿಸಿದರೆ ಪ್ರಯಾಣಿಕರಿಗೆ ಕನಿಷ್ಠ ಐದು ಕಿಲೋ ಮೀಟರ್ ಸುತ್ತಿ ಬಳಸಿ ಪ್ರಯಾಣ ಮಾಡುವುದು ತಪ್ಪುತ್ತದೆ. ಮಾತ್ರವಲ್ಲದೆ ಶಾಲಾ ಮಕ್ಕಳಿಗೆ, ಪೇಟೆಯಲ್ಲಿ ಉದ್ಯೋಗದಲ್ಲಿರುವವರಿಗೂ ಸರಿಯಾದ ಸಮಯಕ್ಕೆ ಹಾಜರಾಗಲು ಸಾಧ್ಯವಾಗುತ್ತದೆ.

ಇನ್ನು ಕೂಡ ಈ ರಸ್ತೆಗೆ ಸಂಪರ್ಕ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳು ಮೀನ ಮೇಷ ಎಣಿಸಿದರೆ ಸಾರ್ವಜನಿಕರು ಒಟ್ಟು ಸೇರಿ ಧರಣಿ ನಡೆಸುವ ಎಚ್ಚರಿಕೆ ನೀಡಿದ್ದಾರೆ.ಸಂಬಂದ ಪಟ್ಟವರು ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ.