ಬಡ ಜಾತ್ರೆ ವ್ಯಾಪಾರಸ್ಥರ ಮಧ್ಯೆ ಧರ್ಮ, ದ್ವೇಷದ ರಾಜಕೀಯ ಸಲ್ಲದು: ಸುನಿಲ್ ಕುಮಾರ್ ಬಜಾಲ್

ಕರಾವಳಿ

ಮಂಗಳೂರು : ಬಡ ಜಾತ್ರೆ, ಉತ್ಸವ ವ್ಯಾಪಾರಸ್ಥರನ್ನು ಗುರಿಯಾಗಿಸಿ ಧರ್ಮಗಳ ನಡುವೆ ದ್ವೇಷ ಹರಡಿ ಬಡಪಾಯಿಗಳ ಬೀದಿಪಾಲು ಮಾಡುವ ಕೀಳುಮಟ್ಟದ ರಾಜಕೀಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಜನಪರ ಹೋರಾಟಗಾರ ಸುನಿಲ್ ಕುಮಾರ್ ಬಜಾಲ್ ಹೇಳಿದರು. ಅವರು ನಗರದ ನಾಸಿಕ್ ಬಂಗೇರ ಭವನದಲ್ಲಿ ಜರಗಿದ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಜಾತ್ರೆ ವ್ಯಾಪಾರಸ್ಥರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ಸಂವಿಧಾನ ಎಲ್ಲಾ ಜನರಿಗೆ ಬದುಕುವ ಹಕ್ಕನ್ನು ನೀಡಿದೆ ಕರಾವಳಿ ಜಿಲ್ಲೆಗಳಲ್ಲಿ ಕೆಲವು ಸಮಾಜ ಒಡೆಯುವ ಸ್ಥಾಪಿತ ಹಿತಾಸಕ್ತಿಗಳು ಅನ್ಯಧರ್ಮಿಯರಿಗೆ ಜಾತ್ರೆ ಉತ್ಸವಗಳಲ್ಲಿ ಮಾಡಬಾರದು ಎಂಬ ಅಲಿಖಿತ ಕಾನೂನನ್ನು ಜಾರಿ ಮಾಡಿಸುವ ಹುನ್ನಾರ ನಡೆಸಿ ವ್ಯಾಪಾರ ಪುಣ್ಯ ಕ್ಷೇತ್ರಗಳ ಆದಾಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಅಲ್ಲದೆ ಪುಣ್ಯ ಕ್ಷೇತ್ರಗಳ ಆಡಳಿತ ಮಂಡಳಿಯವರ ಮೇಲೆ ಅಲಿಖಿತ ಕಾನೂನನ್ನು ಹೇರುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನ್ಯಾಯವಾದಿ ಬಿ.ಎಂ ಭಟ್ ಅವರು ಅವಿಭಜಿತ ಜಿಲ್ಲೆಗಳ ಜಾತ್ರೆ ಉತ್ಸವಗಳಲ್ಲಿ ವ್ಯಾಪಾರಕ್ಕೆ ಅಡ್ಡಿಪಡಿಸುವವರ ವಿರುದ್ಧ ಕೋಮು ನಿಗ್ರಹ ಪಡೆಯವರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ರಾಜ್ಯ ಸರಕಾರ ಈ ನಿಟ್ಟಿನಲ್ಲಿ ಬಡ ವ್ಯಾಪಾರಿಗಳ ಹಿತರಕ್ಷಣೆಗೆ ಬದ್ಧರಾಗಿರಬೇಕೆಂದು ಒತ್ತಾಯಿಸಿದರು.

ಮತ್ತೋರ್ವ ಮುಖ್ಯ ಅತಿಥಿ, ಜನಪರ ಹೋರಾಟಗಾರ್ತಿ ಮಂಜುಳಾ ನಾಯಕ್ ಮಾತನಾಡಿ ಜಾತ್ರೆ ವ್ಯಾಪಾರಿಗಳಿಗೆ ಧರ್ಮದ ಹೆಸರಿನಲ್ಲಿ ಅಧರ್ಮದ ಕೆಲಸ ಮಾಡುವವರ ವಿರುದ್ದದ ಸಮರ ಸಾರಬೇಕು ಬಡವರ ಮಧ್ಯೆ ವಿಷ ಹಿಂಡುವವರ ವಿರುದ್ಧ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸಂಘದ ಕಾನೂನು ಸಲಹೆಗಾರರಾದ ಚರಣ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತರಾದ ಕವಿರಾಜ್ ಉಡುಪಿ, ನವೀನ್ ಕೊಂಚಾಡಿ, ಭರತ್ ಜೈನ್, ಆರಿಫ್ ಉಡುಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘದ ಗೌರವಧ್ಯಕ್ಷರಾದ ಬಿ.ಕೆ ಇಮ್ತಿಯಾಝ್ ಅಧ್ಯಕ್ಷತೆ ವಹಿಸಿದ್ದರು.

ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಮುಸ್ತಫಾ, ಮುಖಂಡರಾದ ಆಸೀಫ್ ಬಾವ ಉರುಮನೆ, ನೌಶಾದ್ ಉಳ್ಳಾಲ, ರಹಿಮಾನ್ ಅಡ್ಯಾರ್, ರಿಯಾಝ್, ಆದಂ ಬಜಾಲ್ ಮುಂತಾದವರು ಉಪಸ್ಥಿತರಿದ್ದರು
ಬೀದಿಬದಿ ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಸ್ವಾಗತಿಸಿ, ಪ್ರವೀಣ್ ಕುಮಾರ್ ಕದ್ರಿ ವಂದಿಸಿದರು

ಸಮಾವೇಶದ ನಿರ್ಣಯಗಳು :

  1. ಜಾತ್ರೆ, ಉತ್ಸವ, ಉರೂಸ್ ಮುಂತಾದ ಕಡೆ ವ್ಯಾಪಾರ ಮಾಡುವ ಉತ್ಸವ ವ್ಯಾಪಾರಿಗಳನ್ನು ಸರಕಾರ ಸ್ಥಳೀಯ ಆಡಳಿತದ ಮೂಲಕ ಸಮೀಕ್ಷೆ ನಡೆಸಿ ಅವರಿಗೆ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರ ವಿತರಿಸಬೇಕು.
  2. ಜಾತ್ರೆ ವ್ಯಾಪಾರಸ್ಥರಿಗೆ ಸೂಕ್ತ ರಕ್ಷಣೆ ಒದಗಿಸಬೇಕು.
  3. ಎಲ್ಲಾ ಧರ್ಮದ ಪುಣ್ಯಕ್ಷೇತ್ರಗಳ ಜಾತ್ರೆ ಉತ್ಸವಗಳಲ್ಲಿ ನ್ಯಾಯಯುತ ದರಗಳಲ್ಲಿ ಏಲಂ ನಡೆಸಿ ಕ್ಷೇತ್ರದ ಆದಾಯ ಕ್ರೋಢಿಕರಿಸಲು ಮುಜುರಾಯಿ, ವಖ್ಫ್,ಧಾರ್ಮಿಕ ದತ್ತಿ ಇಲಾಖೆಗಳು ಮಾರ್ಗದರ್ಶನ ನೀಡಬೇಕು
    4.ಅನ್ಯ ಧರ್ಮೀಯರು ವ್ಯಾಪಾರ ನಡೆಸದಂತೆ ಕಿರುಕುಳ ನೀಡಿ ಕೋಮು ದ್ವೇಷ ಹರಡುವ ವ್ಯಕ್ತಿ ಮತ್ತು ಸಂಘಟನೆ ವಿರುದ್ಧ ಕೋಮು ನಿಗ್ರಹ ದಳ ತೀವ್ರ ನಿಗಾ ವಹಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.