ಬಹುಶಃ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ಖಡಕ್, ದಕ್ಷ ಪೊಲೀಸ್ ಅಧಿಕಾರಿಗಳನ್ನು ನೋಡಿದ್ದೇವೆ. ತಮ್ಮ ಖಡಕ್ ಶೈಲಿಯಿಂದಲೇ ರಾಜಕಾರಣಿಗಳ ಕೆಂಗಣ್ಣಿಗೆ ಒಳಗಾಗಿ ವರ್ಗಾವಣೆಗೊಂಡು ಹೋದದ್ದಿದೆ. ಆದರೆ ಜನಸಾಮಾನ್ಯರು ಈಗಲೂ ಅಂತಹ ಅಧಿಕಾರಿಗಳ ಸೇವೆಯನ್ನು ಕೊಂಡಾಡುತ್ತಲೇ ಇರುತ್ತಾರೆ. ಏನಾದರೂ ಅನಾಹುತ ಸಂಭವಿಸಿದಾಗ ಅವರು ಇರಬೇಕಿತ್ತು, ಅವರು ಇರುತ್ತಿದ್ದರೆ ಬೆನ್ನುಮೂಳೆ ಮುರಿದು ಬಿಡುತ್ತಿದ್ದರು ಎಂದು ನೆನಪಿಸುತ್ತಾರೆ.
ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಸೂಪರ್ ಕಾಫ್ ಅಧಿಕಾರಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಜನತೆ ನೋಡಿದ್ದು ಕಡಿಮೆ. ರಾಜಕಾರಣಿಗಳ, ಅಧಿಕಾರಿಗಳ ತಾಳಕ್ಕೆ ಕುಣಿಯುವವರನ್ನು ಮಾತ್ರ ಆಯಕಟ್ಟಿನ ಜಾಗಕ್ಕೆ ತಂದು ನಿಲ್ಲಿಸಲಾಗುತ್ತದೆ. ಆದರೆ ಅವರೊಬ್ಬರಿದ್ದಾರೆ. ಯಾವುದೇ ಪಕ್ಷ ಅಧಿಕಾರದಲ್ಲಿ ಇರಲಿ, ಯಾವುದೇ ರಾಜಕಾರಣಿಗಳಿರಲಿ, ಅಂತಹವರ ತಾಳಕ್ಕೆ ತಕ್ಕಂತೆ ಕುಣಿಯದೆ, ನೇರ ನಡೆ ನುಡಿಯಿಂದ ಸೂಪರ್ ಕಾಫ್, ಸಿಂಗಂ ಎಂಬ ಖ್ಯಾತಿಗೆ ಪಾತ್ರರಾದ ಪೊಲೀಸ್ ಅಧಿಕಾರಿಯಾಗಿದ್ದಾರೆ ಸಂದೇಶ್.
ಬೆಳ್ತಂಗಡಿಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ಸಮಯದಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ, ಕೋಮುವಾದಿಗಳ ಬೆನ್ನು ಮೂಳೆ ಮುರಿದು ತನ್ನ ಖಡಕ್ ಶೈಲಿಯಿಂದಲೇ ಸಿಂಗಂ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಬಜಪೆಯಲ್ಲೂ ತಮ್ಮ ಖದರ್ ತೋರಿಸಿದ್ದರು ಸಂದೇಶ್. ಗೂಂಡಾಗಳನ್ನು, ಸಮಾಜ ಬಾಹಿರ ಕೃತ್ಯಗಳಲ್ಲಿ ತೊಡಗಿಕೊಂಡವರ ಚಳಿ ಬಿಡಿಸಿದ್ದ ಸೂಪರ್ ಕಾಫ್ ಅಧಿಕಾರಿ. ಸಂದೇಶ್ ಹೆಸರು ಕೇಳಿದೊಡನೆ ಸಾಕು ಧೋ ನಂಬರ್ ದಂಧೆಕೋರರು, ಅಕ್ರಮ ಮಾಫಿಯಾ, ಮರಳು ಮಾಫಿಯಾ, ಕೋಮುವಾದಿಗಳಿಗೆ ನಡುಕ. ಆದರೆ ಅನ್ಯಾಯಕ್ಕೊಳಗಾದವರಿಗೆ, ಶೋಷಿತರ, ದೀನದಲಿತರ ಪಾಲಿಗೆ ಅಭಯ ನೀಡಿ ನ್ಯಾಯ ದೊರಕಿಸುವ ಖಡಕ್ಕ್ ಅಧಿಕಾರಿ.
ಇಂತಹ ಸೂಪರ್ ಕಾಫ್ ಅಧಿಕಾರಿ ಸಂದೇಶ್ ರವರಿಗೆ ಶೈಕ್ಷಣಿಕ ಕಾಶಿ ಮೂಡುಬಿದಿರೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಇದೀಗ ಲಭಿಸಿದೆ.ಈ ಹಿಂದೆ ಜಿಲ್ಲೆಯಲ್ಲಿ ಮೂಡುಬಿದಿರೆ ಶಾಂತಿಯ ಪ್ರದೇಶ ಅನ್ನುವ ಹೆಸರಿಗೆ ಪಾತ್ರವಾಗಿತ್ತು. ಆದರೆ ಕೆಲವೊಂದು ವರ್ಷಗಳಿಂದ ಮರ್ಡರ್ ಚಟುವಟಿಕೆ ಸೇರಿದಂತೆ ಅನೇಕ ಅಕ್ರಮ ಚಟುವಟಿಕೆಗಳು ಗರಿಗೆದರುತ್ತಿದೆ. ಇವೆಲ್ಲವನ್ನೂ ಸದೆ ಬಡಿದು ಮೂಡುಬಿದಿರೆಯಲ್ಲಿ ಕಮಾಲ್ ತೋರಿಸುತ್ತರಾ ಸಂದೇಶ್. ಕಾದು ನೋಡೋಣ.