✍️. ಪತ್ರಕರ್ತ ನವೀನ್ ಸೂರಿಂಜೆ
ಈಗ ರಾಗಿಗುಡ್ಡವನ್ನೇ ಕೋಮುವಾದಿಗಳು ಟಾರ್ಗೆಟ್ ಮಾಡಿರುವುದರ ಹಿಂದೆ ಧಾರ್ಮಿಕ ಮತ್ತು ಭೂಮಾಫಿಯಾ ಇದೆ. ಪ್ರಕೃತಿ ಸೌಂದರ್ಯದ ಸ್ವರ್ಗವಾಗಿರುವ ರಾಗಿಗುಡ್ಡ ಭೂ ಅತಿಕ್ರಮಣಕಾರರಿಗೂ ಸ್ವರ್ಗವಾಗಿದೆ. ಒಂದು ಕಡೆಯಲ್ಲಿ ಶ್ರೀಮಂತರು ಭೂಮಿಯನ್ನು ಅತಿಕ್ರಮಣ ಮಾಡುತ್ತಿದ್ದರೆ, ಇನ್ನೊಂದೆಡೆ ರಾಜ್ಯ, ಕೇಂದ್ರ ಸರ್ಕಾರದ ಯೋಜನೆಗಳಿಗಾಗಿ ಇಲ್ಲಿ ಭೂಸ್ವಾಧೀನ ಮಾಡಲಾಗುತ್ತಿದೆ ಶಿವಮೊಗ್ಗದ ರಾಗಿಗುಡ್ಡವನ್ನೇ ಕೋಮುಗಲಭೆಗೆ ಕೋಮುವಾದಿಗಳು ಯಾಕೆ ಆಯ್ಕೆ ಮಾಡಿಕೊಂಡರು? ಶಿವಮೊಗ್ಗ ಗಲಭೆ ಅನ್ನುವ ಬದಲು ರಾಗಿಗುಡ್ಡ ಧಗಧಗ, ರಾಗಿಗುಡ್ಡ ಕೊತಕೊತ ಎಂಬ ತಲೆಬರಹಗಳೇ ಯಾಕೆ ಓಡಾಡಿದವು? ಕೋಮುಗಲಭೆಯ ಹಿಂದಿನ ಈ ರಾಜಕಾರಣ ಅತ್ಯಂತ ಮುಖ್ಯವಾಗುತ್ತದೆ.
ಮನುಷ್ಯನಿಗೆ ಎರಡು ಶ್ವಾಸಕೋಶ ಇರುವಂತೆ ಶಿವಮೊಗ್ಗ ನಗರಕ್ಕೆ ಎರಡು ಗುಡ್ಡಗಳೆಂಬ ಶ್ವಾಸಕೋಶವಿದೆ. ಗುಡ್ಡೆಕಲ್ಲು ಮತ್ತು ರಾಗಿಗುಡ್ಡ ಎಂಬ ಎರಡು ಗುಡ್ಡಗಳೇ ಶಿವಮೊಗ್ಗದ ಉಸಿರಾಟ ಕೇಂದ್ರಗಳು. ಶಿವಮೊಗ್ಗ ನಗರದಿಂದ ನಾಲ್ಕು ಕಿ.ಮೀ ದೂರದಲ್ಲಿರುವ ರಾಗಿಗುಡ್ಡ 108 ಎಕರೆ ಪ್ರದೇಶ ವ್ಯಾಪ್ತಿಯನ್ನು ಹೊಂದಿದೆ. ರಾಗಿಗುಡ್ಡದಲ್ಲಿ ನಾಲ್ಕೈದು ದೇವಸ್ಥಾನಗಳಿದ್ದರೆ, ಗುಡ್ಡೆಕಲ್ಲಿನಲ್ಲಿ ತಮಿಳರು ಪೂಜೆ ಮಾಡುವ ಒಂದು ದೇವಸ್ಥಾನವಿದೆ.
ರಾಗಿಗುಡ್ಡದ ಉತ್ತರ ಭಾಗದಲ್ಲಿ ಶಾಂತಿನಗರ ಎಂಬ ವಸತಿ ಪ್ರದೇಶವಿದೆ. ಯಾವುದೋ ಕಾಲದಲ್ಲಿ ಬಂದು ನೆಲೆ ನಿಂತವರು, ಭೂಮಿ ಖರೀದಿಸಿ ಮನೆ ಕಟ್ಟಿದವರು ಇರುವ ರೆಸಿಡೆನ್ಸಿಯಲ್ ಏರಿಯಾ ಈಗ ಶಿವಮೊಗ್ಗ ನಗರಸಭೆ ವ್ಯಾಪ್ತಿಗೆ ಸೇರ್ಪಡೆಗೊಂಡಿದೆ. ಈ ಮಧ್ಯಮ ವರ್ಗದ ಜನವಸತಿ ಪ್ರದೇಶವನ್ನೇ ಬಳಕೆ ಮಾಡಿಕೊಂಡು ರಾಗಿಗುಡ್ಡ ಕೋಮುಗಲಭೆ ಸೃಷ್ಟಿಸಲಾಗಿದೆ.
ಈಗ ರಾಗಿಗುಡ್ಡವನ್ನೇ ಕೋಮುವಾದಿಗಳು ಟಾರ್ಗೆಟ್ ಮಾಡಿರುವುದರ ಹಿಂದೆ ಧಾರ್ಮಿಕ ಮತ್ತು ಭೂಮಾಫಿಯಾ ಇದೆ. ಪ್ರಕೃತಿ ಸೌಂದರ್ಯದ ಸ್ವರ್ಗವಾಗಿರುವ ರಾಗಿಗುಡ್ಡ ಭೂ ಅತಿಕ್ರಮಣಕಾರರಿಗೂ ಸ್ವರ್ಗವಾಗಿದೆ. ಒಂದು ಕಡೆಯಲ್ಲಿ ಶ್ರೀಮಂತರು ಭೂಮಿಯನ್ನು ಅತಿಕ್ರಮಣ ಮಾಡುತ್ತಿದ್ದರೆ, ಇನ್ನೊಂದೆಡೆ ರಾಜ್ಯ, ಕೇಂದ್ರ ಸರ್ಕಾರದ ಯೋಜನೆಗಳಿಗಾಗಿ ಇಲ್ಲಿ ಭೂಸ್ವಾಧೀನ ಮಾಡಲಾಗುತ್ತಿದೆ. ಇದಕ್ಕಿಂತಲೂ ಅಪಾಯಕಾರಿಯಾಗಿ ಧಾರ್ಮಿಕ ಭೂ ಅತಿಕ್ರಮಣ ರಾಗಿಗುಡ್ಡದಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ.
ಈಗಾಗಲೇ ರಾಗಿಗುಡ್ಡದಲ್ಲಿ 74 ಎಕರೆಯನ್ನು ನಾನಾ ಇಲಾಖೆಗಳ ಯೋಜನೆಗೆ ರಾಜ್ಯಸರ್ಕಾರ ಮಂಜೂರು ಮಾಡಿದೆ. ಇದರಲ್ಲಿ ESI ಆಸ್ಪತ್ರೆಗೆಂದು ಐದು ಎಕರೆಯಲ್ಲಿ ಐವತ್ತು ಅಡಿವರೆಗೆ ಗುಡ್ಡ ಕಡಿಯಲಾಗಿದೆ. ಮಣ್ಣು ಲೂಟಿ ಹೊಡೆಯಲಾಗಿದೆ. ಅಲ್ಲಿ ಗಿಡಗಳನ್ನು ಕಡಿದು ಸುಟ್ಟು ಹಾಕಿದ್ದಾರೆ. ಬೇರೆ ಬೇರೆ ಕಟ್ಟಡಗಳು ಕೂಡ ಇಲ್ಲಿ ತಲೆ ಎತ್ತುತ್ತಿವೆ. ಈಗ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೂ ರಾಗಿಗುಡ್ಡದಲ್ಲಿ ಜಮೀನು ಕಾಯ್ದಿರಿಸಲಾಗಿದೆ. ಈ ಎಲ್ಲಾ ಯೋಜನೆಗಳನ್ನು ಪರಿಸರವಾದಿಗಳು ವಿರೋಧ ಮಾಡುತ್ತಿದ್ದಾರೆ. ಪ್ರೊ ಶೇಖರ್ ಗೌಳೇದ್ ಅವರ ನೇತೃತ್ವದಲ್ಲಿ ರಾಗಿಗುಡ್ಡ ಉಳಿಸಿ ಎಂಬ ಪ್ರತಿಭಟನೆಯೂ ನಡೆದಿತ್ತು. ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಮತ್ತು ಮುಂದೆ ಭೂಸ್ವಾಧೀನ ಮಾಡಬಾರದು ಎಂದು ಪರಿಸರವಾದಿಗಳು ಎರಡು ತಿಂಗಳ ಹಿಂದೆಯಷ್ಟೇ ಬೀದಿಗಿಳಿದಿದ್ದರು. ಸರ್ಕಾರ ಈಗ ಸಲೀಸಾಗಿ ಭೂಸ್ವಾಧೀನ ಮಾಡಬೇಕಾದರೆ ಆ ಊರಲ್ಲೊಂದು ಕೋಮುಗಲಭೆ ನಡೆದರೆ ಆಯಿತು ! ಭೂಸ್ವಾಧೀನ ಅತ್ಯಂತ ಸಲೀಸಾಗಿ ನಡೆಯುತ್ತದೆ !
ರಾಗಿಗುಡ್ಡದ ಸುತ್ತ ಮೂರು ಕೆರೆಗಳಿವೆ. ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ರಾಗಿಗುಡ್ಡ ಎಂಬ ಅಪರೂಪದ ವನ್ಯಸಂಪತ್ತಿನ ಕಾರಣಕ್ಕಾಗಿಯೇ ಇಲ್ಲಿ ಅಪರೂಪದ ಪಕ್ಷಿ ಪ್ರಭೇದವಿದೆ. ರಾಗಿಗುಡ್ಡದಲ್ಲಿ ನಾಲ್ಕೈದು ದೇವಸ್ಥಾನಗಳೂ, ಕೋಟೆ ಮಾದರಿಗಳೂ ಇವೆ. ಗುಡ್ಡದ ಕೆಳಭಾಗದಲ್ಲಿರುವ ತುಂಗಾನದಿಯ ಕಾಲುವೆಯನ್ನೂ ಸೇರಿಸಿ ನೋಡಿದರೆ ಅದೊಂದು ಪ್ರಕೃತಿಯ ಸ್ವರ್ಗ !
ಇಂತಹ ಅಪರೂಪದ ಗುಡ್ಡವನ್ನು ಸ್ವಾಹ ಮಾಡಲು ಹಲವು ರೀತಿಯಲ್ಲಿ ಹಲವು ಸಂಸ್ಥೆಗಳು ಯೋಜನೆಗಳನ್ನು ಹಾಕಿಕೊಂಡಿದೆ. ಈ ಗುಡ್ಡದಲ್ಲಿ 108 ಅಡಿ ಎತ್ತರದ ಶಿವನ ಪ್ರತಿಮೆಯನ್ನು ಸ್ಥಾಪಿಸಬೇಕು, ಗೋಶಾಲೆಯನ್ನು ಪ್ರಾರಂಭಿಸಬೇಕು ಎಂದು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. 108 ಅಡಿ ಎತ್ತರದ ಶಿವನ ಪ್ರತಿಮೆ ಬಂದರೆ ಇದೇ ಗುಡ್ಡವೇ ಬರಿದಾಗುತ್ತದೆ. ಈಗಾಗಲೇ ಚಿಕ್ಕಬಳ್ಳಾಪುರದ ಶಿವನ ಪ್ರತಿಮೆಯ ಸುತ್ತಮುತ್ತ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. 108 ಅಡಿ ಎತ್ತರದ ಶಿವನ ಪ್ರತಿಮೆಯೆಂದರೆ 108 ಎಕರೆ ಪ್ರದೇಶ ಬೋಳಾಗುವುದು ಎಂದರ್ಥ. ಈ ಪ್ರತಿಮೆ ಸ್ಥಾಪನೆಯನ್ನು ರಾಜಕೀಯ ರಹಿತವಾಗಿ ಎಲ್ಲಾ ಪರಿಸರವಾದಿಗಳು ವಿರೋಧ ಮಾಡುತ್ತಾರೆ. 2023 ಮಾರ್ಚ್ 24 ರಂದು ಈ ಈ ಪ್ರತಿಮೆಯನ್ನು ವಿರೋಧಿಸಿ ಪರಿಸರವಾದಿಗಳು ಪತ್ರಿಕಾಗೋಷ್ಠಿ ನಡೆಸಿದ್ದರು. ಕೋಮುಗಲಭೆ ಇದೇ ಗುಡ್ಡದಲ್ಲಿ ನಡೆದರೆ ಆ ಬಳಿಕ ಪರಿಸರವಾದ ಎನ್ನುವುದು ಗೌಣವಾಗಿ, ಕೋಮುವಾದ ವಿಜೃಂಭಿಸುತ್ತದೆ. ಇನ್ನು ಶಿವನ ಪ್ರತಿಮೆಯನ್ನು ವಿರೋಧಿಸುವವರನ್ನು ಹಿಂದೂ ವಿರೋಧಿಗಳು ಎಂದು ಸಲೀಸಾಗಿ ಕರೆದು ಗುಡ್ಡವನ್ನು ಬೋಳಿಸಬಹುದು.
ಇದನ್ನೂ ಓದಿ ಮುಸ್ಲಿಮರು ಕ್ರಿಯೆಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ; ʼಸಹಿಸಿಕೊಂಡವನೇ ಗೆಲ್ಲುತ್ತಾನೆʼ ಎನ್ನುವ ಸತ್ಯವನ್ನು ಅರಿಯಬೇಕು
ಹುಬ್ಬಳ್ಳಿಯಲ್ಲೊಂದು ಉಣಕಲ್ ಕೆರೆ ಇದೆ. ಈ ಕೆರೆಯ ಸುತ್ತ ಸುಂದರೀಕರಣ ಮಾಡಿ ಸಂರಕ್ಷಿಸಲಾಗಿದೆ. ಆದರೆ ರಾಗಿಗುಡ್ಡವನ್ನು ನಾಶ ಮಾಡಲಾಗುತ್ತಿದೆ. ರಾಗಿಗುಡ್ಡದಲ್ಲಿ ಶಿವನ ಪ್ರತಿಮೆ ಯಾಕೆ ಸ್ಥಾಪಿಸಬೇಕು ? ರಾಗಿಗುಡ್ಡವನ್ನು ಪರಿಸರವಾದದ ನೆಲೆಯಲ್ಲಿ ಯಾಕೆ ಸಂರಕ್ಷಿಸಬಾರದು? ಹಾಗೆ ಮಾಡಿದರೆ ಮಾಫಿಯಾಗಳಿಗೆ ಭೂ ಅತಿಕ್ರಮಣ ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಕೋಮುಗಲಭೆ ಮಾಡಿದರೆ ಪ್ರತಿಮೆ ಸ್ಥಾಪನೆ ಜೊತೆಗೆ ಭೂ ಅತಿಕ್ರಮಣ ಸುಲಭವಾಗುತ್ತದೆ.
ಕೋಮುಗಲಭೆಗಳ ಹಿಂದೆ ಧರ್ಮ ಎಂಬುದು ನೆಪವಷ್ಟೆ! ಇಲ್ಲಿ ಬಂಡವಾಳವಾದ, ವ್ಯಾಪಾರ, ಭೂಮಿ ಸ್ವಾಧೀನ ಸೇರಿದಂತೆ ಮಾಫಿಯಾಗಳ ಹಿತಾಸಕ್ತಿಗಾಗಿ ಕೋಮುಗಲಭೆಯನ್ನು ಮಾಡಲಾಗುತ್ತದೆ. ಈ ಮಾಫಿಯಾ ರಾಜಕಾರಣ ತಿಳಿಯದ ಅಮಾಯಕ, ಬಡವರ ಮನೆಯ ಮಕ್ಕಳು ಧರ್ಮ ರಕ್ಷಣೆಯ ಅಮಲಿನಲ್ಲಿ ಜೈಲು ಸೇರುತ್ತಾರೆ, ಬದುಕು ಕಳೆದುಕೊಳ್ಳುತ್ತಾರೆ.