ರಾಜ್ಯದಲ್ಲಿ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗಾಗಿ ಬಳಸಲು ಸಲ್ಲಿಸುವ ‘ಅಫಿಡವಿಟ್ ಆಧಾರಿತ ಭೂ ಪರಿವರ್ತನೆ’ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಮತ್ತಷ್ಟು ಸರಳಗೊಳಿಸಿದೆ. ನಿಗದಿತ 30 ದಿನಗಳೊಳಗೆ ಜಿಲ್ಲಾಧಿಕಾರಿಗಳು ಯಾವುದೇ ತೀರ್ಮಾನ ಕೈಗೊಳ್ಳದಿದ್ದಲ್ಲಿ, ಅದನ್ನು ‘ಪರಿಭಾವಿತ ಭೂ ಪರಿವರ್ತನೆ’ ಎಂದು ಪರಿಗಣಿಸಿ ಸ್ವಯಂಚಾಲಿತವಾಗಿ ಅನುಮೋದನೆ ನೀಡಲು ಕಂದಾಯ ಇಲಾಖೆ ಆದೇಶಿಸಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 95ರ ಅಡಿಯಲ್ಲಿ ಭೂ ಪರಿವರ್ತನೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ಸರ್ಕಾರ ಈ ಮಹತ್ವದ ಕ್ರಮ ಕೈಗೊಂಡಿದೆ. ಮಾಸ್ಟರ್ ಪ್ಲಾನ್ ವ್ಯಾಪ್ತಿಯ ಹೊರಗಿರುವ ಜಮೀನುಗಳಿಗೆ ಸಂಬಂಧಿಸಿದಂತೆ ಅಫಿಡವಿಟ್ ಆಧಾರಿತ ಅರ್ಜಿಗಳನ್ನು ಸಲ್ಲಿಸಿದಾಗ, ಅಧಿಕಾರಿಗಳು ಕಾಲಮಿತಿಯೊಳಗೆ ಕಾರ್ಯನಿರ್ವಹಿಸುವುದು ಇನ್ನು ಮುಂದೆ ಕಡ್ಡಾಯವಾಗಲಿದೆ.
ಭೂ ಪರಿವರ್ತನೆ ಪ್ರಕ್ರಿಯೆಯಲ್ಲಿ ವಿವಿಧ ಹಂತದ ಅಧಿಕಾರಿಗಳಿಗೆ ಕೆಲವು ಕಾಲಮಿತಿಯನ್ನು ನಿಗದಿಪಡಿಸಿದೆ. ತಹಶೀಲ್ದಾರರು ಮತ್ತು ಅರಣ್ಯ ಇಲಾಖೆ 15 ದಿನಗಳಲ್ಲಿ ಅಭಿಪ್ರಾಯ ನೀಡಬೇಕು. ಜಿಲ್ಲಾಧಿಕಾರಿ ಕಚೇರಿ 5 ದಿನ, ಅಪರ ಜಿಲ್ಲಾಧಿಕಾರಿಗಳು 5 ದಿನ. ಅರ್ಜಿ ಸಲ್ಲಿಸಿದ ದಿನಾಂಕದಿಂದ ಒಟ್ಟು 30 ಕೆಲಸದ ದಿನಗಳೊಳಗೆ ಜಿಲ್ಲಾಧಿಕಾರಿಗಳು ಯಾವುದೇ ನಿರ್ಧಾರ ತೆಗೆದುಕೊಳ್ಳದಿದ್ದರೆ, ತಂತ್ರಾಂಶದ ಮೂಲಕವೇ ಆ ಅರ್ಜಿಗೆ ಅನುಮೋದನೆ ದೊರೆಯಲಿದೆ. ತಕ್ಷಣವೇ ಅರ್ಜಿದಾರರ ಲಾಗಿನ್‌ಗೆ ಶುಲ್ಕ ಪಾವತಿಸಲು ಸಂದೇಶ ಹೋಗಲಿದ್ದು, ಶುಲ್ಕ ಪಾವತಿಸಿದ ನಂತರ ಸ್ವಯಂಚಾಲಿತವಾಗಿ ಭೂ ಪರಿವರ್ತನಾ ಆದೇಶ ಸೃಜನೆಯಾಗಲಿದೆ.

ಸಾರ್ವಜನಿಕರು ಭೂ ಪರಿವರ್ತನೆಗಾಗಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದು ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಪಾರದರ್ಶಕವಾಗಿ ಕೆಲಸ ನಿರ್ವಹಿಸುವುದು ಈ ಆದೇಶದ ಮುಖ್ಯ ಉದ್ದೇಶವಾಗಿದೆ ಎಂದು ಕಂದಾಯ ಆಯುಕ್ತಾಲಯ ತಿಳಿಸಿದೆ.
