10 ಕೋಟಿ ಲಂಚ ಪಡೆದು, 200 ಕೋಟಿ ಮೌಲ್ಯದ ಭೂಮಿಯ ಪರಾಭಾರೆ; ತಹಶೀಲ್ದಾರ್ ಭಾಗ್ಯ ವಿರುದ್ದ ಕ್ರಮಕ್ಕೆ ಆದೇಶ

ರಾಜ್ಯ

ಬೆಂಗಳೂರಿನಲ್ಲಿ ನಡೆದಿರುವ 200 ಕೋಟಿ ರೂ.ಮೌಲ್ಯದ ಭೂಹಗರಣ ಬಯಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಮಂಜೂರು ಮಾಡಿದ ಭಾರೀ ಅಕ್ರಮವನ್ನು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಬಯಲಿಗೆಳೆದು, ತಹಶೀಲ್ದಾರ್ ಆರ್ ಭಾಗ್ಯ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಆದೇಶ ನೀಡಿದ್ದಾರೆ

ಉತ್ತರಹಳ್ಳಿ ವಡ್ಡರಪಾಳ್ಯ ಸರ್ವೇ ನಂ 6, 7ರಲ್ಲಿ 15 ಎಕರೆ ಭೂಮಿಯನ್ನು ಭೂ ಮಾಫಿಯಾದ ಗಿರಿಧರ್ ಎಂಬವರ ಹೆಸರಿಗೆ ನಕಲಿ ದಾಖಲೆ ಸೃಷ್ಟಿಸಿ ಮಂಜೂರು ಮಾಡಿದ್ದಾರೆ. ವಿಶೇಷ ತಹಸೀಲ್ದಾರ್ ಆಗಿದ್ದ ಆರ್.ಭಾಗ್ಯರ ಕೃಪೆಯಿಂದ ಗಿರಿಧರ್​ಎಂಬವರಿಗೆ ಭೂಮಿ ದೊರೆತ್ತಿದ್ದು, ಖಾಸಗಿ ಭೂಮಿ ಎಂದು ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಮಂಜೂರು ಮಾಡಿದ್ದಾರೆ. ಪ್ರತಿ ಎಕರೆಗೆ 15 ಕೋಟಿ ಬೆಲೆ ಬಾಳುವ ಈ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿದ್ದು, ಬೆಂಗಳೂರು ನಗರದ ವಿಶೇಷ ತಹಸಿಲ್ದಾರ್ ಭಾಗ್ಯರವರು ಗಿರಿಧರ್ ಎಂಬವರಿಗೆ ಖಾತೆ ಬದಲಾವಣೆ ಮಾಡಿದ್ದಾರೆ.

ಕೆ.ಎಚ್.ಬಿ ಯಲ್ಲಿ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿದ್ದ ತಹಶೀಲ್ದಾರ್ ಆರ್. ಭಾಗ್ಯರವರು 10 ಕೋಟಿ ರೂಪಾಯಿ ಲಂಚ ಪಡೆದು, 200 ಕೋಟಿ ಮೌಲ್ಯದ ಭೂಮಿಯನ್ನು ಪರಾಭಾರೆ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಇದೀಗ ತಹಶೀಲ್ದಾರ್ ಭಾಗ್ಯ ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯ ಆದೇಶ ನೀಡಿದ್ದಾರೆ.