‘ರೈತರು ವ್ಯವಸಾಯದ ಉದ್ದೇಶಗಳಿಗಾಗಿ ತಿರುಗಾಡಲು ಬಳಸುವ ಖಾಸಗಿ ಜಮೀನುಗಳಲ್ಲಿ ಗ್ರಾಮ ನಕಾಶೆ ಪ್ರಕಾರ ಇರುವ ಕಾಲುದಾರಿ, ಬಂಡಿ ದಾರಿ ಅಥವಾ ಇತರೆ ದಾರಿಗಳನ್ನು ಯಾವುದೇ ಜಮೀನಿನ ಮಾಲೀಕ ಮುಚ್ಚುವುದು ಕಾನೂನು ಬಾಹಿರ. ಇಂತಹ ಪ್ರಕರಣಗಳಲ್ಲಿ ಅಗತ್ಯ ಕ್ರಮ ಕೈಗೊಂಡು ರೈತರು ಓಡಾಡಲು ಅನುವು ಮಾಡಿಕೊಡಬೇಕು’ ಎಂದು ಎಲ್ಲಾ ತಹಶೀಲ್ದಾರ್ ಗಳಿಗೆ ಕಂದಾಯ ಇಲಾಖೆ ಸೂಚಿಸಿದೆ.
ರಾಜ್ಯದಲ್ಲಿ ರೈತರು ಕೃಷಿ ಉದ್ದೇಶಕ್ಕೆ ಬಳಸುವ ಕೃಷಿ ಸಲಕರಣೆ ಸಾಗಿಸಲು, ಬೆಳೆ ಸಾಗಿಸಲು ಅನ್ಯ ಭೂ ಮಾಲೀಕರ ಖಾಸಗಿ ಜಮೀನುಗಳಲ್ಲಿ ತಿರುಗಾಡಲು ದಾರಿ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಹಲವು ದೂರುಗಳು ಇಲಾಖೆಗೆ ಬಂದಿದ್ದು, ಗ್ರಾಮ ನಕಾಶೆ ಪ್ರಕಾರ ಗುರುತಿಸಿರುವ ಕಾಲುದಾರಿ, ಬಂಡಿದಾರಿ ಗಳಲ್ಲಿ ರೈತರು ಸಂಚರಿಸಲು ಯಾವುದೇ ಅಡ್ಡಿ ಮಾಡುವಂತಿಲ್ಲ. ಆದರೂ ಕೆಲ ಭೂ ಮಾಲೀಕರು ತಮ್ಮ ಭೂಮಿ ಮೂಲಕ ಹಾದು ಹೋಗಬೇಕಿರುವ ರೈತರಿಗೆ ತಿರುಗಾಡಲು ಅಡ್ಡಿಪಡಿಸುತ್ತಿದ್ದಾರೆ. ರೈತರು ಗುರುತಿಸಿರುವ ಜಾಗಗಳನ್ನು ಮುಚ್ಚಿಸುವುದು. ರೈತರು ಬಹುಕಾಲದಿಂದ ಬಳಸುವ ದಾರಿಗಳಲ್ಲಿ ತಿರುಗಾಡಲು ವೈಯಕ್ತಿಕ ದ್ವೇಷದಿಂದ ಅಡ್ಡಿಪಡಿಸುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕ ಭೂಕಂದಾಯ ನಿಯಮಗಳು 1996 ರ ನಿಯಮ 59 ರ ಅಡಿ ದಾರಿಯ ಹಕ್ಕುಗಳು ಮತ್ತು ಇತರೆ ಅನುಭೋಗದ ಹಕ್ಕುಗಳ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ದಾರಿ ಬಿಡಲು ಸಂಬಂಧಪಟ್ಟ ಜಮೀನುಗಳವರು ಒಪ್ಪಿದರೆ ಹಕ್ಕುಗಳ ದಾಖಲೆ ರಿಜಿಸ್ಟರ್ ನಲ್ಲಿ ನಮೂದಿಸಲು ಅವಕಾಶವಿದೆ. ಇಂಡಿಯನ್ ಈಸ್ ಮೆಂಟ್ ಆಕ್ಟ್-1882 ರ ಪ್ರಕಾರ ಪ್ರತಿ ಜಮೀನಿನ ಮಾಲೀಕರು ಅಥವಾ ಜಮೀನಿನ ಅನುಭವದಲ್ಲಿರುವವರು ಅವರ ಭೂಮಿಯನ್ನು ಪ್ರವೇಶಿಸುವ ಹಕ್ಕು ಮತ್ತು ವಹಿವಾಟಿನ ಹಕ್ಕನ್ನು ಹೊಂದಿದ್ದಾರೆ. ಇದಕ್ಕೆ ನೆರೆಹೊರೆಯ ಜಮೀನಿನವರು ಯಾವುದೇ ಧಕ್ಕೆ ತರುವಂತಿಲ್ಲ ಎಂದು ವಿವರಿಸಲಾಗಿದೆ.

ಇಂತಹ ಸಮಸ್ಯೆಗಳನ್ನು ಪರಿಹರಿಸಲು ತಾಲೂಕಿನ ತಹಶೀಲ್ದಾರರು ಕ್ರಮ ಕೈಗೊಳ್ಳಬೇಕು. ನಕಾಶೆ ಪ್ರಕಾರ ಇರುವ ಕಾಲುದಾರಿ, ಬಂಡಿದಾರಿ ಅಥವಾ ಇತರೆ ರಸ್ತೆಗಳಲ್ಲಿ ಅನ್ಯ ಕೃಷಿ ಬಳಕೆದಾರರು ತಿರುಗಾಡಲು ಅವಕಾಶ ನೀಡದೆ ಅಡ್ಡಿಪಡಿಸುವಂತಹ ಅಥವಾ ಬಳಸುವ ದಾರಿಯನ್ನು ಮುಚ್ಚಿರುವ ಪ್ರಕರಣ ಕಂಡುಬಂದರೆ ಕೂಡಲೇ ತೆರವುಗೊಳಿಸಬೇಕು ಎಂದು ಕಂದಾಯ ಇಲಾಖೆ (ಭೂ ಮಂಜೂರಾತಿ) ಅಧೀನ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ.