20 ಶಾಸಕರಿಗೆ ನಿಗಮ ಮತ್ತು ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲು ನಿರ್ಧಾರ; ಶಾಸಕರ ಹಿಂದೇಟು.!

ರಾಜ್ಯ

ಲೋಕಸಭಾ ಚುನಾವಣೆಗೂ ಮೊದಲು ಪಕ್ಷ ಸಂಘಟನೆಗೆ ಅನುಕೂಲವಾಗುವಂತೆ ಸುಮಾರು 20 ಶಾಸಕರಿಗೆ ನಿಗಮ ಮತ್ತು ಮಂಡಳಿಗಳ ಅಧ್ಯಕ್ಷಸ್ಥಾನ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಒಮ್ಮತಕ್ಕೆ ಬಂದಿದ್ದಾರೆ. ಇದಕ್ಕಾಗಿ ಸುಮಾರು ನಾಲ್ಕು ತಾಸು ಸಭೆ ನಡೆಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ನಿಗಮ, ಮಂಡಳಿಗಳ ನಾಮನಿರ್ದೇಶನಕ್ಕೆ ಸಂಬಂಧಿಸಿದಂತೆ ಇಬ್ಬರೂ ಶುಕ್ರವಾರ ನಾಲ್ಕು ಗಂಟೆ ಚರ್ಚೆ ನಡೆಸಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ 15 ರಿಂದ 20 ಶಾಸಕರಿಗೆ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನಪಡಿಸಲು ನಿರ್ಧರಿಸಲಾಗಿದೆ. ವಾರದೊಳಗೆ ಆದೇಶವನ್ನೂ ಹೊರಡಿಸುವ ತೀರ್ಮಾನಕ ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನಿಗಮ-ಮಂಡಳಿಗಳ ನೇಮಕಾತಿಯಲ್ಲೂ ಪ್ರಾದೇಶವಾರು, ಜಾತಿವಾರು, ಪ್ರಾತಿನಿಧ್ಯ ನೀಡಲು ನಿರ್ಧರಿಸಲಾಗಿದ್ದು, ಸಂಪುಟ ಸೇರಲು ಆಕಾಂಕ್ಷಿಗಳಾಗಿದ್ದ ಕೆಲವು ಹಿರಿಯ ಶಾಸಕರನ್ನೂ ನಿಗಮ, ಮಂಡಳಿಗಳ ಅಧ್ಯಕ್ಷರಾಗಿ ಮಾಡುವ ಮೂಲಕ ಅವರನ್ನು ಸಮಾಧಾನಪಡಿಸಲು ತೀರ್ಮಾನಿಸಲಾಗಿದೆ. ಆದರೆ ನಿಗಮ ಮಂಡಳಿಗಳ ಅಧ್ಯಕ್ಷಗಾದಿ ಪಡೆದವರನ್ನು ಮುಂದಿನ ಸಚಿವ ಸಂಪುಟದಲ್ಲಿ ಪರಿಗಣಿಸುವಂತಿಲ್ಲ. ಎಂಬ ಎಐಸಿಸಿ ವರಿಷ್ಠರ ಷರತ್ತು ಶಾಸಕರ ಪಾಲಿಗೆ ತೊಡಕು ಸೃಷ್ಟಿಸಿದೆ.

ಇತ್ತೀಚಿಗೆ ಈ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಜೊತೆಗೆ ಶಿವಕುಮಾರ್ ಚರ್ಚೆ ನಡೆಸಿದ್ದರು. ಸುರ್ಜೇವಾಲಾ ಅವರು ಮಧ್ಯ ಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿದ್ದು, ಅವರ ಜೊತೆಗೆ ಚರ್ಚಿಸಿದ ಬಳಿಕ ನಿಗಮ, ಮಂಡಳಿಗಳ ನೇಮಕಾತಿ ಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.