ವಿರೋಧ ಪಕ್ಷ ನಾಯಕ ಸ್ಥಾನಕ್ಕೆ ನಾನೂ ಆಕಾಂಕ್ಷಿ: ಅಶ್ವತ್ಥ ನಾರಾಯಣ

ರಾಜ್ಯ

ಬಿಜೆಪಿ ಹೈಕಮಾಂಡ್‌ ಕೊನೆಗೂ ಬಿ ಎಸ್ ವೈ ಪುತ್ರ ವಿಜಯೇಂದ್ರಗೆ ಪಕ್ಷದ ರಾಜ್ಯ ಘಟಕದ ಸಾರಥ್ಯ ವಹಿಸಿದೆ. ಇದರಿಂದ ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದ ಸಿ.ಟಿ ರವಿ, ವಿ.ಸೋಮಣ್ಣ, ಅರವಿಂದ್ ಬೆಲ್ಲದ್‌ ಸೇರಿದಂತೆ ಕೆಲ ನಾಯಕರಿಗೆ ನಿರಾಸೆಯಾಗಿದೆ. ಈ ನಡುವೆ ಬಾಕಿ ಉಳಿದಿರುವ ವಿಪಕ್ಷ ನಾಯಕನ ಸ್ಥಾನಕ್ಕೆ ಯಾರು ಆಯ್ಕೆಯಾಗಲಿದ್ದಾರೆ. ಎಂಬ ಕುತೂಹಲದೊಂದಿಗೆ ಅಕಾಂಕ್ಷಿಗಳು ಬಹಳ ಮಂದಿ ನಾಯಕರು ಕ್ಯೂನಲ್ಲಿದ್ದಾರೆ.

ವಿಪಕ್ಷ ನಾಯಕನ ಆಯ್ಕೆ ವಿಷಯದಲ್ಲಿ ಮಾತನಾಡಿದ ಶಾಸಕ ಅಶ್ವತ್ಥ ನಾರಾಯಣ, ರಾಜ್ಯಾಧ್ಯಕ್ಷರ ನೇಮಕ ಆಗಿದೆ. ಸೂಕ್ತವಾದ ವ್ಯಕ್ತಿಯನ್ನು ವಿರೋಧ ಪಕ್ಷದ ನಾಯಕನನ್ನಾಗಿ ನಮ್ಮ ನಾಯಕರು ನೇಮಕ ಮಾಡುತ್ತಾರೆ. ವಿಧಾನಸಭೆಯಲ್ಲಿ ಬಿಜೆಪಿಯ 66 ಜನ ಶಾಸಕರಿದ್ದಾರೆ. ಎಲ್ಲರೂ ವಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿಗಳು. ನಾನೂ ಕೂಡ ಆಕಾಂಕ್ಷಿ ಎಂದಿದ್ದಾರೆ.

ಬಿಜೆಪಿ-ಜೆಡಿಎಸ್‌ ಮೈತ್ರಿಯಾದ ಬಳಿಕ ಜೆಡಿಎಸ್‌ ನಾಯಕ ಕುಮಾರಸ್ವಾಮಿ ವಿಪಕ್ಷ ನಾಯಕರಾಗಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಮಾತನಾಡಿದ ಅಶ್ವತ್ಥ ನಾರಾಯಣ, ವಿಧಾನಸಭೆಯಲ್ಲಿ ಬಿಜೆಪಿ ಕಾನೂನಾತ್ಮಕವಾಗಿ ವಿರೋಧ ಪಕ್ಷ.‌ ನಮ್ಮ ಪಕ್ಷದಲ್ಲೇ ಬೇಕಾದಷ್ಟು ನಾಯಕರಿದ್ದಾರೆ. ಜೆಡಿಎಸ್ ಜೊತೆ ಮೈತ್ರಿ ಆಗಿರಬಹುದು. ಹಾಗೆಂದ ಮಾತ್ರಕ್ಕೆ ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾ‌ನ ಕೊಡಬೇಕು ಅಂತ ಏನೂ ಇಲ್ಲ‌ ಎಂದು ಹೇಳಿದ್ದಾರೆ.