ವಾದ ವಿವಾದದ ಹಿನ್ನೆಲೆಯಲ್ಲಿ 22 ವರ್ಷದ ವಿವಾಹಿತ ಮಹಿಳೆಯೊಬ್ಬಳಿಗೆ ತನ್ನ ಹಳೆಯ ಸ್ನೇಹಿತ ಹಲವು ಬಾರಿ ಚೂರಿಯಿಂದ ಇರಿದು ಆಕೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಈಶಾನ್ಯ ದೆಹಲಿ ಶಾಸ್ತ್ರಿ ಪಾರ್ಕ್ ಪ್ರದೇಶದಲ್ಲಿ ಭಾನುವಾರ ನಡೆದಿದೆ. ಸಂತ್ರಸ್ತೆಯನ್ನು ಶಾಸ್ತ್ರಿ ಪಾರ್ಕ್‌ನ ಹಸ್ಮತ್ ಜಹಾನ್ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಯನ್ನು ಕೊಲೆ ಯತ್ನದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಲಂದ್ ಮಸೀದಿ ಬಳಿ ಈ ಘಟನೆ ನಡೆದಿದ್ದು, ಬಿಹಾರದ ಕಿಶನ್‌ಗಂಜ್ ಮೂಲದ ಆರೋಪಿ ಶಾ ಬಾಬು (23) ಜಹಾನ್ ಅವರನ್ನು ಭೇಟಿಯಾಗಲು ಬಂದಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಹಿಳೆಯೊಬ್ಬರಿಗೆ ಇರಿದಿರುವ ಬಗ್ಗೆ ಮಧ್ಯಾಹ್ನ 3.25 ಕ್ಕೆ ಕರೆ ಬಂದಿತು. ಜಹಾನ್ ಅವರ ತಲೆ, ಮುಖ ಮತ್ತು ಕೈಗಳ ಮೇಲೆ ಅನೇಕ ಇರಿತದ ಗಾಯಗಳಾಗಿವೆ. ಸಂತ್ರಸ್ತೆಯನ್ನು ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಜಿಟಿಬಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಆಕೆ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿರವಾಗಿದ್ದಾಳೆ. ಆರೋಪಿ ಶಾ ಬಾಬುನನ್ನು ಬಂಧಿಸಲಾಗಿದ್ದು, ಆತನಿಂದ ಅಪರಾಧಕ್ಕೆ ಬಳಸಿದ ಚಾಕುವನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಮಹಿಳೆಯ ಪತಿ ಮೊಹಮ್ಮದ್ ಮುನ್ನಾ ವೃತ್ತಿಯಲ್ಲಿ ಟೈಲರ್ ಆಗಿದ್ದಾರೆ. ಆರೋಪಿ ಮತ್ತು ಸಂತ್ರಸ್ತೆ ಬಿಹಾರದ ಕಿಶನ್‌ಗಂಜ್‌ನಲ್ಲಿ ನೆರೆಹೊರೆಯವರಾಗಿದ್ದರಿಂದ ಮದುವೆಗೆ ಮುಂಚೆಯೇ ಪರಸ್ಪರ ಪರಿಚಯವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ಕು ತಿಂಗಳ ಹಿಂದೆ ಜಹಾನ್ ಮೊಹಮ್ಮದ್ ಮುನ್ನಾ ಅವರನ್ನು ಮದುವೆಯಾಗಿದ್ದರು. ಆಕೆಯಿಂದ ಮದುವೆಯಿಂದ ಅಸಮಾಧಾನಗೊಂಡಿದ್ದ ಆರೋಪಿ ಆಕೆಯನ್ನು ಭೇಟಿಯಾಗಲು ದೆಹಲಿಗೆ ಬಂದಿದ್ದ. ಆಕೆಯೊಂದಿಗೆ ಮಾತನಾಡುವಾಗ ತಾಳ್ಮೆ ಕಳೆದುಕೊಂಡು ಅನೇಕ ಬಾರಿ ಚಾಕುವಿನಿಂದ ಇರಿದಿದ್ದಾನೆ ಎಂದು ಡಿಸಿಪಿ ಟಿರ್ಕಿ ಹೇಳಿದರು