ನ್ಯಾಯಾಲಯದ ಪ್ರಕರಣಗಳಲ್ಲಿ ದಾವೆದಾರರ ಜಾತಿ ಅಥವಾ ಧರ್ಮವನ್ನು ಉಲ್ಲೇಖಿಸುವ ಅಭ್ಯಾಸವನ್ನು ತಕ್ಷಣವೇ ಕೈ ಬಿಡಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ರಿಜಿಸ್ಟ್ರೀ ಹಾಗೂ ಇತರ ಎಲ್ಲಾ ನ್ಯಾಯಾಲಯಗಳಿಗೆ ನಿರ್ದೇಶಿಸಿದೆ. ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ದ್ವಿಸದಸ್ಯ ಪೀಠವು, ಹೈಕೋರ್ಟ್ ಗಳು ಅಥವಾ ಅಧೀನ ನ್ಯಾಯಾಲಯಗಳ ಮುಂದೆ ಸಲ್ಲಿಕೆಯಾಗುವ ಯಾವುದೇ ಅರ್ಜಿಯಲ್ಲಿ ಕಕ್ಷಿದಾರರ ಜಾತಿ ಅಥವಾ ಧರ್ಮವು ನಮೂದಾಗಿಲ್ಲ ಎಂಬುವುದನ್ನು ನ್ಯಾಯಾಲಯಗಳು ಖಚಿತಪಡಿಸಿಕೊಳ್ಳಬೇಕೆಂದು ಸೂಚಿಸಿವೆ.
“ಅರ್ಜಿಗಳಲ್ಲಿ ದಾವೆದಾರರ ಜಾತಿ ಅಥವಾ ಧರ್ಮವನ್ನು ಉಲ್ಲೇಖಿಸುವುದರಲ್ಲಿ ಯಾವುದೇ ಸಕಾರಣ ಕಾಣಿಸುತ್ತಿಲ್ಲ. ಇಂಥ ಅಭ್ಯಾಸ ತಕ್ಷಣವೇ ನಿಲ್ಲಿಸಬೇಕು” ಕೋರ್ಟ್ ಹೇಳಿದೆ. ರಾಜಸ್ಥಾನದ ಕೌಟುಂಬಿಕ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ವೈವಾಹಿಕ ವಿವಾದದಲ್ಲಿ ವರ್ಗಾವಣೆ ಅರ್ಜಿಯನ್ನು ಅನುಮತಿಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಆದೇಶವನ್ನು ನೀಡಿದೆ. ಕಕ್ಷಿದಾರರ ಅರ್ಜಿಯಲ್ಲಿ ಪತಿ ಪತ್ನಿ ಇಬ್ಬರ ಜಾತಿ ನಮೂದಿಸಿರುವುದಕ್ಕೆ ಸುಪ್ರೀಂ ಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ.