ರಾಜ್ಯಸಭಾ ಟಿಕೆಟ್‌ಗಾಗಿ ಕೈ ಪಡೆಯಲ್ಲಿ ಬಾರೀ ಲಾಬಿ; ಬಿ.ಎಲ್ ಶಂಕರ್‌ ಪರ ಸಿದ್ದು, ಡಿಕೆಶಿ ಬ್ಯಾಟಿಂಗ್, ಹೈಕಮಾಂಡ್ ಚಿತ್ತ..ಎತ್ತ..?

ರಾಜ್ಯ

ಈ ತಿಂಗಳಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಯ ಕಾಂಗ್ರೆಸ್‌ ಟಿಕೆಟ್‌ಗಾಗಿ ಈಗ ಕೈ ಪಡೆಯಲ್ಲಿ ಒಳಗೊಳಗೇ ಲಾಬಿ ಆರಂಭವಾಗಿದೆ. ರಾಜ್ಯಸಭಾ ಸದಸ್ಯರಾಗಿರುವ ಚಂದ್ರಶೇಖರ್‌, ಹನುಮಂತಯ್ಯ ಹಾಗೂ ನಸೀರ್‌ ಹುಸೇನ್‌ ಅವರ ಅವಧಿ ಮುಗಿಯಲಿದ್ದು, ಈ ಮೂರು ಸ್ಥಾನಗಳ ಮೇಲೆ ಹಲವರು ಕಣ್ಣು ಹಾಕಿದ್ದಾರೆ. ಜತೆಗೆ ನಿವೃತ್ತಿ ಹೊಂದಲಿರುವವರು ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಸಕಲ ಬಗೆಯ ಕಸರತ್ತು ನಡೆಸುತ್ತಿದ್ದಾರೆ. ಈ ಮಧ್ಯೆ ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಬೇಕೆಂಬ ಲಾಬಿಯು ಬಹಳ ಜೋರಾಗಿ ನಡೆಯುತ್ತಿದೆ.

ನಿವೃತ್ತಿಯಾಗಲಿರುವವರಲ್ಲಿ ಒಬ್ಬರು ಒಕ್ಕಲಿಗ, ಮತ್ತೊಬ್ಬರು ದಲಿತರು, ಇನ್ನೊಬ್ಬರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಇದೇ ಸಮುದಾಯಕ್ಕೆ ಮತ್ತೆ ಅವಕಾಶ ಕೊಡಬೇಕೆಂಬ ಕೂಗು ಇದ್ದರೆ, ಈಗಾಗಲೇ ಈ ಸಮುದಾಯಗಳಿಗೆ ಅವಕಾಶ ಕಲ್ಪಿಸಿರುವುದರಿಂದ ಬೇರೆ ಸಮುದಾಯಗಳಿಗೂ ಪ್ರಾತಿನಿಧ್ಯ ನೀಡಬೇಕು ಎಂಬ ಬೇಡಿಕೆ ಇದೆ.

ಬಿ.ಎಲ್‌.ಶಂಕರ್‌ ಹಾಗೂ ಆರತಿ ಕೃಷ್ಣ ಅವರ ಹೆಸರು ಮುಂಚೂಣಿಗೆ ಬಂದಿದೆ. ಕಾಂಗ್ರೆಸ್‌ ಸೇರಿದ ಬಳಿಕ ಶಂಕರ್‌ ಅವರಿಗೆ ಇದುವರೆಗೆ ಯಾವುದೇ ಅಧಿಕಾರ ದೊರೆತಿಲ್ಲ. ಕೆಪಿಸಿಸಿಯಲ್ಲಿ ಯಾರೇ ಅಧ್ಯಕ್ಷರಾಗಿದ್ದರೂ ಅವರು ಮಾರ್ಗದರ್ಶಿ, ಚಿಂತಕರ ಚಾವಡಿಯಲ್ಲಿ ಕೆಲಸ ಮಾಡುತ್ತಲೇ ಬಂದಿದ್ದಾರೆ. ಸಮಾಜದಲ್ಲಿ ಪ್ರಗತಿಪರ ಚಿಂತಕ, ವಿಭಿನ್ನ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಈ ಬಾರಿ ಅವರಿಗೆ ಅವಕಾಶ ಕೊಡಬೇಕೆಂದು ಪಕ್ಷದೊಳಗಿನ ಒಂದು ಗುಂಪು ಶಂಕರ್‌ ಪರ ಲಾಬಿ ಮಾಡತೊಡಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಶಂಕರ್‌ ಪರ ಒಲವಿದ್ದರೂ ಹೈಕಮಾಂಡ್‌ ಚಿತ್ತ.. ಎತ್ತ..! ಎಂಬುದು ಕುತೂಹಲ ಕೆರಳಿಸಿದೆ.