ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅದಕ್ಕಿಂತ ಕೆಳ ಹಂತದ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಕನಿಷ್ಠ ಎರಡು ವರ್ಷ ಕಾಲಾವಕಾಶ ನಿಗದಿಪಡಿಸಿರುವ ‘ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕ-2024’ ಮೇಲ್ಮನೆಯಲ್ಲಿ ಅಂಗೀಕಾರಗೊಂಡಿತು. ಗೃಹ ಸಚಿವ ಡಾ.ಜಿ ಪರಮೇಶ್ವರ್ ಪರ್ಯಾಲೋಚನೆಗೆ ಕೋರಿದ ಬಳಿಕ 17 ಸದಸ್ಯರು ಚರ್ಚೆ ನಡೆಸಿದ ಬಳಿಕ ಅನುಮೋದನೆ ನೀಡಲಾಯಿತು. “ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲರ ಒಪ್ಪಿಗೆ ದೊರೆತು, ರಾಜ್ಯಪತ್ರದಲ್ಲಿ ಪ್ರಕಟವಾಗುತ್ತಿದ್ದಂತೆಯೇ ಅದು ಜಾರಿಗೆ ಬರಲಿದೆ” ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು. “ಕಾಯಿದೆ ಪ್ರಕಾರ ಕನಿಷ್ಠ ಎರಡು ವರ್ಷ ವರ್ಗಾವಣೆ ಮಾಡುವುದಿಲ್ಲ . ಅಧಿಕಾರಿಗಳು ಉತ್ತಮ ರೀತಿಯಲ್ಲಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿದರೆ, ಜನರು ಬಯಸಿದರೆ 3 ಅಥವಾ 4 ವರ್ಷ ಒಂದೇ ಕಡೆ ಮುಂದುವರಿಯಬಹುದು” ಎಂದು ಸದನಕ್ಕೆ ತಿಳಿಸಿದ್ದಾರೆ.
ಪೊಲೀಸ್ ಇಲಾಖೆಯ ಅಧಿನಿಯಮದಲ್ಲಿ ಹಲವು ತಿದ್ದುಪಡಿ ತರಲಾಗಿದೆ. ಜತೆಗೆ ಕೆಲವು ಪೂರಕ ಅಂಶಗಳನ್ನು ಕೂಡ ಸೇರಿಸಲಾಗಿದೆ. ಇನ್ಸ್ ಪೆಕ್ಟರ್, ಡಿವೈಎಸ್‌ಪಿ ಸೇರಿದಂತೆ (ಐಪಿಎಸ್ ಹೊರತು ಪಡಿಸಿದ ಅಧಿಕಾರಿಗಳು) ಹಿರಿಯ ಪೊಲೀಸ್ ಅಧಿಕಾರಗಳ ವರ್ಗಾವಣೆ ಅವಧಿ 1 ವರ್ಷವಿತ್ತು. ಅದನ್ನು 2 ವರ್ಷ ವಿಸ್ತರಿಸಲಾಗಿದೆ. ಅಸಮರ್ಥ ಅಧಿಕಾರಿಗಳನ್ನು 2 ವರ್ಷ ಕೂಡ ಒಂದೇ ಸ್ಥಳದಲ್ಲಿ ಇರಿಸಲಾಗದು. ಈ ಬಗ್ಗೆ ನಿಯಮಾವಳಿ ರೂಪಿಸಲಾಗುವುದು ಎಂದರು.
ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿಕೊಳ್ಳುವ ಪೊಲೀಸ್ ಅಧಿಕಾರಿಗಳ ಮೇಲೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ. ಕೆಲವು ಪೊಲೀಸ್ ಅಧಿಕಾರಿಗಳು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ವಿರೋಧ ಪಕ್ಷಗಳ ಸದಸ್ಯರು ಪ್ರಸ್ತಾಪ ಮಾಡಿದ್ದಾರೆ. ಒಂದು ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳು ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿಕೊಂಡಿರುವುದು ಕಂಡು ಬಂದರೆ ಸರ್ಕಾರ ಅಂತಹ ಅಧಿಕಾರಿಗಳ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಲಿದೆ. ರಿಯಲ್ ಎಸ್ಟೇಟ್, ಸಿವಿಲ್ ವಿಚಾರಗಳಲ್ಲಿ ಮಧ್ಯಪ್ರವೇಶ ಮಾಡಬಾರದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಆಗಿ ಎಚ್ಚರಿಕೆ ನೀಡಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದ್ದಾರೆ.
