ಬೆಳಗಾವಿ ಐನಾಪುರ ಪಟ್ಟಣದಲ್ಲಿ ಭೂ ಒತ್ತುವರಿ ಪ್ರಶ್ನಿಸಿದ ಮಹಿಳೆಯನ್ನು ದುಷ್ಕರ್ಮಿಗಳು ಅರೆಬೆತ್ತಲುಗೊಳಿಸಿ ಹಲ್ಲೆ ನಡೆಸಿದ್ದಾರೆಂದು ಹೇಳಲಾಗಿದ್ದು, ಘಟನೆ ಸಂಬಂಧ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ಹಾಗೂ ಆಕೆಯ ಪುತ್ರನ ಮಗನ ಮೇಲೂ ಹಲ್ಲೆ ನಡೆಸಲಾಗಿದ್ದು, ಸಂತ್ರಸ್ತೆ ಗುರುವಾರ ಮಾಧ್ಯಮಗಳ ಎದುರು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ವಿಷಯ ಬಹಿರಂಗವಾಗುತ್ತಿದ್ದಂತೆ ಐನಾಪುರಕ್ಕೆ ಆಗಮಿಸಿದ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ ಎಸ್.ಎನ್, ಅವರು ಸಂತ್ರಸ್ತ ಮಹಿಳೆ ಹಾಗೂ ಕುಟುಂಬಸ್ಥರಿಂದ ಮಾಹಿತಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಭರವಸೆ ನೀಡಿದರು. ಅಲ್ಲದೇ ಸಂತ್ರಸ್ತ ಮಹಿಳೆ ಹಾಗೂ ಪುತ್ರನಿಂದ ದೂರು ಪಡೆದು ಎಫ್ ಐ ಆರ್ ದಾಖಲಿಸಿಕೊಳ್ಳುವಂತೆ ಠಾಣಾಧಿಕಾರಿಗಳಿಗೆ ಸೂಚಿಸಿದರು. ಮಹಿಳೆಯನ್ನು ಅರೆ ಬೆತ್ತಲೆಗೊಳಿಸಿ, ಪುತ್ರನ ಮೇಲೆ ಮಾರಣಾಂತಿಕವಾಗಿ ಹಲ್ಲೆಗೈದ 13 ಮಂದಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
