ಏರ್ ಇಂಡಿಯಾ ಸಂಸ್ಥೆಗೆ 30 ಲಕ್ಷ ರೂಪಾಯಿ ದಂಡ ವಿಧಿಸಿದ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಐ)

ರಾಷ್ಟ್ರೀಯ

ಮುಂಬಯಿ ವಿಮಾನ ನಿಲ್ದಾಣದಲ್ಲಿ ಗಾಲಿ ಕುರ್ಚಿ ಸಿಗದೇ ಹಿರಿಯ ಪ್ರಯಾಣಿಕರೊಬ್ಬರು ಟರ್ಮಿನಲ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕುಸಿದುಬಿದ್ದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್ ಇಂಡಿಯಾಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) 30 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಫೆಬ್ರವರಿ 12 ರಂದು ಈ ದುರ್ಘಟನೆ ನಡೆದಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಡಿಜಿಸಿಎ, ಏರ್ ಇಂಡಿಯಾಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು. ಏರ್ ಇಂಡಿಯಾ ಸಲ್ಲಿಸಿದ ವರದಿಯನ್ನು ಪರಿಶೀಲಿಸಿದ ಡಿಜೆಸಿಎ, ಈ ಪ್ರಕರಣದಲ್ಲಿ ವಿಮಾನಯಾನ ಸಂಸ್ಥೆಯ ನಿರ್ಲಕ್ಷ್ಯ ಎದ್ದು ಕಂಡುಬರುತ್ತದೆ ಎಂದು ಹೇಳಿ 30 ಲಕ್ಷ ರೂಪಾಯಿ ದಂಡ ಹಾಕಿದೆ. ಫೆಬ್ರವರಿ 20 ರಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ ಎಚ್ ಆರ್ ಸಿ) ಕೂಡ ಡಿಜಿಸಿಎ ಗೆ ನೋಟಿಸ್ ಜಾರಿಗೊಳಿಸಿತ್ತು.

ಅಮೆರಿಕದ ಪಾಸ್ ಪೋರ್ಟ್ ಹೊಂದಿದ್ದ ವೃದ್ಧ ದಂಪತಿ ಫೆಬ್ರವರಿ 12 ರಂದು ನ್ಯೂಯಾರ್ಕ್ ನಿಂದ ಮುಂಬಯಿ ಏರ್ ಪೋರ್ಟ್ ಗೆ ಬಂದಿಳಿದಿದ್ದರು. ಟರ್ಮಿನಲ್ ಗೆ ಹೋಗಲು ಇವರು 2 ಗಾಲಿ ಕುರ್ಚಿಗಳನ್ನು ಮುಂಗಡವಾಗಿಯೇ ಕಾಯ್ದಿರಿಸಿದ್ದರು. ಆದರೆ ಗಾಲಿ ಕುರ್ಚಿ ಕೊರತೆಯಿಂದ ಏರ್ ಇಂಡಿಯಾ ಒಂದನ್ನು ಮಾತ್ರ ಒದಗಿಸಿತ್ತು. ಹೀಗಾಗಿ ವೃದ್ಧ ಪತಿಯು ತಮ್ಮ ಪತ್ನಿಯನ್ನು ಗಾಲಿ ಕುರ್ಚಿಯಲ್ಲಿ ಕೂರಿಸಿಕೊಂಡು ಹೋಗಿ ಟರ್ಮಿನಲ್ ನಲ್ಲಿ 1.5 ಕಿ.ಮೀ ನಡೆದುಕೊಂಡು ಹೋಗಿದ್ದರು. ಈ ವೇಳೆ ಕುಸಿದುಬಿದ್ದು ಮೃತಪಟ್ಟಿರುವ ಬಗ್ಗೆ ವರದಿಯಾಗಿತ್ತು. ಈ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಿತ್ತು.