ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಟಾಬಯಲು ಮಾಡಿದ್ದ, ಗುಳುಂ ಗ್ಯಾಂಗ್ ವಿರುದ್ಧ ಸಮರ ಸಾರಿದ ಧೈರ್ಯವಂತ ಪದ್ಮನಾಭ ಸಾಮಂತ್..!

ಕರಾವಳಿ

ಇದ್ದಕ್ಕಿದ್ದಂತೆ ಆತ್ಮಹತ್ಯೆಗೈಯ್ಯುವ ಹೇಡಿಯಲ್ಲ ಈತ. ಇದರ ಹಿಂದಿದೆಯಾ ಕಾಣದ ಕೈಗಳ ಕೈವಾಡ.?

ಬಂಟ್ವಾಳ ವಿಧಾನಸಭಾ ಕ್ಷೇತ್ರ ರಾಜಕೀಯ ಜಂಗೀಕುಸ್ತಿಗಳ ತಾಣ. ಜೊತೆಗೆ ಬ್ರಹ್ಮಾಂಡ ಅಕ್ರಮಗಳ ತವರೂರು ಕೂಡ ಹೌದು. ಧೋ ನಂಬರ್ ದಂಧೆಕೋರರು ರಾಜಕಾರಣದ ಸಖ್ಯ ಬೆಳೆಸಿ ತಮ್ಮ ದಂಧೆಯನ್ನು ನಿರಾಂತಕವಾಗಿ ನಡೆಸಿಕೊಂಡು ಹೋಗುವ ಮೆಟ್ಟಿಲು ಮಾಡಿಕೊಂಡಿದ್ದರು. ಇಂತಹವರಿಗೆ ದೊಡ್ಡ ತಲೆನೋವಾಗಿದ್ದು ವಾಮದಪದವಿನ ಪದ್ಮನಾಭ ಸಾವಂತ್ ಅನ್ನುವ ತೆಳ್ಳಗಿನ ಯುವಕ. ಸಾಮಾಜಿಕ ಕಾರ್ಯಕರ್ತನಾಗಿ, ಕಾಂಗ್ರೆಸ್ ಪಕ್ಷದ ಮುಂದಾಳು ಆಗಿ, ಎಲ್ಲಕ್ಕಿಂತ ಹೆಚ್ಚಾಗಿ ಮಾಹಿತಿ ಹಕ್ಕು ಕಾರ್ಯಕರ್ತನಾಗಿ ಬಿಜೆಪಿ ನಾಯಕರ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಇಂಚಿಂಚೂ ಬಯಲಿಗೆ ತರುತ್ತಿದ್ದ ಸಾವಂತ್ ಸದ್ದಿಲ್ಲದೆ ಬಿಜೆಪಿಗರ ನೂರಾರು ಅಕ್ರಮಗಳನ್ನು ಬಯಲಿಗೆ ತಂದಿದ್ದ. 2018-2023 ನೇ ಸಾಲಿನ ಅಕ್ರಮ ಸಕ್ರಮ ಸಮಿತಿಯಲ್ಲಿ ಬಂಟ್ವಾಳದ ಶಾಸಕರು ಅಧ್ಯಕ್ಷರಾಗಿದ್ದರು. ಬಿಜೆಪಿ ಜೊತೆ ಗುರುತಿಸಿಕೊಂಡವರು ಈ ಸಮಿತಿಯಲ್ಲಿ ಸದಸ್ಯರಾಗಿದ್ದರು. ಅಸಲಿಗೆ ಈ ಅಕ್ರಮ ಸಕ್ರಮ ಸಮಿತಿಯಿಂದ ದೊಡ್ಡ ಗುಳುಂ ನಡೆದಿದೆ. ಬಡವರಿಗೆ 3 ಸೆಂಟ್ಸ್ ಮನೆ ನಿವೇಶನಕ್ಕೆ ನೀಡಲು ಈ ಸಮಿತಿಯಲ್ಲಿ ಜಾಗವಿಲ್ಲ. ಆದರೆ ತಮ್ಮವರಿಗೆ, ಭೂ ದಂಧೆ ನಡೆಸುವವರಿಗೆ, ಬಂಡವಾಳ ಶಾಹಿಗಳಿಗೆ ಎಕರೆಗಟ್ಟಲೆ ಜಾಗ ಇಮ್ಮೀಡಿಯಟ್ಟಾಗಿ ಮಂಜೂರು ಆಗುತ್ತಿತ್ತು. ರಾಯಿ, ಚೆನ್ನೈತೋಡಿ, ಇರ್ವತ್ತೂರು, ಕುಕ್ಕಿಪ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮ ಸಮಿತಿಯ ಹೆಸರಿನಲ್ಲಿ ಬ್ರಹ್ಮಾಂಡ ಗಾತ್ರದ ಭ್ರಷ್ಟಾಚಾರವೇ ನಡೆದಿತ್ತು. ಆದರೆ ಇದೆಲ್ಲವನ್ನು ಧೈರ್ಯದಿಂದ ಎದುರಿಸಿದ್ದು ಮೊನ್ನೆ ಆತ್ಮಹತ್ಯೆ ಮಾಡಿಕೊಂಡ ಪದ್ಮನಾಭ ಸಾವಂತ್ ಅನ್ನುವ ಯುವಕ. ಮಾಹಿತಿ ಹಕ್ಕಿನ ಮೂಲಕ ದಾಖಲೆ ಪಡೆದು ಭ್ರಷ್ಟಾಚಾರಿಗಳನ್ನು ಬೆತ್ತಲೆ ಮಾಡುತ್ತಿದ್ದ ಸಾವಂತ್. ಬಂಟ್ವಾಳದ ಪತ್ರಕರ್ತನೊಬ್ಬ ಸರಿ-ಸುಮಾರು 9 ಎಕರೆ ಭೂಮಿಯನ್ನು ತನ್ನ ಅಧಿಕಾರದುರುಪಯೋಗ ಪಡಿಸಿ ಅಕ್ರಮವಾಗಿ ಮಂಜೂರು ಮಾಡಿಸಿಕೊಂಡಿದ್ದನಂತೆ. ಸಾವಂತ್ ಯಾರನ್ನು ಬಿಡದೆ ಇಂಚಿಂಚೂ ಮಾಹಿತಿ, ದಾಖಲೆ ಪಡೆದು ಅಕ್ರಮ ಸಕ್ರಮ ಸಮಿತಿಯನ್ನೇ ಬರ್ಖಾಸ್ತುಗೊಳಿಸಲು ಕಾರಣನಾಗಿದ್ದ. ಬಹುಶಃ ರಾಜ್ಯದ ಇತಿಹಾಸದಲ್ಲಿ ಸರಕಾರ ನೇಮಿಸಿದ ಸಮಿತಿಯನ್ನು ಬರ್ಖಾಸ್ತುಗೊಳಿಸುವುದು ಅಷ್ಟು ಸುಲಭದ ಮಾತಲ್ಲ. ಅದನ್ನು ಸಾವಂತ್ ಮಾಡಿ ತೋರಿಸಿದ್ದ. ಗುಳುಂ ಗ್ಯಾಂಗ್ ಗಳಿಗೆ ಸಾವಂತ್ ಅನ್ನುವ ಹೆಸರೇ ಬೆವರಿಳಿಸುವಂತಿತ್ತು. ಇದೇ ಪತ್ರಕರ್ತ ಸಾವಂತ್ ಮೇಲೆ ದಾಖಲಾದ ದೂರನ್ನು ಮೊತ್ತಮೊದಲು ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಪಡಿಸಿದನಂತೆ.

ಬಂಟ್ವಾಳದಲ್ಲಿ ನಡೆಯುವ ಅನೇಕ ಅಕ್ರಮ ಭೂ ದಂಧೆ, ದೋ ನಂಬರ್ ದಂಧೆ ವಿರುದ್ಧ ಸಮರ ಸಾರಿದ್ದ ಸಾವಂತ್ ದಾಖಲೆಗಳ ಮೂಲಕ ಅದನ್ನು ಬಯಲಿಗೆ ಎಳೆಯುತ್ತಿದ್ದ. ಇದು ಸಹಜವಾಗಿ ಎದುರಾಳಿಗಳನ್ನು ಕೆಣಕುತ್ತಿತ್ತು. ಕಾಂಗ್ರೆಸ್ ಕಾರ್ಯಕರ್ತನಾಗಿದ್ದ ಸಾವಂತ್ ನಿಗೆ ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಇನ್ನಿತರ ಕೆಲವು ಮುಖಂಡರು ಬೆಂಬಲ ನೀಡುತ್ತಿದ್ದಾರೆಯೇ ವಿನಃ ಬಂಟ್ವಾಳದ ಕಾಂಗ್ರೆಸ್ಸಿನ ಮುಂಚೂಣಿ ನಾಯಕರು ಬೆನ್ನಿಗೆ ನಿಲ್ಲಲೇ ಇಲ್ಲ. ಕೆಲವು ನಾಯಕರಂತೂ ಬಿಜೆಪಿಯ ಅಕ್ರಮಕೋರರೊಂದಿಗೆ ಸೇರಿ ಒಳಒಪ್ಪಂದ ಮಾಡಿ ಬಿಟ್ಟಿದ್ದರು. ಒಬ್ಬ ಸಾಮಾನ್ಯ ಕಾರ್ಯಕರ್ತ ಬಿಜೆಪಿಯವರ ಭ್ರಷ್ಟಾಚಾರವನ್ನು ಬಯಲಿಗೆ ತರುತ್ತಿರುವಾಗ ಅವರ ಪರ ನಿಲ್ಲಬೇಕಾದವರು ಕಡೆಗಣಿಸುತ್ತಿದ್ದದ್ದು ಯಾಕೆ ಅನ್ನುವುದೇ ಯಕ್ಷ ಪ್ರಶ್ನೆ.?

ಪದ್ಮನಾಭ ಸಾವಂತ್ ಅವರ ಅನ್ಯಾಯದ ವಿರುದ್ಧ ಹೋರಾಟ ಆತನ ವೈಯಕ್ತಿಕ ಲಾಭಕ್ಕಂತೂ ಅಲ್ಲವೇ ಅಲ್ಲ. ಅದು ಆತನ ಹವ್ಯಾಸ, ಹಠ, ಛಲ ಆಗಿತ್ತು. ಇದರ ಎಲ್ಲಾ ಕ್ರೆಡಿಟ್ ಕಾಂಗ್ರೆಸ್ ಪಕ್ಷಕ್ಕೆ ದಕ್ಕುವುದಾದರೂ ಕಾಂಗ್ರೆಸ್ ಪಕ್ಷದಲ್ಲೇ ಆತನ ಪರ ನಿಂತವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಕಾಂಗ್ರೆಸ್ ಪಕ್ಷದ ಎರಡನೇ ಹಂತದ ಕೆಲ ನಾಯಕರು ಮತ್ತು ಬಹುತೇಕ ಕಾರ್ಯಕರ್ತರು ಬೆಂಬಲಕ್ಕೆ ನಿಂತಿದ್ದಾರೆಯೇ ಹೊರತು ದೊಡ್ಡ ನಾಯಕರಾರು ಆತನ ಬೆಂಬಲಕ್ಕೆ ನಿಂತಿಲ್ಲ ಅನ್ನುವುದು ಖೇದಕರ. ಪಕ್ಷದ ಲಾಭಕ್ಕಾಗಿ ಆಹೋರಾತ್ರಿ ಹೋರಾಟ ಮಾಡುತ್ತಿದ್ದ ಸಾಮಂತರ ಹೋರಾಟವನ್ನು ಕಾಂಗ್ರೆಸ್ ನ ದೊಡ್ಡ ನಾಯಕರು ಬೆಂಬಲಿಸಿದ್ದು, ಕರೆದು ಮಾತಾಡಿಸಿದ್ದು ಬಲು ಅಪರೂಪ. ಸಾಮಂತರ ಹೋರಾಟಕ್ಕೆ ಸ್ಪಂದಿಸಬೇಕಾದ ರೀತಿಯಲ್ಲಿ ಮತ್ತು ಪೂರ್ಣ ಪ್ರಮಾಣದಲ್ಲಿ ಸ್ಪಂದಿಸದಿರುವುದಕ್ಕೆ ನಾಯಕರ ವಿರುದ್ಧವೇ ಪಕ್ಷದ ಕಾರ್ಯಕರ್ತರ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ಪದ್ಮನಾಭ ಸಾಮಂತರ ಒಬ್ಬರ ಕಥೆಯಲ್ಲ, ನೂರಾರು ಕಾಂಗ್ರೆಸ್ ಕಾರ್ಯಕರ್ತರು ಅನ್ಯಾಯವಾಗುತ್ತಿದೆ, ಅಪಮಾನವಾಗುತ್ತಿದೆ. ತಮ್ಮದೇ ಸರಕಾರವಿದ್ದರೂ ನಮ್ಮ ಮಾತು ಕೇಳುವವರಿಲ್ಲ ಎಂಬ ನೋವು ಕಾರ್ಯಕರ್ತರ ಎದೆಯಾಳದಲ್ಲಿದೆ. ಜಿಲ್ಲೆಯ ಕಾಂಗ್ರೆಸ್ಸಿನ ನಾಯಕ, ಕಂ ಉನ್ನತ ಹುದ್ದೆಯಲ್ಲಿರುವ ಬೆಳ್ತಂಗಡಿ ಮೂಲದ ವ್ಯಕ್ತಿಯೇ ಸ್ವಪಕ್ಷದ ಸಾವಂತ್ ವಿರುದ್ದವೇ ತಿರುಗಿ ಬಿದ್ದಿದ್ದರಂತೆ, ಕಾರಣ ಅ ನಾಯಕನ ಜನ್ಮವನ್ನೇ ಸಾವಂತ್ ಜಾಲಾಡಿದ್ದನಂತೆ.! ಆ ನಾಯಕ ಭ್ರಷ್ಟಾಚಾರಿಗಳೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದನಂತೆ.

ಪದ್ಮನಾಭ ಸಾವಂತ್ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದರು. ಪ್ರಸ್ತುತ ದ.ಕ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಉಪಾಧ್ಯಕ್ಷರಾಗಿ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ಗುಳುಂ ಗ್ಯಾಂಗ್ ಗಳ ಬಗ್ಗೆ ನಿರಂತರ ಸಮರ ಸಾರಿದ್ದ ಸಾವಂತ್ ಮೇಲೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕೆಲ ದಿನಗಳ ಹಿಂದಷ್ಟೇ ದೂರು ದಾಖಲಾಗಿತ್ತು. ವಂಚನೆಗೆ ಸಂಬಂಧಿಸಿದ ದೂರು ಆಗಿತ್ತು. ಬೆಂಗಳೂರು ಕಾವೇರಿ ಭವನದ ನೀರಾವರಿ ವಿಭಾಗದಲ್ಲಿ ಸರಕಾರಿ ಗುಮಾಸ್ತ ಹುದ್ದೆ ದೊರಕಿಸಿಕೊಡುವುದಾಗಿ ಹಂತ ಹಂತವಾಗಿ ಎರಡು ಲಕ್ಷ ರೂಪಾಯಿ ಪಡೆದು ಯುವಕನೊಬ್ಬನಿಗೆ ಕೆಲಸ ಕೊಡಿಸದೆ ವಂಚಿಸಿರುವುದು ಒಟ್ಟಾರೆ ದೂರಿನ ಸಾರಾಂಶವಾಗಿತ್ತು. ಈ ದೂರು ದಾಖಲಾಗಲು ಗುಳುಂ ಗ್ಯಾಂಗ್ ತೆರೆಮರೆಯಲ್ಲಿ ಕೈಯಾಡಿಸಿರುವ ಸಾಧ್ಯತೆ ಇದೆ. ವಂಚನೆಗೆ ಸಂಬಂಧಿಸಿ ಆತ್ಮಹತ್ಯೆ ಗೈದಿರುವುದಾಗಿ ಸುದ್ದಿ ಹರಡಲಾಗುತ್ತಿದೆ. ಸಾಮಂತ್ ನಿಗೆ ಒಂದು ಗುಮಾಸ್ತ ಹುದ್ದೆ ತೆಗೆದುಕೊಡುವುದು ದೊಡ್ಡ ಕಷ್ಟವೇನಲ್ಲ. ಕೆಲವೊಂದು ರಾಜಕೀಯ ಪ್ರಮುಖರ ಸಖ್ಯವಿತ್ತು. ಸರಕಾರಿ ಹುದ್ದೆಗೆ ಕೆಲವೊಂದು ನೀತಿ ನಿಯಮಾವಳಿ ಇರುವುದರಿಂದ ತಡವಾಗಿಯಾದರೂ ಆ ಹುದ್ದೆ ಸಂಬಂಧಿಸಿದ ವ್ಯಕ್ತಿಗೆ ದೊರಕಿಸಿಕೊಡುತ್ತಿದ್ದ. ಆದರೆ ಇದರ ಹಿಂದೆ ದೊಡ್ಡ ಷಡ್ಯಂತ್ರ ನಡೆದಿರುವುದು ಸ್ಪಷ್ಟವಾಗಿದೆ.

ಪದ್ಮನಾಭ ಸಾವಂತ್ ಪ್ರಭಾವಿಗಳ ವಿರುದ್ಧ ಸಮರ ಸಾರಿರುವುದರಿಂದ ಆತ ಧೈರ್ಯ ಶಾಲಿಯಾಗಿದ್ದ. ಧೈರ್ಯ ಶಾಲಿಗಳಿಗೆ ಮಾತ್ರ ಇದು ಸಾಧ್ಯ. ಆದರೆ ಆತ್ಮಹತ್ಯೆ ಗೈಯುವ ಮಟ್ಟಿಗೆ ಆತ ಹೇಡಿ ಯಲ್ಲ ಅನ್ನುವುದು ಆತನ ಜೊತೆಗಿರುವವರ ಮಾತುಗಳು. ಆತ್ಮಹತ್ಯೆ ಹಿಂದೆ ನಿಗೂಢ ಷಡ್ಯಂತ್ರ ನಡೆದಿರುವುದು ಸ್ಪಷ್ಟ. ಇದು ಆತ್ಮಹತ್ಯೆ ಅಲ್ಲ ಕೊಲೆ ಅನ್ನುವುದು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಕಾಂಗ್ರೆಸ್ ಪಕ್ಷಕ್ಕಾಗಿ ಆಹೋರಾತ್ರಿ ಶ್ರಮಿಸಿದ ವ್ಯಕ್ತಿಯೊಬ್ಬನಿಗೆ ಕಾಂಗ್ರೆಸ್ ಸರಕಾರವಿರುವಾಗಲೇ ನಿಷ್ಪಕ್ಷಪಾತ ತನಿಖೆ ನಡೆಸಿ ಘಟನೆ ಹಿಂದಿನ ಸತ್ಯಾಸತ್ಯತೆ ಹೊರ ತೆಗೆಯಲಾಗದೇ ಇದ್ದರೆ ಬಂಟ್ವಾಳದ ದೊಡ್ಡ ದೊಡ್ಡ ಕಾಂಗ್ರೆಸ್ ನಾಯಕರು ಇದ್ದು ಇಲ್ಲದಂತೆ. ಕೇವಲ ಪತ್ರಿಕಾಗೋಷ್ಠಿ, ಫೇಸ್ಬುಕ್ ಪೋಸ್ಟ್ ಹಾಕಿದ ಮಾತ್ರಕ್ಕೆ ಜವಾಬ್ದಾರಿ ಮುಗಿಯುವುದಿಲ್ಲ. ಸರಕಾರವೇ ಇದೆ, ನ್ಯಾಯಯುತವಾದ ತನಿಖೆ ನಡೆಸಿ ಸತ್ಯಾಂಶ ಹೊರ ಬರಲಿ ಅನ್ನುವುದೇ ಕಾಂಗ್ರೆಸ್ ಕಾರ್ಯಕರ್ತರ ಆಗ್ರಹ. ಇಲ್ಲದಿದ್ದಲ್ಲಿ ಬಂಟ್ವಾಳದಲ್ಲಿ ಕಾಂಗ್ರೆಸ್ಸಿಗೆ ಉಳಿಗಾಲವಿಲ್ಲ.