ಪುರುಷರ ವೀರ್ಯಾಣು ಪ್ರಮಾಣದಲ್ಲಿ ಕುಸಿಯುತ್ತಿರುವ ಬಗ್ಗೆ ವರದಿಯೊಂದು ಖಚಿತಪಡಿಸಿದೆ. 1973 ರ ದಶಕಕ್ಕೆ ಹೋಲಿಸಿದಲ್ಲಿ 2018 ರಲ್ಲಿ ಪುರುಷರ ವೀರ್ಯಾಣು ಪ್ರಮಾಣ ಶೇ 50 ರಷ್ಟು ಕುಸಿತವಾಗಿದೆ. ಜೊತೆಗೆ ಪುರುಷರಲ್ಲಿ ಸರಾಸರಿ ವೀರ್ಯಾಣು ಪ್ರಮಾಣದಲ್ಲಿಯೂ ಕುಸಿತವುಂಟಾಗುತ್ತಿದೆ ಎಂದು ವರದಿ ಹೇಳಿದ್ದು, ಒಟ್ಟಾರೆ ಶೇ 62.3 ರಷ್ಟು ಕುಸಿತ ಕಂಡುಬಂದಿದೆ.
ಹ್ಯೂಮನ್ ರಿಪ್ರೊಡಕ್ಷನ್ ಅಪ್ಡೇಟ್ ಜರ್ನಲ್ ಪ್ರಕಟಿಸಿರುವ ಈ ವರದಿಯು 1973 ರಿಂದ 2018 ರವರೆಗೆ ವಿವಿಧೆಡೆ ಪ್ರಕಟವಾದ 223 ಸಂಶೋಧನೆಗಳನ್ನು ಆಧರಿಸಿದೆ. 53 ದೇಶಗಳಿಂದ ಸುಮಾರು 57 ಸಾವಿರ ಪುರುಷರ ವೀರ್ಯಾಣು ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.

ಸಾಮಾನ್ಯವಾಗಿ ಪುರುಷರಲ್ಲಿ ವೀರ್ಯಾಣು ಸಂಖ್ಯೆ ಕಡಿಮೆಯಾಗಲು ಹಲವು ಕಾರಣಗಳಿವೆ. ಧೂಮಪಾನ, ಸ್ಥೂಲಕಾಯ, ಒತ್ತಡದ ಜೀವನ, ಮದ್ಯಪಾನ ಮತ್ತು ಮಾದಕ ವಸ್ತು ಸೇವನೆಗಳಿಂದ ಪುರುಷರ ವೀರ್ಯಾಣು ಕಡಿಮೆಯಾಗುತ್ತದೆ ಎಂದು ಸಂಶೋಧನೆಗಳು ಧೃಡಪಡಿಸಿದೆ. ಪ್ರಾಕೃತಿಕವಾಗಿ ನೀರು ಮತ್ತು ಗಾಳಿಯು ಮಲಿನವಾಗುತ್ತಿರುವುದೂ ಸಹ ವೀರ್ಯಾಣು ಪ್ರಮಾಣ ಕುಸಿತಕ್ಕೆ ಕಾರಣವಾಗಿದೆ. ಪೌಷ್ಟಿಕಾಂಶ ರಹಿತ ಆಹಾರ ಸೇವನೆ, ಅನುವಂಶೀಯತೆ, ದೈಹಿಕ ಚಟುವಟಿಕೆಗಳ ಕೊರತೆಯಿಂದಲೂ ಸಹ ವೀರ್ಯಾಣು ಪ್ರಮಾಣ ಕುಸಿಯುತ್ತದೆ ಎಂದು ಸಂಶೋಧನೆ ಹೇಳಿದೆ.
