ಕೊಡಿಗೇಹಳ್ಳಿ ಠಾಣೆ ವ್ಯಾಪ್ತಿಯಲ್ಲಿರುವ ಮನೆಯೊಂದರಲ್ಲಿ ಎಂ.ಶೋಭಾ ಎಂಬುವವರನ್ನು ಹತ್ಯೆ ಮಾಡಿ ಚಿನ್ನಾಭರಣದೊಂದಿಗೆ ಅವರ ಕಾರನ್ನು ದೋಚಲಾಗಿದ್ದು, ಪರಿಚಯಸ್ಥರೇ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ. ಹತ್ಯೆಗಿಡಾದ ಶೋಭಾರವರು ತನ್ನ ಎರಡನೇ ಮಗಳು ಹರ್ಷಿತಾಳ ಜೊತೆ ವಾಸವಿದ್ದು, ವಾಹನ ಚಾಲನಾ ತರಬೇತಿ ಶಾಲೆ ನಡೆಸುತ್ತಿದ್ದರು. ಮಗಳು ಹರ್ಷಿತಾ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಹತ್ಯೆಗೀಡಾದ ಶೋಭಾರವರ ಮಾಂಗಲ್ಯ ಸರ, ಚಿನ್ನದ ಸರ, ಮೊಬೈಲ್ ಪೋನ್ ಮತ್ತು ಮನೆ ಎದುರು ಪಾರ್ಕ್ ಮಾಡಿರುವ ಕಾರಿನ ಸಮೇತ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಪರಿಚಯಸ್ಥರಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶೋಭಾ ಹಾಗೂ ಮಗಳು ಹರ್ಷಿತಾ ಮಾತ್ರ ಮನೆಯಲ್ಲಿ ವಾಸವಿದ್ದರು. ಶೋಭಾ ಅವರ ಪತಿ ಹಾಗೂ ಮೊದಲ ಮಗಳು ಪ್ರತ್ಯೇಕವಾಗಿ ನೆಲೆಸಿದ್ದಾರೆ. ಹರ್ಷಿತಾ ಅವರಿಗೆ ಏಪ್ರಿಲ್ 4ರಂದು ಮದುವೆಯಾಗಿತ್ತು. ಮದುವೆಯ ಸಂಪ್ರದಾಯಗಳು ನಡೆಯುತ್ತಿರುವುದರಿಂದ ಹರ್ಷಿತಾ ತಾಯಿಯ ಮನೆಯಲ್ಲಿದ್ದರು. ಏಪ್ರಿಲ್ 18ರಂದು ಜೆ.ಪಿ. ನಗರದಲ್ಲಿರುವ ಪತಿಯ ಮನೆಗೆ ಹೋಗಿದ್ದರು. ಮರುದಿನ ತಾಯಿ ಶೋಭಾಗೆ ಕರೆ ಮಾಡಿದ್ದರು. ಆದರೆ, ತಾಯಿ ಕರೆ ಸ್ವೀಕರಿಸಿರಲಿಲ್ಲ. ಗಾಬರಿಗೊಂಡು ಅಕ್ಕ ಹಾಗೂ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಅಕ್ಕ ಮನೆಗೆ ಹೋಗಿ ನೋಡಿದಾಗ, ಬೆಡ್ ಮೇಲೆ ಶೋಭಾರವರ ಮೃತದೇಹ ನಗ್ನ ಸ್ಥಿತಿಯಲ್ಲಿ ಕಂಡುಬಂತು.
ಶೋಭಾ ಮೈ ಮೇಲೆ ಚಿನ್ನಾಭರಣ ಹಾಗೂ ಮನೆ ಎದುರು ನಿಲ್ಲಿಸಿದ ಕಾರು ಇರಲಿಲ್ಲ. ಶೋಭಾ ಅವರನ್ನು ಯಾರೋ ಕೊಲೆ ಮಾಡಿ ಚಿನ್ನಾಭರಣ–ಕಾರು ದೋಚಿರುವುದಾಗಿ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಮನೆಯ ಅಕ್ಕ–ಪಕ್ಕದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲಿಸಲಾಗುತ್ತಿದೆ. ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿರುತ್ತಾರೆ.