ಬಜಪೆ ಫೈನಾನ್ಸ್ ಸೊಸೈಟಿಯಲ್ಲಿ ಆಸಿಡ್ ದಾಳಿ ನಡೆಸಿ, ಚಿನ್ನಾಭರಣಗಳನ್ನು ಸುಲಿಗೆ ಮಾಡಲು ಯತ್ನಿಸಿದ ಆರೋಪಿಗಳ ಹೆಡೆಮುರಿ ಕಟ್ಟಿದ ಬಜಪೆ ಪೊಲೀಸರು

ಕರಾವಳಿ

ಬಜಪೆ ಫೈನಾನ್ಸ್ ಸೊಸೈಟಿಯಲ್ಲಿ ಬುರ್ಖಾ ಹಾಕಿಕೊಂಡು ಬಂದು ಮಹಿಳೆಯರ ಮೇಲೆ ಆಸಿಡ್ ದಾಳಿ ನಡೆಸಿ ಚಿನ್ನಾಭರಣಗಳನ್ನು ಸುಲಿಗೆ ಮಾಡಲು ಯತ್ನಿಸಿದ ಮೂವರು ಆರೋಪಿಗಳನ್ನು ಮತ್ತು 15 ಲಕ್ಷ ರೂ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಬಜಪೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಜಪೆ ಗ್ರಾಮದ ನಿವಾಸಿ ಲೆಸ್ಲಿ ಡಿ ಕುನ್ಹ ಎಂಬವರ ಮಾಲಕತ್ವದ ಬಜಪೆ ಫೈನಾನ್ಸ್ ಕಾರ್ಪೊರೇಷನ್ (ರಿ) ಸೊಸೈಟಿಗೆ ದಿನಾಂಕ 04.07.2024 ರಂದು ಸಂಜೆ 4 ರ ಸಮಯಕ್ಕೆ ಕಪ್ಪು ಬಣ್ಣದ ಸ್ಕೂಟರ್ ನಲ್ಲಿ ಬುರ್ಖಾ ಧರಿಸಿದ ಮಹಿಳೆ ಮತ್ತು ಇಬ್ಬರು ಗಂಡಸರು ಬಂದು, ಬುರ್ಖಾ ಹಾಕಿಕೊಂಡಿರುವ ಹೆಂಗಸು ಸೊಸೈಟಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮಹಿಳೆಯರ ಮೇಲೆ ಆಸಿಡ್ ಹಾಕಿ ಕಚೇರಿಯಲ್ಲಿದ್ದ ಚಿನ್ನಾಭರಣಗಳನ್ನು ಸುಲಿಗೆ ಮಾಡಲು ಪ್ರಯತ್ನಿಸಿದ್ದು, ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 13-07-2024 ರಂದು ಸದ್ರಿ ಪ್ರಕರಣದ 3 ಜನ ಆರೋಪಿಗಳನ್ನು ಬಂಧಿಸುವಲ್ಲಿ ಬಜಪೆ ಪೊಲೀಸರು ಯಶಸ್ವಯಾಗಿರುತ್ತಾರೆ.

ಬಜಪೆ ಪೇಟೆಯಲ್ಲಿ ಹಾಡಹಗಲೇ ಭಯಾನಕ ರೀತಿಯಲ್ಲಿ ಆಸಿಡ್ ಬಳಸಿ ಸುಲಿಗೆ ಮಾಡಲು ಪ್ರಯತ್ನಿಸಿ ಭಯದ ವಾತಾವರಣ ಸೃಷ್ಠಿಸಿದ್ದ ಆರೋಪಿಗಳನ್ನು ಬಂಧಿಸಿದ ಬಜಪೆ ಪೊಲೀಸರ ಕಾರ್ಯದ ಬಗ್ಗೆ ಪರಿಸರದ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ. ಆರೋಪಿಗಳು ಕೃತ್ಯದ ಮೊದಲು, ಕೃತ್ಯದ ನಂತರ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಒಟ್ಟು ಸುಮಾರು 15 ಲಕ್ಷ ರೂ ಮೌಲ್ಯದ ವಾಹನಗಳಾದ Innova ಕಾರು, ಮಾರುತಿ Swift ಕಾರು ಮತ್ತು ಸ್ಕೂಟರ್ ಒಂದನ್ನು ಬಜಪೆ ಪೊಲೀಸರು ವಶಪಡಿಸಿಕೊಂಡಿರುತ್ತಾರೆ.

ಬಂಧಿತ ಆರೋಪಿಗಳಾದ ಪ್ರಿತೇಶ್ @ ಪ್ರಿತು, ಶಾಂತಿಗುಡ್ಡೆ ಬಜಪೆ. ಧನರಾಜ್ @ ಧನು ಕೋಡಿಕೇರೆ, ಸುರತ್ಕಲ್, ಕುಸುಮಾಕರ @ ಅಣ್ಣು, ಕುಂಬಳಕೆರೆ, ಬಾಳ ಗ್ರಾಮ. ಪ್ರಿತೇಶ್ @ ಪ್ರಿತು ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 2 ಕಳವು ಪ್ರಕರಣ ಹಾಗೂ ಬಜಪೆ ಪೊಲೀಸ್ ಠಾಣೆಯಲ್ಲಿ ಒಂದು ಕಳವು ಪ್ರಕರಣ ದಾಖಲಾಗಿರುತ್ತವೆ. ಧನರಾಜ್ @ಧನು ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2 ಕೊಲೆಯತ್ನ ಪ್ರಕರಣಗಳು, ಮೂಡಬಿದರೆ ಪೊಲೀಸ್ ಠಾಣೆಯಲ್ಲಿ 1 ಕೊಲೆಯತ್ನ ಪ್ರಕರಣ, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆ ಹಾಕಿದ ಬಗ್ಗೆ 1 ಪ್ರಕರಣ ದಾಖಲಾಗಿರುತ್ತದೆ. ಕುಸುಮಾಕರ @ ಅಣ್ಣು ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 2 ಕಳವು ಪ್ರಕರಣ ಹಾಗೂ ಬಜಪೆ ಪೊಲೀಸ್ ಠಾಣೆಯಲ್ಲಿ 1 ಕಳವು ಪ್ರಕರಣ ದಾಖಲಾಗಿರುತ್ತದೆ.

ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ IPS ರವರ ಮಾರ್ಗದರ್ಶನದಂತೆ, DCP ಗಳಾದ ಸಿದ್ದಾರ್ಥ ಗೋಯೆಲ್, ದಿನೇಶ್ ಕುಮಾರ್ ರವರ ನಿರ್ದೇಶನದಂತೆ, ಉತ್ತರ ಉಪ ವಿಭಾಗದ ACP ಮನೋಜ್ ಕುಮಾರ್ ಮತ್ತು ಬಜಪೆ ಪೊಲೀಸ್ ಠಾಣೆಯ ನಿರೀಕ್ಷಕರಾದ ಸಂದೀಪ್ ಜಿ.ಎಸ್ ರವರ ನೇತೃತ್ವದಲ್ಲಿ ಬಜಪೆ ಪೊಲೀಸ್ ಠಾಣೆಯ PSI ರೇವಣ ಸಿದ್ದಪ್ಪ, PSI ಕುಮಾರೇಶನ್, PSI ಲತಾ, ASI ರಾಮ ಪೂಜಾರಿ ಮೇರೆಮಜಲು, ರಶೀದ ಶೇಖ್, ಸುಜನ್, ದೇವಪ್ಪ, ಬಸವರಾಜ್ ಪಾಟೀಲ್, ಕೆಂಚಪ್ಪ, ಚಿದಾನಂದ, ಪ್ರಕಾಶ್, ದುರ್ಗಾ ಪ್ರಸಾದ್, ಜಗದೀಶ್, ದಯಾನಂದ, ಮದು, ಅನಿಲ್ ಕುಮಾರ್, ಭಿಮಪ್ಪ, ವಿರುಪಾಕ್ಷ, ಭರಮಪ್ಪ, ಚೇತನ್ , ಪ್ರಜ್ವಲ್ ಈ ಪತ್ತೆ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.