ಪೋಷಕರು ಹೈರಾಣು.. ಕಾಲೇಜಿಗೆ ಹೋಗುವ ಉದ್ಯಮಪತಿಗಳ ಪುತ್ರಿಯರೇ ಟಾರ್ಗೆಟ್

ಕರಾವಳಿ

ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದೆ ನಕಲಿ ಲೂಟಿ ಗ್ಯಾಂಗ್.!

ಮಂಗಳೂರಿನಲ್ಲಿ ವಂಚಕರು ವಿವಿಧ ವೇಷ ತೊಟ್ಟು ಫೀಲ್ಡಿಗಿಳಿಯುತ್ತಿರುವುದು ಇದೀಗ ಮಾಮೂಲಿಯಾಗಿ ಬಿಟ್ಟಿದೆ. ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದಂತೆ ಅದನ್ನು ದುರುಪಯೋಗಪಡಿಸುತ್ತಿರುವ ನಕಲಿ ಜಾಲಗಳು ಇದೀಗ ಸಕ್ರೀಯವಾಗಿದೆ. ಉದ್ಯಮಿಗಳು, ದುಡ್ಡಿರುವ ಮಂದಿಗಳ ಪುತ್ರಿಯರನ್ನು ಕಿಡ್ನಾಪ್, ಡ್ರಗ್ಸ್ ದಂಧೆ ಹೆಸರಲ್ಲಿ ಬೆದರಿಸುವ, ಸರಕಾರಿ ಅಧಿಕಾರಿಗಳೆಂದು ನಂಬಿಸಿ ದುಡ್ಡು ಪೀಕಿಸುವ ದಂಧೆಗಳು ಜೋರಾಗಿದೆ. ಇವರ ಆರ್ಭಟಕ್ಕೆ ಕೆಲವೊಂದು ವಿಧ್ಯಾರ್ಥಿನಿಯರ ಪೋಷಕರು ಹೈರಾಣಾಗಿ ಬಿಟ್ಟಿದ್ದಾರೆ. ವಿದ್ಯಾರ್ಥಿನಿಯರ ಪೋನ್ ನಂಬರ್, ಅವರ ಪೋಷಕರ ಪೋನ್ ನಂಬರ್ ಪಡೆದು ವಿದ್ಯಾರ್ಥಿನಿಯರ ಎಲ್ಲಾ ಚಲನವಲನಗಳನ್ನು ತಿಳಿದು ವಿದ್ಯಾರ್ಥಿನಿ ಕಾಲೇಜಿನಲ್ಲಿ ಇರುವ ಸಂದರ್ಭದಲ್ಲೇ ಅವರ ಪೋಷಕರಿಗೆ ಪೋನ್ ಮಾಡಿ ನಿಮ್ಮ ಮಗಳನ್ನು ಅರೆಸ್ಟ್ ಮಾಡಿದ್ದೇನೆ, ಡ್ರಗ್ಸ್ ಕೇಸಿನಲ್ಲಿ ಸಿಕ್ಕಿಬಿದ್ದಿದ್ದಾಳೆ; ಆಕೆಯನ್ನು ಬಿಡಬೇಕೆಂದರೆ ನಮ್ಮ ಖಾತೆಗೆ ಇಂತಿಷ್ಟು ದುಡ್ಡು ಹಾಕಬೇಕು ಎಂದು ನಂಬಿಸುವ ತಂತ್ರವನ್ನು ಮಾಡಲಾಗುತ್ತಿದೆ. ದುಡ್ಡು ನೀಡದಿದ್ದರೆ ನಿಮ್ಮ ಮಾನ ಹರಜಾಗುತ್ತದೆ ಎಂದೆಲ್ಲಾ ನಂಬಿಸಿ ಲಕ್ಷಾಂತರ ರೂಪಾಯಿ ಪೀಕಿಸುವ ಜಾಲ ಇದಾಗಿದೆ. ಸುದ್ದಿ ಕೇಳಿ ಅನೇಕ ಪೋಷಕರು ಶಾಕ್ ಗೊಳಗಾಗುತ್ತಿದ್ದು, ನಂತರ ವಿಷಯ ತಿಳಿದಾಗ ಇದು ನಕಲಿ ಅರೆಸ್ಟ್ ಜಾಲದ ಕಿರಾತಕರ ಕೃತ್ಯ ಎಂಬುದು ತಿಳಿದುಬರುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಭಾಗದಲ್ಲಿ ಹಲವಾರು ವಿಧ್ಯಾರ್ಥಿನಿಯರ ಪೋಷಕರಿಗೆ ಕರೆ ಬಂದಿದ್ದು, ಇದೀಗ ಮಂಗಳೂರಿನಲ್ಲೂ ಈ ಜಾಲ ಸಕ್ರೀಯವಾಗಿ ತೊಡಗಿಕೊಂಡಿದೆ. ಕುದ್ರೋಳಿ ಭಾಗದ ಇಬ್ಬರು ವಿದ್ಯಾರ್ಥಿನಿಯರ ಪೋಷಕರಿಗೂ ಇಂತಹ ಅನುಭವವಾಗಿದ್ದು, ಇದೀಗ ಎರಡು ದಿನಗಳ ಹಿಂದೆಯಷ್ಟೇ ಮಂಜೇಶ್ವರ ಭಾಗದ ವಿದ್ಯಾರ್ಥಿನಿಯರ ಪೋಷಕರು ಹೈರಾಣಾಗಿ ಬಿಟ್ಟಿದ್ದಾರೆ.

ಮಂಜೇಶ್ವರದ ಉದ್ಯಮಿಯೊಬ್ಬರ ಪುತ್ರಿ ಮಂಗಳೂರಿನ ಆಗ್ನೇಸ್ ಕಾಲೇಜಿನ ಪ್ರಥಮ ಪದವಿ ತರಗತಿಯಲ್ಲಿ ಕಲಿಯುತ್ತಿದ್ದು, ಈಕೆಯ ಪೋಷಕರಿಗೆ ನಾವು ಸಿಬಿಐ ಅಧಿಕಾರಿಗಳೆಂದು ಹೇಳಿ ವಾಟ್ಸಾಪ್ ಮೂಲಕ ಅನಾಮಧೇಯ ಸಂಖ್ಯೆಯಿಂದ ಕರೆಬಂದಿದ್ದು, ನಿಮ್ಮ ಮಗಳನ್ನು ಡ್ರಗ್ಸ್ ನೊಂದಿಗೆ ಸೆರೆ ಹಿಡಿಯಲಾಗಿದ್ದು. ಇದೀಗ ಈಕೆಯನ್ನು ದೆಹಲಿಗೆ ಕೊಂಡೊಯ್ಯುತ್ತಿದ್ದೇವೆ. ಈ ಕೇಸನ್ನು ಇಲ್ಲಿಗೆ ಮುಗಿಸಬೇಕೆಂದರೆ ನಮ್ಮ ಖಾತೆಗೆ 15 ಲಕ್ಷ ರೂಪಾಯಿ ಹಾಕುವಂತೆ ಬೇಡಿಕೆ ಇಟ್ಟಿದ್ದಾನೆ.

ವಿಷಯ ತಿಳಿದು ಉದ್ಯಮಿ ಗಾಬರಿಗೊಂಡಿದ್ದು, ವಿದ್ಯಾರ್ಥಿನಿಯ ಸ್ನೇಹಿತರ ಹೆಸರು, ಆಕೆಯ ಧ್ವನಿ ಹೋಲುವ ಮಾತುಗಳನ್ನು ಉದ್ಯಮಿ ಕೇಳಿಸುವಂತೆ ಮಾಡಿದ್ದಾರೆ. ಇದರಿಂದ ಉದ್ಯಮಿ ಕೂಡ ಶಾಕ್ ಗೊಳಗಾಗಿದ್ದಾರೆ. ಹಿಂದಿ ಭಾಷೆಯಲ್ಲಿ ಕರೆ ಮಾಡಿರುವ ವ್ಯಕ್ತಿ ನಮ್ಮ ಜೊತೆಯಲ್ಲಿ ಡಿವೈಎಸ್ಪಿ ಇದ್ದಾರೆ; ಕೂಡಲೇ ಗೂಗಲ್ ಪೇ ಮೂಲಕ ಹಣ ಕಳುಹಿಸಿ, ಇಲ್ಲದಿದ್ದರೆ ನಿಮ್ಮ ಮಗಳನ್ನು ದೆಹಲಿಗೆ ಕೊಂಡೊಯ್ಯಲಾಗುತ್ತದೆ ಎಂದು ಹೇಳಿದ್ದಾರೆ. ಪೋನ್ ಕರೆ ಕಡಿತವಾದ ನಂತರ ಸ್ವಲ್ಪ ಸಮಯ ಪೋನ್ ಹ್ಯಾಂಗ್ ಆಗಿ ಎಲ್ಲಿಗೂ ಕರೆ ಹೋಗುತ್ತಿರಲಿಲ್ಲ ಎನ್ನಲಾಗಿದೆ.

ಬಳಿಕ ಅದೇ ನಂಬರಿನಿಂದ ಒಂದು ವಾಯ್ಸ್ ಸಂದೇಶ ಬಂದಿದ್ದು ಉದ್ಯಮಿಯ ಪುತ್ರಿಯ ಧ್ವನಿಯಲ್ಲಿ ಮಾತೃಭಾಷೆಯಲ್ಲಿ ಕೂಗಿಕೊಂಡು ತಂದೆಯನ್ನು ಕರೆಯುತ್ತಿರುವ ಧ್ವನಿ ಕೇಳಿಸಿದೆ ಎನ್ನಲಾಗಿದೆ.

ನಂತರ ಮಗಳು ಕಲಿಯುತ್ತಿರುವ ಕಾಲೇಜು ಸಂಪರ್ಕಿಸಿದಾಗ ಮಗಳು ಕಾಲೇಜಿನಲ್ಲೇ ಇದ್ದು ವಂಚಿಸುವ ಗ್ಯಾಂಗ್ ಎಂದು ತಿಳಿದುಬಂದಿದೆ.

ಮಂಗಳೂರಿನಲ್ಲಿ ಅನೇಕ ವಿದ್ಯಾರ್ಥಿನಿಯರ ಪೋಷಕರು ಇಂತಹ ಅನಾಮಧೇಯ ಕರೆಯಿಂದ ಬೇಸತ್ತಿದ್ದು, ಈ ಜಾಲದ ಹಿಂದೆ ದೊಡ್ಡ ಗ್ಯಾಂಗ್ ಕಾರ್ಯಾಚರಿಸುತ್ತಿದೆ ಅನ್ನುವ ಅನುಮಾನ ಮೂಡಿದೆ. ವಿದ್ಯಾರ್ಥಿನಿಯರ ಕಂಪ್ಲೀಟ್ ಡೀಟೈಲ್ಸ್ ವಂಚಕರ ಕೈಗೆ ಸಿಗುವುದು ಹೇಗೆ? ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನುರಿತ ತಂಡ ಈ ಬಗ್ಗೆ ತನಿಖೆಗೆ ಇಳಿಯುವ ಅಗತ್ಯವಿದೆ. ಇಲ್ಲವಾದರೆ ಹಲವಾರು ಪೋಷಕರು ವಂಚಕರ ವಂಚನೆಗೆ ಬಲಿಯಾಗುವ ಸಾಧ್ಯತೆ ಇದೆ.