ಸಿದ್ದರಾಮಯ್ಯ ಇನ್ನೂ ಆರೋಪಿಯೂ ಅಲ್ಲ. ಅಪರಾಧಿಯೂ ಅಲ್ಲ.

ರಾಜ್ಯ

ಹೈಕೋರ್ಟ್ ಸಿದ್ದರಾಮಯ್ಯರವರ ಅರ್ಜಿ ವಜಾ ಮಾಡಿದ್ದಾರೆಯೇ ಹೊರತು ಸಿದ್ದರಾಮಯ್ಯ ಅವರು ಈ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಿಲ್ಲ.

✍️. ವೈ.ಬಿ.ಚಂದ್ರಕಾಂತ್, ವಕೀಲರು ಶಿವಮೊಗ್ಗ

ಮೂಡ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಅಗತ್ಯ ಕಂಡುಬರುವುದಿಲ್ಲ. ಕಾರಣ, ರಾಜಕೀಯ ಕಾರಣಕ್ಕಾಗಿ ಖಾಸಗಿ ವ್ಯಕ್ತಿಗಳು ಮೂಡ ಪ್ರಕಣದ ವಿಚಾರದಲ್ಲಿ ರಾಜ್ಯದ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು. ಮೂಡ ಪ್ರಕರಣದ ಬಗ್ಗೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬೇಕೆಂದು ಕೋರಿದ್ದರಿಂದ ರಾಜ್ಯಪಾಲರು ಖಾಸಗಿ ವ್ಯಕ್ತಿಗಳಿಗೆ ಅನುಮತಿ ನೀಡಿದ್ದಾರೆ.

ರಾಜ್ಯಪಾಲರು ಖಾಸಗಿ ವ್ಯಕ್ತಿಗಳ ದೂರಿನ ಮೇಲೆ ಅನುಮತಿ ನೀಡಿದ್ದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರು ಕೈಗೊಂಡ ಕ್ರಮವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಿ ಅರ್ಜಿಯನ್ನು ಸಲ್ಲಿಸಿದ್ದರು. ಅಲ್ಲದೆ ಈ ಪ್ರಕರಣದಲ್ಲಿ ತಮ್ಮ ಪಾತ್ರವೇನು ಪಾತ್ರ ಇಲ್ಲ ಮತ್ತು ರಾಜ್ಯಪಾಲರು ಅನುಮತಿ ನೀಡಿರುವುದು ಸಮರ್ಪಕವಲ್ಲ ಎಂದು ಅರ್ಜಿ ಸಲ್ಲಿಸಿದ್ದರು.

ಸಿದ್ದರಾಮಯ್ಯ ಮತ್ತು ದೂರುದಾರರ ಪರ ವಾದ, ಪ್ರತಿವಾದವನ್ನು ರಾಜ್ಯ ಹೈಕೋರ್ಟ್ ಎರಡೂ ಕಡೆಯ ವಾದ ಮತ್ತು ಪ್ರತಿವಾದವನ್ನು ಆಲಿಸಿ ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ಪ್ರಾಶಿಕ್ಯೂಷನ್ ಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿದ್ದ ಸಿದ್ದರಾಮಯ್ಯ ಅವರ ಅರ್ಜಿಯನ್ನು ವಜಾ ಮಾಡಿದ್ದಾರೆಯೇ ಹೊರತು ಸಿದ್ದರಾಮಯ್ಯ ಅವರು ಈ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಿಲ್ಲ.

ಮೂಡ ಪ್ರಕರಣದಲ್ಲಿ ರಾಜ್ಯಪಾಲರು ತಮಗೆ ಬರುವ ದೂರುಗಳಿಗೆ ಅನುಮತಿ ನೀಡುವ ಅಥವಾ ನೀಡದೆ ಇರುವ ಅಧಿಕಾರವನ್ನು ಸಂವಿಧಾನ ಬದ್ಧವಾಗಿ ಹೊಂದಿದ್ದಾರೆ. ಅದನ್ನು ಸಾಂಕೇತಿಕವಾಗಿ ವಿರೋಧಿಸಬಹುದೆ ಹೊರತು ಅದೇ ಅಂತಿಮ ಮಾರ್ಗವಾಗಿರುವುದಲ್ಲ.

ರಾಜ್ಯಪಾಲರನ್ನು ಕೇಂದ್ರ ಸರ್ಕಾರದ ಶಿಫಾರಸ್ಸಿನಂತೆ ರಾಷ್ಟ್ರಪತಿಯವರು ರಾಜ್ಯಪಾಲರನ್ನು ನೇಮಿಸುವ ಕಾರಣ ಹೆಚ್ಚಿನ ರಾಜ್ಯಪಾಲರುಗಳು ತಮ್ಮನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡಲು ಶಿಫಾರಸು ಮಾಡಿದ ಪಕ್ಷದ ಪರವಾಗಿಯೇ ತಮ್ಮ ಧೋರಣೆಯನ್ನು ಹೊಂದಿರುತ್ತಾರೆ. ಈ ಧೋರಣೆಯ ಪ್ರತಿಫಲವಾಗಿ ರಾಜ್ಯಪಾಲರು ತಮಗೆ ಬೇಕಾದವರ ವಿರುದ್ಧ ಬರುವ ಅರ್ಜಿಗಳಿಗೆ ಅನುಮತಿ ನೀಡದೆ ಇರಬಹುದು. ಮತ್ತು ತಮ್ಮ ಧೋರಣೆ ಯಾವ ಪಕ್ಷದ ಪರವಾಗಿ ಇರುತ್ತದೆಯೋ ಆ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ಭಾಗವಾಗಿ ವಿರೋಧ ಪಕ್ಷಗಳ ರಾಜಕಾರಣಿಗಳ ವಿರುದ್ಧ ಬರುವ ಅರ್ಜಿಗಳಿಗೆ ಅನುಮತಿ ನೀಡಬಹುದು.

ಇದನ್ನು ಪ್ರಶ್ನಿಸುವ ಹಕ್ಕು ದೇಶದ ಪ್ರಜೆಗಳಿಗೆ ಇರಬಹುದೇ ಹೊರತು ರಾಜ್ಯಪಾಲರು ನೀಡುವ ಅನುಮತಿಯನ್ನು ಪ್ರಶ್ನಿಸಿದರೆ ಅಷ್ಟೇನೂ ಅನುಕೂಲ ಪ್ರಶ್ನಿಸಿದವರಿಗೆ ಆಗುವುದಿಲ್ಲ ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ.

ಸಿದ್ದರಾಮಯ್ಯ ಅವರ ವಿರುದ್ಧದ ಮೂಡ ಪ್ರಕರಣ ಹೇಗಿದೆ ಎಂದರೆ ಕಲ್ಲಂಗಡಿ ಬೆಳೆದ ಜಮೀನಿನ ಮೂಲಕ ಹಾದುಹೋದ ನಿರಪರಾಧಿ ವ್ಯಕ್ತಿಯು ತನ್ನ ಹೊಲದಲ್ಲಿ ಬೆಳೆದ ಕಲ್ಲಂಗಡಿ ಹಣ್ಣನ್ನು ಆ ವ್ಯಕ್ತಿ ಕದ್ದು ತಿಂದಿದ್ದಾನೆ ಅದಕ್ಕೆ ಈತನ ಮೇಲೆ ಕಾನೂನು ಕ್ರಮ ಆಗಬೇಕೆಂದು ಪೋಲೀಸರಿಗೆ ದೂರು ನೀಡಿದರೆ ಆ ಪೋಲೀಸರು ಹೊಲದಲ್ಲಿ ಹಾದು ಹೋದ ವ್ಯಕ್ತಿಯ ಮೇಲೆ ದೂರು ದಾಖಲಿಸಬಹುದು. ಆದರೆ, ದೂರು ದಾಖಲಿಸಿದ ವ್ಯಕ್ತಿ ತಾನು ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ, ಆಧಾರಗಳ ಒದಗಿಸುವ ಸಂಪೂರ್ಣ ಹೊಣೆಯನ್ನು ಹೊಂದಿರುತ್ತಾನೆ. ಇಲ್ಲಿ ಮೂಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ನೀಡಿರುವ ಅನುಮತಿ ಕಾನೂನು ಬದ್ಧ ಮತ್ತು ರಾಜ್ಯಪಾಲರಿಗೆ ಇರುವ ಅಧಿಕಾರದ ಭಾಗವಾಗಿದೆ ಎನ್ನುವುದನ್ನು ಮಾತ್ರ ತನ್ನ ಆದೇಶದ ಮೂಲಕ ರಾಜ್ಯ ಹೈಕೋರ್ಟ್ ದೃಡೀಕರಿಸಿದೆ ಅಷ್ಟೆ.

ಮೂಡ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ನೀಡಿರುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಎಲ್ಲಾ ಅವಕಾಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಂದಿದ್ದಾರೆ. ತಾವು ಮೇಲಿನ ನ್ಯಾಯಾಲಯಕ್ಕೆ ಸಲ್ಲಿಸುವ ಮೇಲ್ಮನವಿಯಲ್ಲಿಯೂ ಕೂಡ ಸಿದ್ದರಾಮಯ್ಯ ಅವರಿಗೆ ಹಿನ್ನಡೆ ಆಗಬಹುದು. ಆಗಲು ಸಿದ್ದರಾಮಯ್ಯ ಅಪರಾಧಿ ಎಂದು ಅರ್ಥವಲ್ಲ. ಮೇಲ್ಮನೆ ವಿಚಾರದಲ್ಲಿ ಬಂದ ಸಿದ್ದರಾಮಯ್ಯ ಅವರ ಮೇಲಿನ ಆರೋಪದ ವಿಷಯದಲ್ಲಿ ನ್ಯಾಯಾಲಯ ನೀಡಿದ ಆದೇಶದಂತೆ ಸೂಕ್ತ ಪ್ರಾಧಿಕಾರದಿಂದ ತನಿಖೆ ಆರಂಭವಾಗುತ್ತದೆಯೇ ಹೊರತು ಮತ್ತೇನು ಆಗುವುದಿಲ್ಲ. ಸೂಕ್ತ ಪ್ರಾಧಿಕಾರದಿಂದ ತನಿಖೆ ಆರಂಭವಾದರೂ ಸಿದ್ದರಾಮಯ್ಯ ಅವರು ನ್ಯಾಯಾಲಯದಲ್ಲಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೀರ್ಪು ಬರುವವರೆಗೂ ಕೇವಲ ಆರೋಪಿಯೇ ಇರುತ್ತಾರೆ ಹೊರತು ಅಪರಾಧಿಯಂತು ಅಲ್ಲವೇ ಅಲ್ಲ.

ಒಂದೊಮ್ಮೆ ಈ ಪ್ರಕರಣದ ವಿಚಾರಣೆ ನಡೆದು ನ್ಯಾಯಾಲಯವೇನಾದರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಪರಾಧಿ ಎಂದು ತೀರ್ಪು ನೀಡಿದರೆ ಮಾತ್ರ ಆಗ ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಬಹುದು. ಅಲ್ಲಿಯವರೆಗೆ ಸಿದ್ದರಾಮಯ್ಯ ಅವರ ಮೇಲೆ ವಿವಿಧ ವಿರೋಧ ಪಕ್ಷಗಳ ನಾಯಕರ ಬಾಯಿಯಲ್ಲಿ ಬರುವ ಆರೋಪಗಳು, ಮಾಧ್ಯಮಗಳಲ್ಲಿ ಬರುವ ಸುದ್ದಿಗಳು, ವಿರೋಧ ಪಕ್ಷಗಳ ಕಾರ್ಯಕರ್ತರಿಂದ ಬರುವ ಆರೋಪಗಳು ಆರೋಪಗಳಾಗಿಯೇ ಉಳಿಯುತ್ತವೆ. ಅದಕ್ಕೆ ರೆಕ್ಕೆಯೂ ಇರುವುದಿಲ್ಲ. ಪುಕ್ಕವೂ ಇರುವುದಿಲ್ಲ. ಆದರೂ ಹಕ್ಕಿಯಂತೆ ಹಾರಾಡುತ್ತಿರುತ್ತದೆ. ಅಂತಹ ಹಕ್ಕಿಯ ಹಾರಾಟ ಸಿದ್ದರಾಮಯ್ಯ ಮತ್ತು ಅವರ ಪಕ್ಷದ ನಾಯಕರು, ಕಾರ್ಯಕರ್ತರಿಗೆ ನಗಣ್ಯವಾಗಿಯೆ ಇರುತ್ತದೆ.