ಮಂಗಳೂರು: ಹನಿಟ್ರ್ಯಾಪ್.. ಪ್ರಮುಖ ಸೂತ್ರಧಾರಿಗಳನ್ನು ಹೆಡೆಮುರಿ ಕಟ್ಟಿದ ಪೊಲೀಸರು

Uncategorized

ಸತ್ತಾರ್, ಮುಸ್ತಫಾ ಅಂದರ್..ಬಲೆಗೆ ಬಿದ್ದಿದ್ದು ಹೇಗೆ ಗೊತ್ತೆ..?

ಮಂಗಳೂರು ಉದ್ಯಮಿ, ಸಾಮಾಜಿಕ ಮುಂದಾಳು ಮುಮ್ತಾಜ್ ಅಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಹನಿಟ್ರ್ಯಾಪ್ ಸೂತ್ರಧಾರಿಗಳನ್ನು ಪೊಲೀಸರು ಬಲೆಗೆ ಕೆಡವಲು ಯಶಸ್ವಿಯಾಗಿದ್ದು, ಒಟ್ಟಾರೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಅನ್ನಲಾಗುತ್ತಿದೆ.

ಮುಮ್ತಾಜ್ ಅಲಿ ನಿಗೂಢ ಕಣ್ಮರೆ ಬಳಿಕ ಮುಮ್ತಾಜ್ ಅಲಿ ಸಹೋದರ ಹೈದರ್ ಆರು ಜನರ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಬಿಎನ್ ಎಸ್ ಕಾಯ್ದೆಯಡಿ ಐಪಿಸಿ 308(2), 308(5), 352, 351(2), 190 ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ಘಟನೆಗೆ ಸಂಬಂಧಿಸಿ ಪೊಲೀಸರು ಸತ್ತಾರ್ ಕಾರು ಚಾಲಕ ಸಿರಾಜ್ ಎಂಬಾತನನ್ನು ಆರಂಭಿಕ ಹಂತದಲ್ಲಿಯೇ ವಶಕ್ಕೆ ಪಡೆದಿದ್ದು ತನಿಖೆಗೆ ಒಳಪಡಿಸಿದ್ದು , ಆನಂತರ ಘಟನೆಯ ಪ್ರಮುಖ ಆರೋಪಿ ಹನಿಟ್ರ್ಯಾಪ್ ಯುವತಿ ರೆಹಮತ್, ಆಕೆಯ ಪತಿ ಶುಐಬ್ ಎಂಬವರನ್ನು ಬಂಧಿಸಿದ್ದರು. ಸತ್ತಾರ್ ತನ್ನ ಹೆಂಡತಿ ಮಕ್ಕಳನ್ನು ಬೈಂದೂರಿನ ಸ್ನೇಹಿತನ ಮನೆಯಲ್ಲಿ ಬಿಟ್ಟು ಅಲ್ಲಿಂದ ಎಸ್ಕೇಪ್ ಆಗಿದ್ದ, ಈತನ ಬೆನ್ನು ಬಿದ್ದ ಪೊಲೀಸರು ಇದೀಗ ಹನಿಟ್ರ್ಯಾಪ್ ಪ್ರಮುಖ ಸೂತ್ರಧಾರಿ ಸತ್ತಾರ್ ಸುರತ್ಕಲ್, ಜಿಲ್ಲಾ ವಕ್ಫ್ ಸದಸ್ಯ ಮುಸ್ತಫಾ ಎಂಬವರನ್ನು ಬೆಳಗಾವಿ ಭಾಗದಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಬಲೆಗೆ ಕೆಡವಿ ವಿಚಾರಣೆಗೆ ಕರೆದೊಯ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ.

ಈ ಪ್ರಕರಣದ ಆರೋಪಿಗಳು ಪ್ರಭಾವಿ ಹಿನ್ನೆಲೆ ಹೊಂದಿರುವುದರಿಂದ, ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿರುವುದರಿಂದ ರಾಜಕೀಯ ನಾಯಕರು ರಕ್ಷಿಸಬಹುದು ಅನ್ನುವ ಆರೋಪಗಳು ಮೊದಲು ಕೇಳಿ ಬಂದಿತ್ತು. ಆದರೆ ಅನ್ಯಾಯವಾಗಿ ಓರ್ವ ಜನಾನುರಾಗಿ ಪ್ರಮುಖ ನಾಯಕನ ಸಾವಿಗೆ ಕಾರಣವಾದುದರಿಂದ ಕಾಂಗ್ರೆಸ್ ಪಕ್ಷದ ಮುಖಂಡರು, ಕಳೆದ ಬಾರಿ ಕಾಂಗ್ರೆಸ್ ಪಕ್ಷದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ ಯುವನಾಯಕರೊಬ್ಬರು ಆರೋಪಿಗಳನ್ನು ಶ್ರೀಘ್ರ ಬಂಧಿಸುವಂತೆ ಪೊಲೀಸರಿಗೆ ಒತ್ತಡದ ಮೇಲೆ ಒತ್ತಡ ಹಾಕಿ, ಮೂರು ದಿನ ಕ್ರಿಯೆಗೆ ಮುಂಚಿತವಾಗಿ ಆರೋಪಿಗಳನ್ನು ಹೆಡೆಮುರಿ ಕಟ್ಟಲು ಪಣ ತೊಟ್ಟಿದ ಹಿನ್ನೆಲೆಯಲ್ಲಿ, ಇದೊಂದು ಹೈ ಪ್ರೊಫೈಲ್ ಕೇಸ್ ಆಗಿರುವುದರಿಂದ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.