ಮೂರು ಸಾವಿರ ಎಕರೆ ಭೂಮಿ, ಚಿನ್ನದ ಗಣಿ, ಸಮಸ್ತ ಆಸ್ತಿಯನ್ನು ಮಠಕ್ಕೆ ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ ಓಸ್ವಾಲ್ ಜೈನ್

ರಾಜ್ಯ

ಚಿನ್ನದ ಅದಿರು ಗಣಿ ಮಾಲೀಕ ರಾಜಸ್ಥಾನ ಮೂಲದ ಪಿ.ಬಿ.ಓಸ್ವಾಲ್ ಜೈನ್ ರವರು ತನ್ನ ಒಡೆತನದ ಗಣಿಗಾರಿಕೆ ಪ್ರದೇಶದ 3 ಸಾವಿರ ಎಕರೆ ಭೂಮಿ ಮತ್ತು ಇತರ ಸಮಸ್ತ ಆಸ್ತಿಯನ್ನು ದಾನವಾಗಿ ಪಾಲನಹಳ್ಳಿ ಮಠದ ಸಂಸ್ಥಾಪಕ ಅಧ್ಯಕ್ಷ ಡಾ. ಸಿದ್ದರಾಜು ಸ್ವಾಮೀಜಿ ಅವರಿಗೆ ಹಸ್ತಾಂತರಿಸಿದ್ದಾರೆ. ಕಳೆದ 20 ವರ್ಷಗಳಿಂದ ಪಾಲನಹಳ್ಳಿ ಶನೇಶ್ಚರ ಸ್ವಾಮಿ ಮಠಾಧ್ಯಕ್ಷರಾದ ಡಾ. ಸಿದ್ದರಾಜು ಸ್ವಾಮೀಜಿ ಅವರ ಜನೋಪಯೋಗಿ, ಸೇವಾ ಕೈಂಕರ್ಯಗಳನ್ನು ಹತ್ತಿರದಿಂದ ಗಮನಿಸಿ, 78 ವರ್ಷಪ್ರಾಯದ ಇವರು ಜೈನ ಧರ್ಮದ ತತ್ವಗಳ ಅನುಸಾರ ಅಹಿಂಸಾ ಪರಮಧರ್ಮ ವ್ರತಾಚರಣೆಯ ಅಂಗವಾಗಿ ಜೈನಯತಿ ಧರ್ಮವನ್ನು ಸ್ವೀಕರಿಸಲು ತೀರ್ಮಾನಿಸಿದ್ದಾರೆ.

ತುಮಕೂರಿನ ಚೇಳೂರು, ಚಿಕ್ಕನಾಯಕನಹಳ್ಳಿ ತಾಲೂಕುಗಳಲ್ಲಿ ತಮ್ಮ ಸ್ವಂತ ಬಲದಿಂದ ಸಂಪಾದಿಸಿರುವ 3 ಸಾವಿರ ಎಕರೆಯಲ್ಲಿ ಕಲ್ಲಿದ್ದಲು ಮತ್ತು ಇತರೆ ಗಣಿಗಾರಿಕೆ ನಡೆಸಿಕೊಂಡಿರುತ್ತಾರೆ. ಮುಂಬೈನ ವಿವಿಧೆಡೆಗಳಲ್ಲಿ ಅವರಿಗೆ ಸೇರಿರುವ ಕಟ್ಟಡ ಮತ್ತು ಚಿರ ಮತ್ತು ಚರ ಆಸ್ತಿಯಲ್ಲಿಗಳಿಸಿರುವ ಸಂಪತ್ತಿನಿಂದ ಪ್ರತಿವರ್ಷವೂ ಚಾಚೂ ತಪ್ಪದೆ 500 ಕೋಟಿ ರೂ. ಆದಾಯ ತೆರಿಗೆ ಪಾವತಿಸಿದ್ದಾರೆಂದು ತಿಳಿಸಿರುತ್ತಾರೆ. ಅವರಿಗೆ ಸೇರಿರುವ ಗಣಿಗಾರಿಕೆ ಮತ್ತು ಜರ್ಮನಿ, ಜಪಾನ್, ಕೊರಿಯಾ, ಆಸ್ಟ್ರೇಲಿಯಾ ಇತರೆ ದೇಶಗಳಲ್ಲಿನ ವ್ಯಾಪಾರ ವಹಿವಾಟನ್ನು ಪೂರ್ಣವಾಗಿ ಡಾ. ಸಿದ್ದರಾಜು ಸ್ವಾಮೀಜಿ ಹೆಸರಿಗೆ ನೋಂದಣಿ ಮಾಡಿಸಿದ್ದಾರೆ. ಬ್ಯಾಂಕ್ ವಹಿವಾಟು ಮತ್ತು ಭೂಮಿ ಹಾಗೂ ವಾಣಿಜ್ಯಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಹಸ್ತಾಂತರಿಸಿದ್ದಾರೆ. ಹಾಗೂ ಅವರಿಗೆ ಸೇರಿರುವ ಚರ ಮತ್ತು ಸ್ಥಿರ ಆಸ್ತಿ, ಹಣ, ವ್ಯಾಪಾರ ವಹಿವಾಟು ಸಮಸ್ತ ಸಂಪತ್ತನ್ನು ಡಾ.ಸಿದ್ದರಾಜು ಸ್ವಾಮಿ ಅವರಿಗೆ ಹಸ್ತಾಂತರಿಸಿ, ಸಮಾಜೋಪಯೋಗಿ ಸೇವೆಗೆ ಬಳಕೆಯಾಗಲಿ ಎಂದು ಜೈಸ್ವಾಲ್‌ ಹೇಳಿದ್ದಾರೆ.