ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಹಕರೊಬ್ಬರಿಗೆ ಆದ ತೊಂದರೆಗೆ ಜಿಲ್ಲಾ ಗ್ರಾಹಕ ನ್ಯಾಯಾಲಯ ಬಡ್ಡಿ ಸಮೇತ ಪರಿಹಾರ ನೀಡಲು ಆದೇಶಿಸಿದೆ.
ನಿವೃತ್ತ ಸರಕಾರಿ ಅಭಿಯೋಜಕ ನಾಗರಾಜ ಆಚಾರ್, ಬ್ಯಾಂಕ್ ನ ತಮ್ಮ ಖಾತೆ ವಿವರಗಳನ್ನು 2023 ರ ಸೆಪ್ಟೆಂಬರ್ 28 ರಂದು ಪರಿಶೀಲಿಸಿದಾಗ ಎರಡು ದಿನದ ಹಿಂದೆ ಖಾತೆಯ ಯುಪಿಐ ಮೂಲಕ 99,000 ರೂಪಾಯಿ ಮೊತ್ತ ವರ್ಗಾವಣೆಯಾಗಿತ್ತು. ಅವರ ಗಮನಕ್ಕೆ ಬಾರದಂತೆ ಹಣ ವರ್ಗಾವಣೆಗೊಂಡಿದ್ದರ ಬಗ್ಗೆ ಬ್ಯಾಂಕಿಂಗ್ ಓಂಬಡ್ಸ್ ಮನ್ ಮತ್ತು ಸಕ್ಷಮ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರೂ ನ್ಯಾಯ ಸಿಕ್ಕಿರಲಿಲ್ಲ.

ನಂತರ ಅವರು ದಾವಣಗೆರೆ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ಖಾತೆಯಿಂದ ವರ್ಗಾಯಿಸಲ್ಪಟ್ಟ 99,000 ರೂಪಾಯಿಗಳನ್ನು ವಾರ್ಷಿಕ ಶೇಕಡಾ 12 ಬಡ್ಡಿಯೊಂದಿಗೆ ಸಂಪೂರ್ಣ ಹಣ ಹಿಂತಿರಿಗಿಸುವಂತೆ ಮತ್ತು ದೂರುದಾರರಿಗೆ ಉಂಟಾದ ಮಾನಸಿಕ ತೊಂದರೆಗೆ ಪರಿಹಾರ ಮೊತ್ತವಾಗಿ 10,000 ರೂಪಾಯಿ ಹಾಗೂ 5,000 ರೂಪಾಯಿ ಕೋರ್ಟ್ ವೆಚ್ಚ ಕೊಡಬೇಕೆಂದು ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷ ಮಹಾಂತೇಶ ಈರಪ್ಪ ಶಿಗ್ಗಿ, ಸದಸ್ಯ ತ್ಯಾಗರಾಜನ್ ಆದೇಶಿಸಿದ್ದಾರೆ.
