ಬಿಜೆಪಿ ಮುಖಂಡ ಹಾಗೂ ಬೆಂಬಲಿಗರಿಂದ ವಿಟ್ಲ ಆರ್.ಐ.ಕಛೇರಿಯಲ್ಲಿ ದಾಂಧಲೆ. ಮೇಜು-ಗಾಜು ಧ್ವಂಸ, ಅಧಿಕಾರಿ ಮೇಲೆ ಹಲ್ಲೆಗೆ ಯತ್ನ..

ಕರಾವಳಿ

ಬಿಜೆಪಿ ಗೂಂಡಾ ಸಂಸ್ಕೃತಿಗೆ ವಿಟ್ಲ ಬ್ಲಾಕ್ ಕಾಂಗ್ರೆಸ್ ಖಂಡನೆ.

ವಿಟ್ಲ: ಮನೆ ಅಡಿಸ್ಥಳದ ಹಕ್ಕು ಪತ್ರ 94ಸಿ ವಿಚಾರದಲ್ಲಿ ಕಂದಾಯ ನಿರೀಕ್ಷಕರ ಕಛೇರಿಯಲ್ಲಿ ಬಿಜೆಪಿ ಮುಖಂಡನ ಜೊತೆಯಲ್ಲಿ ಬಂದ ಬೆಂಬಲಿಗರಿಂದ ದಾಂಧಲೆ ನಡೆದಿದ್ದು, ಮೇಜಿನ ಗಾಜು ಪುಡಿಪುಡಿಯಾಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಸ್ಥಳಕ್ಕಾಗಮಿಸಿ ಬಂದೋಬಸ್ತು ಏರ್ಪಡಿಸಿದ್ದಾರೆ.

ವೀರಕಂಬ ಗ್ರಾಮದ ನಿವಾಸಿ ಶೇಖ್ ಶಿಬಾನ್ ಎಂಬವರು ಇತ್ತೀಚೆಗೆ ಸರ್ಕಾರಿ ಜಾಗದಲ್ಲಿ ನೂತನ ಮನೆ ನಿರ್ಮಾಣ ಮಾಡಿದ್ದರು. ಅಡಿಸ್ಥಳವನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವುದಕ್ಕಾಗಿ 94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ವರದಿ ನೀಡುವ ಸಂದರ್ಭ ಅರ್ಜಿದಾರರು ಮನೆಯು ಅರಣ್ಯ ಇಲಾಖೆಯ ಜಮೀನಿನಿಂದ ನಿರ್ಧಿಷ್ಟ ದೂರದಲ್ಲಿದ್ದು, ಅಲ್ಲಿಂದ ಒಪ್ಪಿಗೆ ಪಡೆಯುವ ಬಗ್ಗೆ ಸೂಚಿಸಿದ್ದಾರೆ. ಇದರಿಂದ ಜಾಗ ಮಂಜೂರಾತಿ ವಿಳಂಬವಾಗಿತ್ತು.

ಈ ಬಗ್ಗೆ ಕಂದಾಯ ನಿರೀಕ್ಷಕರ ಕಛೇರಿಗೆ ಬಿಜೆಪಿ ಮುಖಂಡ ಮಾಧವ ಮಾವೆ, ಹರೀಶ್ ಕಲ್ಮಲೆ, ಧನಂಜಯ ಎಂಬವರು ಆಗಮಿಸಿದ್ದಾರೆ. ಕಂದಾಯ ನಿರೀಕ್ಷಕರು ಮತ್ತು ಇವರೊಳಗೆ ಮಾತಿನ ಚಕಮಕಿ ನಡೆದು ಸರ್ಕಾರಿ ಅಧಿಕಾರಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮೇಜಿಗೆ ಬಡಿದು ಗಾಜನ್ನು ಧ್ವಂಸಗೊಳಿಸಿ ಭೀತಿಯ ವಾತಾವರಣ ಸೃಷ್ಟಿಸಿದ್ದಾರೆ.

ಸರ್ಕಾರಿ ಕಛೇರಿಯಲ್ಲಿ ಅನಾಗರಿಕರಂತೆ ವರ್ತಿಸಿದ ಘಟನೆಯಿಂದಾಗಿ ಸ್ಥಳದಲ್ಲಿದ್ದ ಸಾರ್ವಜನಿಕರು ಆತಂಕಗೊಂಡು ಓಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿರುವ ಮಾಹಿತಿ ಪಡೆದ ವಿಟ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಸೇರಿದ ಗುಂಪನ್ನು ಚದುರಿಸಿದ್ದಾರೆ. ಯಾರೂ ಅರ್. ಐ ಕಛೇರಿಯನ್ನು ಪ್ರವೇಶಿಸದಂತೆ ಸೂಕ್ತ ಬಂದೋಬಸ್ತು ಕೈಗೊಂಡಿದ್ದಾರೆ.

ಬಿಜೆಪಿ ಗೂಂಡಾ ಸಂಸ್ಕೃತಿಗೆ ಬ್ಲಾಕ್ ಕಾಂಗ್ರೆಸ್ ಖಂಡನೆ.

ವಿಟ್ಲ ಆರ್.ಐ.ಕಛೇರಿಯಲ್ಲಿ ಬಿಜೆಪಿ ಮುಖಂಡ ಸಹಿತ ಬೆಂಬಲಿಗರು ನಡೆಸಿದ ಗೂಂಡಾಗಿರಿಯನ್ನು ಪುತ್ತೂರು ಕಾಂಗ್ರೆಸ್ ಉಗ್ರವಾಗಿ ಖಂಡಿಸಿದೆ. ಸರ್ಕಾರಿ ಅಧಿಕಾರಿಗಳ ಮೇಲೆ ದೌರ್ಜನ್ಯ ಎಸಗಿದ ಆರೋಪಿಗಳ ವಿರುದ್ಧ ಪೊಲೀಸ್ ಇಲಾಖೆ ತಕ್ಷಣ ಕಾನೂನು ಕ್ರಮ ಜರುಗಿಸಿ ಅಧಿಕಾರಿಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಒತ್ತಾಯಿಸಿದ್ದಾರೆ.