ಹೊಸ ಶಕ್ತಿಯೊಂದನ್ನು ಕಟ್ಟಲು ಹಲವು ನಾಯಕರಿಂದ ಯೋಚನೆ.
✍️. ಆರ್.ಟಿ.ವಿಠ್ಠಲಮೂರ್ತಿ
ಇನ್ನು ಕೆಲ ಕಾಲ ನಿಂತಿದ್ದ ಕೆಪಿಸಿಸಿ ಅಧ್ಯಕ್ಷ ಹುದ್ದೆಯ ರೇಸು ಪುನ: ಆರಂಭವಾಗಿದ್ದು,ಈ ಬಾರಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಡಿಸಿಎಂ ಡಿಕೆಶಿ ಅವರ ಸಹೋದರ ಡಿ.ಕೆ.ಸುರೇಶ್ ಹೆಸರು ರೇಸಿನಲ್ಲಿ ಕಾಣಿಸಿಕೊಂಡಿವೆ.
ಈ ಮಧ್ಯೆ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಅವರು ರೇಸಿನಲ್ಲಿ ಕಾಣಿಸಿಕೊಂಡಿದ್ದರೂ ಸತೀಶ್ ಜಾರಕಿಹೊಳಿ ಮತ್ತು ಡಿ.ಕೆ.ಸುರೇಶ್ ನಡುವಣ ಫೈಟು ಟಫ್ ಆಗಿದೆ.
ಅಂದ ಹಾಗೆ ಮೊನ್ನೆ ಮೊನ್ನೆಯ ತನಕ ಕೂಲ್ ಆಗಿದ್ದ ಕೆಪಿಸಿಸಿ ಸಾರಥ್ಯದ ವಿಷಯ ಇದ್ದಕ್ಕಿದ್ದಂತೆ ಮುನ್ನೆಲೆಗೆ ಬರಲು ಹಲವು ಕಾರಣಗಳು ಕೇಳಿ ಬರುತ್ತಿವೆಯಾದರೂ ಪಕ್ಷದಲ್ಲಿ ಅದಿಕಾರ ಹಂಚಿಕೆ ಒಪ್ಪಂದದ ಮಾತು ಕೇಳಿ ಬಂದಿದ್ದೇ ಮೂಲ ಎಂಬ ವ್ಯಾಖ್ಯಾನ ಪ್ರಬಲವಾಗಿದೆ. ಅದೇನೇ ಇದ್ದರೂ ಈಗ ರೇಸಿನಲ್ಲಿ ಕಾಣಿಸಿಕೊಂಡಿರುವ ಸತೀಶ್ ಜಾರಕಿಹೊಳಿ ಮತ್ತು ಡಿ.ಕೆ.ಸುರೇಶ್ ಅವರ ಹಿಂದೆ ಟಾಪ್ ಮೋಸ್ಟ್ ಕೈಗಳ ಒತ್ತಾಸೆ ಇದೆ.

ಈ ಪೈಕಿ ಸತೀಶ್ ಜಾರಕಿಹೊಳಿ ಹಿಂದಿರುವವರು: ಕರ್ನಾಟಕದಲ್ಲಿ ಅಹಿಂದ ಮತಗಳನ್ನು ಕನ್ ಸಾಲಿಡೇಟ್ ಮಾಡಲು ಸಿದ್ದರಾಮಯ್ಯ ಅವರಿಗೆ ಜಾರಕಿಹೊಳಿ ಪ್ಲಸ್ ಆಗಲಿದ್ದಾರೆ ಎಂದು ವಾದಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಮೊನ್ನೆ ನಡೆದ ಶಿಗ್ಗಾಂವಿ ಕ್ಷೇತ್ರದ ಉಪಚುನಾವಣೆಯ ಗೆಲುವನ್ನು ಅವರು ಉಲ್ಲೇಖಿಸುತ್ತಿದ್ದಾರೆ.
ಶಿಗ್ಗಾಂವಿ ಕ್ಷೇತ್ರದಲ್ಲಿ ಲಿಂಗಾಯತರ ಪ್ರಾಬಲ್ಯ ಹೆಚ್ಚಾದರೂ ಕ್ಷೇತ್ರದಲ್ಲಿ ಪಕ್ಷದ ಉಸ್ತುವಾರಿ ಹೊತ್ತ ಸತೀಶ್ ಜಾರಕಿಹೊಳಿ ಗೇಮ್ ಚೇಂಜ್ ಮಾಡಿದರು. ಅರ್ಥಾತ್, ಅಹಿಂದ ವರ್ಗಗಳ ಮತ ಸಾಲಿಡ್ಡಾಗಿ ಕನ್ ಸಾಲಿಡೇಟ್ ಮಾಡಿದ ಜಾರ್ಕಿಹೊಳಿ ಅದೇ ಕಾಲಕ್ಕೆ ಲಿಂಗಾಯತ ಮತ ಬ್ಯಾಂಕಿನ ಷೇರು ದಕ್ಕುವಂತೆ ಮಾಡಿದರು. ಹೀಗಾಗಿ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಈ ಕಾಂಬಿನೇಶನ್ ವರ್ಕ್ ಔಟ್ ಆಗಬೇಕೆಂದರೆ ಪಕ್ಷದ ಸಾರಥ್ಯ ಸತೀಶ್ ಜಾರಕಿಹೊಳಿ ಕೈಲಿರಬೇಕು ಎಂಬುದು ಅವರ ವಾದ.
ಆದರೆ ಕೆಪಿಸಿಸಿ ಪಟ್ಟಕ್ಕೆ ಡಿ.ಕೆ.ಸುರೇಶ್ ಹೆಸರನ್ನು ಮುಂದೆ ಮಾಡುತ್ತಿರುವವರು ಚನ್ನಪಟ್ಟಣ ಉಪಚುನಾವಣೆಯ ಫಲಿತಾಂಶದ ಕಡೆ ಬೊಟ್ಟು ಮಾಡುತ್ತಾರೆ. ಅವರ ಪ್ರಕಾರ, ಜೆಡಿಎಸ್ ಭದ್ರಕೊಟೆಯಾಗಿದ್ದ ಚನ್ನಪಟ್ಟಣ ಕ್ಷೇತ್ರವನ್ನು ಕಾಂಗ್ರೆಸ್ ವಶಪಡಿಸಿಕೊಳ್ಳಲು ಡಿಕೆಸು ಟೆಕ್ನಿಕ್ ಕಾರಣ. ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪವರ್ ಫುಲ್ಲಾಗಿದ್ದರೂ ಅವರ ಗೆಲುವಿಗೆ ಅಗತ್ಯವಾದ ಮತ್ತು ಅದಕ್ಕೂ ಹೆಚ್ಚಿನ ಮತಗಳನ್ನು ಸೆಳೆತಂದವರು ಡಿಕೆಸು.
ಅಂದ ಹಾಗೆ ಚನ್ನಪಟ್ಟಣದ ಗೆಲುವು ಬರೀ ಒಂದು ಕ್ಷೇತ್ರದ ಗೆಲುವಲ್ಲ. ಬದಲಿಗೆ ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲಿಷ್ಟವಾಗಿ ತಲೆ ಎತ್ತಲಿದೆ ಎಂಬುದರ ಕುರುಹು. ಹೀಗಾಗಿ ಭವಿಷ್ಯದಲ್ಲಿ ಹಳೆ ಮೈಸೂರು ಪಾಕೀಟನ್ನು ವಶಪಡಿಸಿಕೊಳ್ಳಲು ಡಿಕೆಸು ಟೆಕ್ನಿಕ್ ಅತ್ಯಗತ್ಯ. ಹೀಗಾಗಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗಬೇಕು ಎಂಬುದು ಮತ್ತೊಂದು ಗುಂಪಿನ ವಾದ. ಮುಂದೇನಾಗುತ್ತದೋ ಗೊತ್ತಿಲ್ಲ. ಆದರೆ ಸಧ್ಯಕ್ಕಂತೂ ಕೆಪಿಸಿಸಿ ಅಧ್ತಕ್ಷ ಸ್ಥಾನದ ರೇಸಿನಲ್ಲಿ ಜಾರಕಿಹೊಳಿ ಮತ್ತು ಡಿಕೆಸು ಮುಂದಿದ್ದಾರೆ.

ಲಾಸ್ಟ್ ಸಿಪ್
ಅಂದ ಹಾಗೆ ಕರ್ನಾಟಕದ ನೆಲೆಯಲ್ಲಿ ತೃತೀಯ ಶಕ್ತಿ ತಲೆ ಎತ್ತುವುದು ಬಹುತೇಕ ನಿಶ್ಚಿತವಾಗಿದೆ.
ಈ ಸಂಬಂಧ ಚರ್ಚಿಸಲು ಹಿರಿಯ ನಾಯಕ ಸಿ. ಎಂ. ಇಬ್ರಾಹಿಂ, ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಮತ್ತು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಅವರು ಡಿಸೆಂಬರ್ 16 ರಂದು ಸಭೆ ಸೇರಿದ್ದಾರೆ.
ಅಂದ ಹಾಗೆ ಇಬ್ರಾಹಿಂ ಸೇರಿದಂತೆ ಹಲ ನಾಯಕರು ಕಾಂಗ್ರೆಸ್ ಸೇರುವ ಒಲವು ಹೊಂದಿದ್ದರಾದರೂ ಇದ್ದಕ್ಕಿದ್ದಂತೆ ಹೊಸ ಶಕ್ತಿಯನ್ನು ಕಟ್ಟಲು ಯೋಚಿಸುತ್ತಿರುವುದು ಕುತೂಹಲಕಾರಿಯಾಗಿದೆ. ಅರ್ಥಾತ್, ಅಧಿಕಾರ ಹಂಚಿಕೆಯ ಮಾತು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಾಳಯವನ್ನು ತಲ್ಲಣಗೊಳಿಸುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಈಗಲೇ ಕೈ ಹಿಡಿಯುವುದು ತರವಲ್ಲ ಎಂಬುದು ಸಿ.ಎಂ.ಇಬ್ರಾಹಿಂ ಯೋಚನೆ.

ಹೀಗಾಗಿ ಸಧ್ಯಕ್ಕೆ ಹೊಸ ಶಕ್ತಿಯನ್ನು ಅಸ್ತಿತ್ವಕ್ಕೆ ತಂದರೆ ಮುಂದಿನ ಬೆಳವಣಿಗೆಗಳನ್ನು ಕಾದು ನೋಡಿ ಹೆಜ್ಜೆ ಇಡಬಹುದು ಎಂಬುದು ಅವರ ಯೋಚನೆ. ಹೀಗಾಗಿ ರಕ್ಷಣಾ ವೇದಿಕೆ, ಬಹುಜನಸಮಾಜ ಪಕ್ಷ ಸೇರಿದಂತೆ ಹಲವು ಶಕ್ತಿಗಳ ಜತೆ ಸೇರಿ ಹೊಸ ಶಕ್ತಿ ಕಟ್ಟಲು ಅವರು ನಿರ್ಧರಿಸಿದ್ದಾರೆ.
✍️. ಆರ್.ಟಿ.ವಿಠ್ಠಲಮೂರ್ತಿ
