ಉಳಾಯಿಬೆಟ್ಟು, ನಾರ್ಶ ದರೋಡೆ ಪ್ರಕರಣ ‘ಆಪ್ತರೇ’ ಆರೋಪಿಗಳು.! ಕೋಟೆಕಾರ್ ದರೋಡೆ ಪ್ರಕರಣ ಭೇದಿಸಲು ಪೊಲೀಸರು ವಿಫಲರಾದ್ರ.?

ಕರಾವಳಿ

ಮನೆಮಗನಂತೆ ನೋಡಿಕೊಂಡವರಿಗೆ ‘ವಿಶ್ವಾಸಘಾತುಕ’ ರಾದರು.!

ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರಿಗೆ ಎಲ್ಲ ಕಡೆಯಿಂದಲೂ ಶಹಬ್ಬಾಸ್ ಗಿರಿ ಸಿಗುತ್ತಿದೆ. ಅದಕ್ಕೆ ಕಾರಣ ಅವರು ಹಿಡಿದಿರುವ ಮಿಕವೊಂದು! ಅದು ಅಂತಿಂಥ ಮಿಕವಲ್ಲ. ಪೊಲೀಸ್ ಸಮವಸ್ತ್ರದಲ್ಲಿದ್ದ ‘ಕೇಡಿ’ ಪೊಲೀಸ್. ಬಂಟ್ವಾಳ ನಾರ್ಶ ಸಿಂಗಾರಿ ಬೀಡಿ ಮಾಲಿಕರ ಮನೆ ದರೋಡೆ ಪ್ರಕರಣಕ್ಕೆ ಜಿಲ್ಲಾ ಪೊಲೀಸರು ತಾರ್ಕಿಕ ಅಂತ್ಯ ಕಾಣಿಸಿದ್ದಾರೆ. ದರೋಡೆಯ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದ ಮಲಯಾಳಿ ಎಎಸ್ ಐ ಕೈಗೆ ಕೋಳ ತೊಡಿಸಿದ್ದಾರೆ. ಜೊತೆಗೆ ದರೋಡೆಯ ಹಿಂದಿದ್ದ ಎಲ್ಲಾ ಸೂತ್ರಧಾರಿಗಳನ್ನು ಒದ್ದು ಒಳಗೆ ಹಾಕಿದ್ದಾರೆ. ಇದು ಬಂಟ್ವಾಳದ ಕಥೆ.

ಆದರೆ ಉಳ್ಳಾಲದ ಕಥೆ ಇದಕ್ಕಿಂತ ಭಿನ್ನ. ಕೋಟೆಕಾರ್ ಬ್ಯಾಂಕ್ ದರೋಡೆ ನಡೆದು ತಿಂಗಳಾಗುತ್ತ ಬಂದರೂ ಪೊಲೀಸರು ಯಶಸ್ಸು ಕಾಣಲು ಸಾಧ್ಯವಾಗಿಲ್ಲ. ಮುಂಬಯಿ ಧಾರಾವಿ ಗ್ಯಾಂಗ್ ನ ನಾಲ್ವರು ಡಕಾಯಿತರನ್ನು ಅಂದರ್ ಮಾಡಿದ್ದು ಬಿಟ್ಟರೆ, ಬ್ಯಾಂಕ್ ದರೋಡೆಗೆ ಸ್ಕೆಚ್, ಇಂಚಿಂಚೂ ಮಾಹಿತಿ ನೀಡಿದ್ದ ಸ್ಥಳೀಯ ಕೆಲವು ಆರೋಪಿಗಳನ್ನು ಈವರೆಗೂ ಬಂಧಿಸಲು ಸಾಧ್ಯವಾಗಿಲ್ಲ. ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಭಾವಿಗಳು ತೆರೆಮರೆಯಲ್ಲಿ ಕೈಯಾಡಿಸುತ್ತಿದ್ದಾರೆ ಅನ್ನುವ ಸುದ್ದಿಗಳು ಹರಿದಾಡುತ್ತಿದೆ. ಪೊಲೀಸರು ಪ್ರಕರಣ ಭೇದಿಸಲು ನಿರಾಸಕ್ತಿ ತೋರಿಸುತ್ತಿರುವುದು ಕೂಡ ಅನುಮಾನಕ್ಕೆ ಕಾರಣವಾಗುತ್ತಿದೆ. ಜಿಲ್ಲಾ ಎಸ್ಪಿ ವ್ಯಾಪ್ತಿಯ ದರೋಡೆ ಪ್ರಕರಣವನ್ನು ಅಷ್ಟೇ ಸಲೀಸಾಗಿ ಬೇಧಿಸಲು ಪೊಲೀಸರಿಗೆ ಸಾಧ್ಯವಾಗುವುದಾದರೆ, ಜಿಲ್ಲಾ ಕಮೀಷನರ್ ವ್ಯಾಪ್ತಿಯ ಪೊಲೀಸರು ವಿಫಲರಾಗುತ್ತಿರುವುದರ ಹಿಂದಿನ ಮರ್ಮವೇನು.?

ಯಾರನ್ನೂ ನಂಬುವಂತ್ತಿಲ್ಲ. ತಾವು ವಿಶ್ವಾಸವಿಟ್ಟ ವ್ಯಕ್ತಿಗಳೇ ಬೆನ್ನಿಗೆ ಚೂರಿ ಹಾಕುವ ಕಲಿಗಾಲವಿದು. ಮನೆಮಗನಂತೆ ನೋಡಿಕೊಂಡವರಿಗೆ ಕೇಡು ಬಯಸುವ ದುರಂತ ಕಾಲದಲ್ಲಿ ನಾವಿದ್ದೇವೆ. ವಿಶ್ವಾಸ ಇಟ್ಟವರೇ ವಿಶ್ವಾಸಘಾತುಕರಾಗುತ್ತಿದ್ದಾರೆ. ಉಂಡು ಹೋದ ಕೊಂಡು ಹೋದ ಅನ್ನುವಂತೆ ತಮ್ಮ ಎಡ ಬಲಗಳಲ್ಲಿ ಇದ್ದವರೇ, ಒಂದೇ ತಟ್ಟೆಯಲ್ಲಿ ಊಟ ಮಾಡಿದವರೇ ಖೆಡ್ಡಾ ತೋಡುತ್ತಿದ್ದಾರೆ. ಇತ್ತೀಚೆಗೆ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ ಎರಡು ದರೋಡೆ ಪ್ರಕರಣದಲ್ಲಿ ಇದು ಮತ್ತಷ್ಟು ಸಾಬೀತಾಗಿದೆ. ಬಂಟ್ವಾಳ ನಾರ್ಶದ ಸಿಂಗಾರಿ ಬೀಡಿ ಮಾಲೀಕ ಸುಲೈಮಾನ್ ಹಾಜಿ ಮನೆಗೆ ನಕಲಿ ಇ.ಡಿ ರೂಪದಲ್ಲಿ ಎಂಟ್ರಿಕೊಟ್ಟು ಕೋಟಿ ದೋಚಿದ ಪ್ರಕರಣದಲ್ಲಿ ಆರೋಪಿಯಾಗಿರುವಾತ ಅವರ ಬಳಿಯಲ್ಲಿಯೇ ಕೆಲಸ ಮಾಡಿಕೊಂಡಿದ್ದ ನಾರ್ಶದ ಸಿರಾಜುದ್ದೀನ್ ಎಂಬಾತ. ಈತನೇ ದರೋಡೆಗೆ ಸಂಚು ರೂಪಿಸಿದವ. ಈತನ ತಂದೆ ಸಿಂಗಾರಿ ಬೀಡಿಯ ಬಿಸಿರೋಡ್ ಬ್ರಾಂಚಿನಲ್ಲಿ ಚಕ್ಕರ್ ಆಗಿದ್ದವರು. ತಮ್ಮ ಅತ್ಯಾಪ್ತರೇ ದರೋಡೆಗೆ ಸಂಚು ರೂಪಿಸುತ್ತಾರೆ ಅಂದರೆ ಇನ್ನು ಯಾರನ್ನು ನಂಬುವುದು. ಸಿಂಗಾರಿ ದರೋಡೆ ಪ್ರಕರಣದಲ್ಲಿ ಇನ್ನಷ್ಟು ಅವರ ಅತ್ಯಾಪ್ತರು ಪರೋಕ್ಷವಾಗಿ ಕೈಯಾಡಿಸಿದ್ದಾರೆ ಅನ್ನುವ ಮಾಹಿತಿಗಳು ಹರಿದಾಡುತ್ತಿದೆ. ಅವರೆಲ್ಲರೂ ಕಾನೂನಿನ ಕುಣಿಕೆಯಿಂದ ಪಾರಾಗಿದ್ದಾರಂತೆ!

ಇನ್ನು ಕಳೆದ ಜೂನ್ ತಿಂಗಳ ಅವಧಿಯಲ್ಲಿ ಉಳಾಯಿಬೆಟ್ಟು ಕಾಯರ್ ಪದವಿನಲ್ಲಿ ನಡೆದ ಕಾಂಗ್ರೆಸ್ ಮುಖಂಡ, ಉದ್ಯಮಿ ಪದ್ಮನಾಭ ಕೋಟ್ಯಾನ್ ಮನೆಗೆ ಎಂಟರಿಂದ ಒಂಭತ್ತು ಜನರ ಗ್ಯಾಂಗ್ ರಾತ್ರೋರಾತ್ರಿ ಮನೆಗೆ ನುಗ್ಗಿ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿತ್ತು. ಆ ನಂತರ ಪೊಲೀಸರು ದರೋಡೆಯಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದರು. ಆದರೆ ಬಂಧನಕ್ಕೊಳಗಾಗಿದ್ದ ಆರೋಪಿಗಳ ಪೈಕಿ ಇಬ್ಬರು ಕೋಟ್ಯಾನ್ ರಿಗೆ ಅತ್ಯಂತ ಆತ್ಮೀಯರಾಗಿ ಇದ್ದವರು. ಅದರಲ್ಲಿ ಒಬ್ಬಾತ ಕೋಟ್ಯಾನ್ ರ ಮಾಜಿ ಕಾರು ಚಾಲಕನಾಗಿದ್ದ. ಒಂದೇ ಬಟ್ಟಲಲ್ಲಿ ಊಟ ಮಾಡಿಕೊಂಡು ಇದ್ದವರು. ಇಂತಹವರೇ ಸಂಚು ರೂಪಿಸಿ ಖೆಡ್ಡಾ ತೋಡುತ್ತಾರೆ ಅಂದರೆ ಯಾರಲ್ಲಿ ವಿಶ್ವಾಸವಿಡುವುದು.

ದರೋಡೆ, ಡಕಾಯಿತಿ ನಡೆಸಿದರೂ ಒಂದಲ್ಲ ಒಂದು ದಿನ ಪೊಲೀಸರ ಆತಿಥ್ಯವಾಗುತ್ತೇವೆ ಅನ್ನುವ ಅರಿವಿದ್ದರೂ ತಮ್ಮ ಅತ್ಯಾಪ್ತ ಉದ್ಯಮಿಗಳಿಗೆ ಖೆಡ್ಡಾ ತೋಡುತ್ತಾರೆ. ಬೇರೆ ಕಡೆ ದರೋಡೆ ಮಾಡಿದರೆ ತಮಗೆ ಲಾಭವಿಲ್ಲ. ತಮ್ಮ ಪರಿಚಯಸ್ಥರನ್ನೇ ದರೋಡೆಗೈದರೆ ಒಮ್ಮೆ ಕೆಟ್ಟ ಹೆಸರು ಬರಬಹುದು, ಆದರೆ ಕೈಯಾರೆ ದುಡ್ಡು ಸಿಗುತ್ತದೆ ಅನ್ನುವ ಅಂದಾಜು ಇವರದ್ದು. ಕೆಲವೊಂದು ಉದ್ಯಮಿಗಳದ್ದು ಧೋ ನಂಬರ್ ದಂಧೆಯ ಬ್ಯುಸಿನೆಸ್. ಇದರ ಹಿಂದಿನ ಎಲ್ಲಾ ಮರ್ಮ ಅತ್ಯಾಪ್ತರಿಗೆ ತಿಳಿದೇ ಇರುತ್ತದೆ. ಅವರನ್ನು ದೋಚಿದರೆ ಕೈ ತುಂಬಾ ಕಾಸು ಸಿಗುತ್ತದೆ. ದರೋಡೆಯಾದರೆ ಪೊಲೀಸ್ ದೂರಿನಲ್ಲಿ ದಾಖಲಿಸುವುದು ಬರೀ ಚಿಲ್ಲರೆ ಹಣವನ್ನು ಮಾತ್ರ. ಉಳಿದ ಹಣಕ್ಕಾಗಿ ಅವರಲ್ಲಿ ದಾಖಲೆ ಇರುವುದಿಲ್ಲ. ದಾಖಲೆ ಇದ್ದ ಹಣವನ್ನು ಮಾತ್ರ ದೋಚಲಾಗಿದೆ ಎಂದು ಕಂಪ್ಲೇಂಟ್ ಕೊಡುತ್ತಾರೆ. ಆದರೆ ಅಲ್ಲಿ ಪೊಲೀಸ್ ದೂರಿಗಿಂತ ಹೆಚ್ಚಾಗಿ ಮೂರು ಪಟ್ಟು ದರೋಡೆಯಾಗಿರುತ್ತದೆ. ಇದನ್ನೆಲ್ಲ ತಿಳಿದು ಸಂಚು ರೂಪಿಸುತ್ತಾರೆ. ಉದ್ಯಮಿಗಳು ತಮಗೆ ಕಾನೂನಿನ ರೀತಿಯ ಸಂಕಷ್ಟ ಬೇಡವೆಂದು ಸಣ್ಣ ಮೊತ್ತ ದರೋಡೆಯಾಗಿದೆ ಎಂದು ದೂರು ದಾಖಲಿಸುತ್ತಾರಷ್ಟೇ. ಒಂದೈದು ತಿಂಗಳು ಜೈಲಿನಲ್ಲಿ ಕಳೆದು ಜಾಮೀನು ಪಡೆದು ಆರಾಮವಾಗಿ ಕೂತು ತಿನ್ನಬಹುದು ಅನ್ನುವ ಕಾರಣಕ್ಕೆ ಇಂತಹ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ ಉದ್ಯಮಿಗಳು ತಮ್ಮ ವಹಿವಾಟಿನ ಬಗ್ಗೆ ಅತ್ಯಾಪ್ತರ ಬಗ್ಗೆ ಹೇಳಿಕೊಳ್ಳಲು ಹೆದರಿಕೊಳ್ಳುತ್ತಿದ್ದಾರಂತೆ.