ಕೇರಳ, ಆಂಧ್ರ, ತಮಿಳು ನಾಡು ಮಾದರಿಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಗಳಿಗೆ ಪೀಕ್ ಕ್ಯಾಪ್: ರಾಜ್ಯ ಪೊಲೀಸ್ ಇಲಾಖೆ ಚಿಂತನೆ

ರಾಜ್ಯ

ಪೊಲೀಸ್ ಕಾನ್ಸ್ ಟೇಬಲ್ ಹಾಗೂ ಹೆಡ್ ಕಾನ್ಸ್ ಟೇಬಲ್ ಗಳ ಟೋಪಿ ಬದಲಾವಣೆಗೆ ಚಿಂತನೆ ನಡೆಸಿರುವ ರಾಜ್ಯ ಪೊಲೀಸ್ ಇಲಾಖೆ, ಈ ಕುರಿತು ಚರ್ಚೆ ನಡೆಸಲು ಏಪ್ರಿಲ್ 4 ರಂದು ವಿವಿಧ ಘಟಕಗಳ ಮುಖ್ಯಸ್ಥರ ಸಭೆ ಕರೆದಿದೆ. ಕಾನ್ಸ್ ಟೇಬಲ್ ಗಳು ಹಾಲಿ ಧರಿಸುತ್ತಿರುವ ಸ್ಲೋಚ್ ಹ್ಯಾಟ್ ಬದಲಿಗೆ ಪೀಕ್ ಕ್ಯಾಪ್ ನೀಡುವ ಸಂಬಂಧ ಕೆಎಸ್ ಆರ್ ಪಿ ಎಡಿಜಿಪಿ ಅಧ್ಯಕ್ಷತೆಯ ಸಭೆಯಲ್ಲಿ ಚರ್ಚೆ ನಡೆಯಲಿದೆ. ಜತೆಗೆ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಡಿಜಿ ಐಜಿಯವರಿಗೆ ಕಳುಹಿಸಲಾಗುತ್ತದೆ. ಆನಂತರ ಪೀಕ್ ಕ್ಯಾಪ್ ನೀಡುವ ಕುರಿತು ಅಂತಿಮ ಆದೇಶ ಹೊರಬೀಳುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಅವರು ಕಾನ್ಸ್ ಟೇಬಲ್ ಗಳಿಗೆ ಟೋಪಿ ಬದಲಿಗೆ ಕೇರಳ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಮಾದರಿಯಲ್ಲಿ ಪೀಕ್ ಕ್ಯಾಪ್ ನೀಡುವ ಬಗ್ಗೆ ಪ್ರಸ್ತಾಪಿಸಿ ಸರಕಾರದ ಗಮನ ಸೆಳೆದಿದ್ದರು. ಈ ನಿಟ್ಟಿನಲ್ಲಿ ಡಿಜಿ -ಐಜಿ ಅವರು, ನೆರೆ ರಾಜ್ಯಗಳಲ್ಲಿ ಕಾನ್ಸ್ ಟೇಬಲ್ ಗಳಿಗೆ ನೀಡುತ್ತಿರುವ ಪೀಕ್ ಕ್ಯಾಪ್ ಬಗ್ಗೆ ಅಧ್ಯಯನ ನಡೆಸಬೇಕು ಜತೆಗೆ, ನಾನಾ ಪೊಲೀಸ್ ಘಟಕಗಳ ಜತೆ ಸಭೆ ನಡೆಸಿ ವರದಿ ನೀಡುವಂತೆ ಕೆಎಸ್ ಆರ್ ಪಿ ಯ ಎಡಿಜಿಪಿ ಗೆ ತಾಕೀತು ಮಾಡಿದ್ದರು.