12 ಸಿಸಿ ಕ್ಯಾಮರಾ, 11 ಹೈಬ್ರಿಡ್ ನಾಯಿಗಳು, ವಾಚ್ ಮ್ಯಾನ್ ಇದ್ದರೂ, ಲಾಕರ್ ಒಡೆದು ಚಿನ್ನಾಭರಣ ದೋಚಿದ ಕಳ್ಳರು
ಬಜಪೆ: ಪೆರ್ಮುದೆ ಪೇಟೆಯಲ್ಲಿರುವ ಮನೆಯೊಂದರ ಕಿಟಿಕಿಯನ್ನು ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು ಲಾಕರ್‌ನಲ್ಲಿದ್ದ ಸುಮಾರು ಒಂದು ಕೆ.ಜಿ. ಚಿನ್ನಾಭರಣ, ಕಳವು ಮಾಡಿರುವ ಘಟನೆ ಬಜಪೆ ಠಾಣಾ ವ್ಯಾಪ್ತಿಯ ಪೆರ್ಮುದೆಯಲ್ಲಿ ಬೆಳಕಿಗೆ ಬಂದಿದೆ.
ಪೆರ್ಮುದೆಯ ನಿವಾಸಿ ಪ್ರವೀಣ್ ಪಿಂಟೋ ಎಂಬವರಿಗೆ ಸೇರಿದ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಜಾನ್ವಿನ್ ಪಿಂಟೋ ಹಾಗೂ ಅವರ ಪುತ್ರ ಪ್ರವೀಣ್ ಪಿಂಟೋ ವಿದೇಶದಲ್ಲಿದ್ದಾರೆ. ಮನೆಯಲ್ಲಿ ಯಾರೂ ವಾಸವಿರಲಿಲ್ಲ. ಈ ಮನೆಯ ಸುತ್ತ 14 ಸಿಸಿ ಕ್ಯಾಮರಾ ಇದ್ದರೂ, ಕ್ಯಾಮರಾದ ದಿಕ್ಕನ್ನು ಬದಲಿಸಿ ಕಿಟಿಕಿಯ ಕಬ್ಬಿಣದ ರಾಡ್ ಅನ್ನು ಮುರಿದು ಕಳ್ಳರು ಮನೆಯೊಳಗೆ ನುಗ್ಗಿದ್ದರು.

ಈ ಮನೆಯಲ್ಲಿ ಉತ್ತಮ ತಳಿಯ 8 ಸಾಕು ನಾಯಿಗಳಿವೆ. ಆದರೂ ಇವುಗಳ ಕಣ್ತಪ್ಪಿಸಿ ಕಳ್ಳರು ಕೃತ್ಯವೆಸಗಿದ್ದಾರೆ. ಲಾಕರ್‌ನಲ್ಲಿದ್ದ ಅಪಾರ ಮೌಲ್ಯದ ಚಿನ್ನಾಭರಣ, ವಾಚ್‌ಗಳನ್ನು ಹಾಗೂ ಅವೂಲ್ಯ ವಸ್ತುಗಳನ್ನು ಕಳವು ಮಾಡಿದ್ದಾರೆ. ಲಾಕರ್ ಕೀಯನ್ನು ಬಳಸಿ ಅದನ್ನು ತೆರೆದಿರುವುದು ಕಂಡುಬಂದಿದೆ. ಪ್ರತೀದಿನ ಮನೆಯ ನಾಯಿಗಳಿಗೆ ಆಹಾರ ಹಾಕಲು ಇಬ್ಬರು ಕೆಲಸದಾಳುಗಳು ಬರುತ್ತಿದ್ದರು. ಎಂದಿನಂತೆ ಅವರು ಬೆಳಗ್ಗೆ ನಾಯಿಗಳಿಗೆ ಆಹಾರ ಹಾಕಲು ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.
ಕಳ್ಳತನ ನಡೆದ ಸ್ಥಳಕ್ಕೆ ಪಣಂಬೂರು ಎಸಿಪಿ ಕೆ. ಶ್ರೀಕಾಂತ್, ಇನ್‌ಸ್ಪೆಕ್ಟರ್ ಸಂದೀಪ್, ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಾಲಕರು ಬುಧವಾರ ಕುವೈಟ್‌ನಿಂದ ಆಗಮಿಸಿದ ಬಳಿಕ ಕಳವಾದ ಸೊತ್ತುಗಳ ನಿಖರ ವಿವರ ಲಭಿಸಲಿದೆ.
