ರಾಜ್ಯದಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ತಡೆ, ಸರ್ಕಾರದಿಂದ ಕೆಲವು ಕಠಿಣ ನಿಯಮ

ರಾಜ್ಯ

ಸಿಸಿ, ಒಸಿ ಪಡೆಯದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದಿರಲು ವಿದ್ಯುತ್ ವಿತರಣಾ ಕಂಪನಿಗಳು ನಿರ್ಧಾರ

ರಾಜ್ಯದಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ತಡೆಹಾಕುವ ನಿಟ್ಟಿನಲ್ಲಿ ಸರ್ಕಾರ ಕೆಲವು ಕಠಿಣ ನಿಯಮಗಳನ್ನು ರೂಪಿಸಿದ ಬೆನ್ನಲ್ಲೇ, ವಸತಿ ಸೇರಿ ಎಲ್ಲ ಬಗೆಯ ಕಟ್ಟಡಗಳಿಗೂ ಅನ್ವಯವಾಗುವಂತೆ ನಕ್ಷೆ ಮಂಜೂರಾತಿ, ಆರಂಭಿಕ ಪ್ರಮಾಣಪತ್ರ (ಸಿಸಿ) ಹಾಗೂ ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಪಡೆಯದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದಿರಲು ವಿದ್ಯುತ್ ವಿತರಣಾ ಕಂಪನಿಗಳು ನಿರ್ಧರಿಸಿವೆ. ಇದು ಮುಂದಕ್ಕೆ ಕಟ್ಟಡ ಮಾಲೀಕರಿಗೆ ಸಂಕಷ್ಟ ತಂದೊಡ್ಡಿದೆ.

ಈ ನಿಯಮವು ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಅನ್ವಯವಾಗಲಿದೆ. ಇಂಥದ್ದೊಂದು ಕಠಿಣ ನಿಯಮವುಳ್ಳ ಆದೇಶವನ್ನು ಆಯಾ ಎಸ್ಕಾಂಗಳ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥರು ಕೆಳಹಂತದ ಅಧಿಕಾರಿಗಳಿಗೆ ರವಾನಿಸಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದಾರೆ. ಹೊಸ ಕಟ್ಟಡಗಳ ಜತೆಗೆ ಹಾಲಿ ನಿರ್ಮಾಣ ಹಂತದಲ್ಲಿರುವ ಬಿಲ್ಡಿಂಗ್​ಗಳಿಗೂ ಆದೇಶ ಅನ್ವಯವಾಗಲಿದೆ.

ಕಳೆದ ಡಿಸಂಬರ್ ತಿಂಗಳಲ್ಲಿ ಸುಪ್ರೀಂಕೋರ್ಟ್, ಅನಧಿಕೃತ ಕಟ್ಟಡ ಮತ್ತು ನಕ್ಷೆ ಉಲ್ಲಂಘಿಸಿ ನಿರ್ವಿುಸುವ ಬಿಲ್ಡಿಂಗ್​ಗಳಿಗೆ ಕಡಿವಾಣ ಹಾಕುವ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಬಹುದೆಂದು ಆದೇಶ ನೀಡಿತ್ತು. ಇದನ್ನಾಧರಿಸಿ ಕಳೆದ ಜನವರಿಯಲ್ಲೇ ಬಿಬಿಎಂಪಿ ಬೆಂಗಳೂರು ಇದರ ಮುಖ್ಯ ಆಯುಕ್ತರು ಬೆಸ್ಕಾಂ ಹಾಗೂ ಜಲಮಂಡಳಿಗೆ ಪತ್ರ ಬರೆದು ಸಿಸಿ, ಒಸಿ ಪಡೆಯದ ಕಟ್ಟಡಗಳಿಗೆ ನೀರು ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸದಂತೆ ಮನವಿ ಮಾಡಿದ್ದರು. ಇದೀಗ ಈ ನಿಯಮಗಳ ಜಾರಿಗೆ ಸರ್ಕಾರಿ ಸಂಸ್ಥೆಗಳು ಮುಂದಾಗಿದೆ.

ನಕ್ಷೆ ಮಂಜೂರಾತಿ ಪಡೆಯದೆ ಕಟ್ಟಡ ನಿರ್ವಿುಸುತ್ತಿದ್ದಲ್ಲಿ ಅಂತಹ ಬಿಲ್ಡಿಂಗ್​ಗಳಿಗೆ ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ಸಿಗುವುದಿಲ್ಲ. ಈ ಹಿಂದೆ ಒಸಿ ಪಡೆಯದಿದ್ದಲ್ಲಿ ಕಾಯಂ ಆಗಿ ವಿದ್ಯುತ್ ಸರಬರಾಜು ನೀಡುವ ವೇಳೆ ಕಠಿಣ ನಿಯಮ ಪಾಲಿಸಲಾಗುತ್ತಿತ್ತು. ಒಮ್ಮೆ ಕಟ್ಟಡ ನಿರ್ವಿುಸಿದ ಮೇಲೆ ಅದು ಅಕ್ರಮ ಬಿಲ್ಡಿಂಗ್ ಆಗಿದ್ದಲ್ಲಿ ಅದನ್ನು ಒಡೆದುಹಾಕಲು ಸಾಧ್ಯವಾಗುತ್ತಿರಲಿಲ್ಲ. ನೋಟಿಸ್ ಜಾರಿ ಮಾಡಿದಲ್ಲಿ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರಲಾಗುತ್ತಿತ್ತು. ಹೀಗಾಗಿ ಅನಧಿಕೃತ ಕಟ್ಟಡಗಳಿಗೆ ತಡೆಹಾಕಲು ಸಾಧ್ಯವಾಗುತ್ತಿರಲಿಲ್ಲ. ಕಟ್ಟಡ ನಿರ್ವಿುಸಲು ನಕ್ಷೆ ಮಂಜೂರಾತಿ, ಸಿಸಿ ಹಾಗೂ ಒಸಿ ಪಡೆಯದಿದ್ದಲ್ಲಿ ನೀರಿನ ಸಂಪರ್ಕವೂ ಸಿಗದು. ಸುಪ್ರೀಂಕೋರ್ಟ್ ಆದೇಶ ವಿದ್ಯುತ್ ಹಾಗೂ ನೀರಿನ ಸಂಪರ್ಕ – ಎರಡೂ ಸೌಲಭ್ಯಕ್ಕೆ ಅನ್ವಯವಾಗಲಿದೆ. ಸಂಸ್ಥೆಗಳು ಬೇರೆ ಬೇರೆ ಆಗಿರುವುದರಿಂದ ಎಸ್ಕಾಂಗಳು ವಿದ್ಯುತ್ ಸಂಪರ್ಕ ಕಡಿತ ಮಾಡುವ ಅಧಿಕಾರ ಹೊಂದಿದ್ದರೆ, ಜಲಮಂಡಳಿ ಅಥವಾ ಜಲ ಪೂರೈಸುವ ಏಜೆನ್ಸಿ ನೀರಿನ ಸಂಪರ್ಕ ಕಟ್ ಮಾಡಬಹುದಾಗಿದೆ.

ಭಾರತೀಯ ವಿದ್ಯುಚ್ಛಕ್ತಿ ಕಾಯ್ದೆಯ ನಿಯಮ 43ರ ಅನ್ವಯ ನಾಗರಿಕನೊಬ್ಬ ಹೊಸದಾಗಿ ಮನೆ ನಿರ್ಮಿಸಲು ಎಸ್ಕಾಂಗೆ ಅರ್ಜಿ ಸಲ್ಲಿಸಿದರೆ ಅದನ್ನು ಮಾನ್ಯ ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದಿದೆ. ಅಂದರೆ ತಾತ್ಕಾಲಿಕ ಸಂಪರ್ಕ ನೀಡಿ ನಂತರ ನಿಯಮ ಪೂರೈಸಿದರೆ ಕಾಯಂ ಸಂಪರ್ಕ ಕಲ್ಪಿಸಬಹುದಾಗಿದೆ. ಆದರೀಗ, ತಾತ್ಕಾಲಿಕ ಸಂಪರ್ಕ ಪಡೆಯಲು ಎಸ್ಕಾಂಗಳು ಕಠಿಣ ನಿಯಮ ರೂಪಿಸಿವೆ.