ಜಾರಕಿಹೊಳಿ ಪಟ್ಟು ಏನು.?; ಬಿಜೆಪಿಯಲ್ಲಿ ಎಮ್ಮೆಲ್ಸಿ ದಂಗಲ್
✍️. ಆರ್.ಟಿ.ವಿಠ್ಠಲಮೂರ್ತಿ
ಕಳೆದ ವಾರ ರಾಹುಲ್ ಗಾಂಧಿ ಅವರ ಆಹ್ವಾನದ ಮೇರೆಗೆ ದಿಲ್ಲಿಗೆ ಹೊರಟ ಸಿಎಂ ಸಿದ್ದರಾಮಯ್ಯನವರಿಗೆ ಎರಡು ವಿಷಯಗಳು ಪಕ್ಕಾ ಆಗಿದ್ದವು. ಮೊದಲ ವಿಷಯ, ರಾಹುಲ್ ಗಾಂಧಿ ಅವರು ತಮ್ಮ ರಾಜೀನಾಮೆ ಕೇಳಲಿದ್ದಾರೆ ಎಂಬುದು. ಎರಡನೆಯ ವಿಷಯ, ತಮ್ಮ ಸುತ್ತ ನಿಂತು ಆರ್ಭಟಿಸುತ್ತಿದ್ದ ಬಹುತೇಕ ಬೆಂಬಲಿಗರು ಅದಾಗಲೇ ಡಿ.ಕೆ. ಶಿವಕುಮಾರ್ ಅವರ ಕ್ಯಾಂಪಿಗೆ ಸೇರಿಕೊಂಡಿದ್ದಾರೆ ಎಂಬುದು.
ಹೀಗಾಗಿ ಮೇ ಇಪ್ಪತ್ತಾರರ ಮಂಗಳವಾರ ದಿಲ್ಲಿಗೆ ಹೋದ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಪಕ್ಷ ನಿಷ್ಟೆಯ ಬಗ್ಗೆ ಪ್ರಶಂಸಿಸಿದ ರಾಹುಲ್ ಗಾಂಧಿ ಅವರು ಕೊನೆಗೆ ವಿಷಯಕ್ಕೆ ಬಂದಿದ್ದಾರೆ.
‘ಸಿದ್ಧರಾಮಯ್ಯಾಜೀ. ಪಕ್ಷ ನಿಮ್ಮಿಂದ ಒಂದು ತ್ಯಾಗ ಬಯಸುತ್ತಿದೆ. ಇನ್ ಫ್ಯಾಕ್ಟ್ ಈ ವಿಷಯವನ್ನು ನಮ್ಮ ಕೆ.ಸಿ.ವೇಣುಗೋಪಾಲ್ ಅವರು ನಿಮ್ಮ ಗಮನಕ್ಕೆ ತಂದಿದ್ದಾರೆ ಅಂತ ಭಾವಿಸುತ್ತೇನೆ. ನಾವು ಕರ್ನಾಟಕದಲ್ಲಿ ಪಕ್ಷವನ್ನು ಬಲಿಷ್ಟಪಡಿಸಲು, 2028 ರ ವಿಧಾನಸಭಾ ಚುನಾವಣೆಯಲ್ಲಿ ಮರಳಿ ಗೆಲುವು ಸಾಧಿಸಲು ಒಂದು ಪ್ಲಾನು ಮಾಡಿದ್ದೇವೆ. ಅದು ಯಶಸ್ವಿಯಾಗಬೇಕು ಎಂದರೆ ನಿಮ್ಮ ಸಹಕಾರ ಬೇಕು’ ಎಂದಿದ್ದಾರೆ.
ಯಾವಾಗ ರಾಹುಲ್ ಗಾಂಧಿಯವರು ಈ ಮಾತು ಹೇಳಿದರೋ? ಆಗ ಗಟ್ಟಿ ಮನಸ್ಸು ಮಾಡಿಕೊಂಡ ಸಿದ್ದರಾಮಯ್ಯ ಅವರು: ‘ಸಾರ್,ನೀವು ನನಗೆ ನಿರಂತರವಾಗಿ ಬೆಂಬಲ, ಸಹಕಾರ ನೀಡುತ್ತಾ ಬಂದವರು. ಪಕ್ಷವನ್ನು ಬಲಿಷ್ಟಗೊಳಿಸಲು ನೀವು ಏನು ಹೇಳುತ್ತೀರೋ? ಅದನ್ನು ಮಾಡಲು ನಾನು ರೆಡಿ’ಎಂದಿದ್ದಾರೆ.
ಹೀಗೆ ಸಿದ್ದರಾಮಯ್ಯ ಅವರು ಮುಕ್ತ ಮನಸ್ಸಿನಿಂದ ಮಾತನಾಡಿದ್ದರಿಂದ ಖುಷಿಯಾದ ರಾಹುಲ್ ಗಾಂಧಿ: ‘ಇದನ್ನು ನಿಮಗೆ ಹೇಳಲು ನನಗೆ ಕಷ್ಟವಾಗುತ್ತಿದೆ. ಆದರೂ ಪಕ್ಷದ ಹಿತದೃಷ್ಟಿಯಿಂದ ನಾನಿದನ್ನು ನಿಮಗೆ ಹೇಳಲೇಬೇಕು. ಅದೆಂದರೆ ನೀವು ಸಿಎಂ ಹುದ್ದೆಗೆ ರಾಜೀನಾಮೆ ನೀಡಬೇಕು. ಹಾಗಂತ ನೀವು ಪೊಲಿಟಿಕಲಿ ಬ್ಯಾಕ್ ಡೋರ್ ಗೆ ಸರಿಯಬೇಕು ಅಂತಲ್ಲ. ಬದಲಿಗೆ ಇದೊಂದು ತಕ್ಷಣದ ಹೊಂದಾಣಿಕೆ. ಇವತ್ತು ನೀವು ತೆರವು ಮಾಡಿದ ಜಾಗಕ್ಕೆ ಡಿ.ಕೆ.ಶಿವಕುಮಾರ್ ಬರುತ್ತಾರೆ. ಮುಂದೆ 2028 ರಲ್ಲಿ ನೀವು, ಶಿವಕುಮಾರ್ ಜಂಟಿಯಾಗಿ ಹೋರಾಡಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತನ್ನಿ. ಆಗಲೂ ಮೊದಲ ಅವಧಿಯಲ್ಲಿ ನೀವು ಸಿಎಂ ಆಗಿ, ಎರಡನೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಅಗಲಿ’ ಎಂದು ವಿವರಿಸಿದ್ದಾರೆ. ಅಷ್ಟೇ ಅಲ್ಲ,’ ನೀವು ಈಗ ರಾಜೀನಾಮೆ ನೀಡಿದ ನಂತರ ರಾಜ್ಯಸಭೆಗೆ ಬನ್ನಿ. ರಾಷ್ಟ್ರದಲ್ಲಿ ಪಕ್ಷವನ್ನು ಕಟ್ಟುವ ವಿಷಯದಲ್ಲಿ ನಿಮ್ಮ ಸಲಹೆ ನಮಗೆ ಬೇಕು’ಎಂದಿದ್ದಾರೆ.
ಯಾವಾಗ ರಾಹುಲ್ ಗಾಂಧಿ ಹೀಗೆ ಹೇಳಿದರೋ? ಆಗ ಸಿದ್ದರಾಮಯ್ಯ ಅವರು ‘ಯಸ್ ಸಾರ್ ನಾನು ರಾಜೀನಾಮೆಗೆ ರೆಡಿ ಇದ್ದೇನೆ. ಆದರೆ ರಾಜ್ಯಸಭೆಗೆ ಬರುವ ಇಚ್ಚೆ ನನಗಿಲ್ಲ. ಏನೇ ಆದರೂ ಇಷ್ಟು ದಿನ ನನಗೆ ಸಹಕಾರ ನೀಡಿದ್ದೀರಿ. ಅದಕ್ಕಾಗಿ ಥ್ಯಾಂಕ್ಯೂ. ಇನ್ನು ಪಕ್ಷ ಕಟ್ಟುವ ವಿಷಯದಲ್ಲಿ ನಿಮ್ಮ ಯೋಚನೆ ಏನಿದೆ? ಅದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ’ಎಂದು ಹೇಳಿದ್ದಾರೆ.
ಹೀಗೆ ರಾಹುಲ್ ಗಾಂಧಿಯವರ ಜತೆ ಮಾತನಾಡಿ ಹೊರಬಂದ ಸಿದ್ದರಾಮಯ್ಯ ಅವರಿಗೆ ಕೆಲ ವಿಷಯಗಳು ಸ್ಪಷ್ಟವಾಗಿವೆ. ಈ ಪೈಕಿ ಮುಖ್ಯವಾದುದು ಎಂದರೆ ತಮ್ಮ ಪದತ್ಯಾಗಕ್ಕೆ ರಾಹುಲ್ ಗಾಂಧಿ ಅವರ ಮೇಲೆ ಮಿತಿ ಮೀರಿದ ಒತ್ತಡ ಹಾಕಿದವರು ಪ್ರಿಯಾಂಕ ಗಾಂಧಿ ಎಂಬುದು.

ಮೂಲಗಳ ಪ್ರಕಾರ, ‘ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಡಿ.ಕೆ. ಶಿವಕುಮಾರ್ ಅವರಿಗೆ ಪಟ್ಟ ಕಟ್ಟಲೇಬೇಕು ಎಂಬ ವಿಷಯದಲ್ಲಿ ಪರ್ಟಿಕ್ಯುಲರ್ ಆಗಿದ್ದ ಪ್ರಿಯಾಂಕಾ ಗಾಂಧಿ ಅವರು ಎರಡು ತಿಂಗಲ ಹಿಂದೆ ರಾಹುಲ್ ಗಾಂಧಿ ಅವರ ಮುಂದೆ ಒಂದು ಪತ್ರವನ್ನು ಇಟ್ಟಿದ್ದಾರೆ. ಕರ್ನಾಟಕ ಕಾಂಗ್ರೆಸ್ ನ ತೊಂಬತ್ಮೂರು ಶಾಸಕರ ಸಹಿ ಇದ್ದ ಆ ಪತ್ರವನ್ನು ರಾಹುಲ್ ಅವರ ಮುಂದಿಟ್ಟ ಪ್ರಿಯಾಂಕಾ ಗಾಂಧಿ: ‘ಇದುವರೆಗೆ ಕರ್ನಾಟಕದ ಕಾಂಗ್ರೆಸ್ ಶಾಸಕಾಂಗದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಬಹುಮತವಿಲ್ಲ ಅನ್ನುತ್ತಿದ್ದಿರಲ್ಲ? ಈಗ ಅದೇ ಶಾಸಕಾಂಗದ ತೊಂಬತ್ಮೂರು ಮಂದಿ ಡಿ.ಕೆ.ಶಿವಕುಮಾರ್ ಅವರನ್ನು ಬೆಂಬಲಿಸಿ ಪತ್ರಕ್ಕೆ ಸಹಿ ಹಾಕಿದ್ದರು. ಉಳಿದ ಬಹುತೇಕರು ಹೈಕಮಾಂಡ್ ಸೂಚನೆಯನ್ನು ಪಾಲಿಸುವವರು. ಇಷ್ಟಾದ ಮೇಲೂ ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡದಿದ್ದರೆ ಕಷ್ಟವಾಗುತ್ತದೆ’ಎಂದರಂತೆ.
ಯಾವಾಗ ಪ್ರಿಯಾಂಕಾಗಾಂಧಿ ಈ ಪತ್ರವನ್ನು ರಾಹುಲ್ ಮುಂದಿಟ್ಟರೋ? ಇದಾದ ನಂತರ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಮಾರ್ಗೋಪಾಯಗಳ ಬಗ್ಗೆ ಚಿಂತನೆ ನಡೆದು, ಈ ಚಿಂತನೆಯ ವಿವರವನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಮೂಲಕ ಕೆಲ ದಿನಗಳ ಹಿಂದೆ ಸಿದ್ದರಾಮಯ್ಯ ಅವರಿಗೆ ತಲುಪಿಸಲಾಗಿತ್ತು. ಹೀಗೆ ತಮ್ಮನ್ನು ಕೆಳಗಿಳಿಸುವ ತೀರ್ಮಾನವಾಗಿದೆ ಎಂಬುದರ ಸುಳಿವನ್ನು ಪಡೆದ ಸಿದ್ದರಾಮಯ್ಯ ಪದತ್ಯಾಗದ ಗಟ್ಟಿ ನಿರ್ಧಾರದೊಂದಿಗೆ ದಿಲ್ಲಿಗೆ ಹೋಗಿದ್ದಾರೆ. ಹೋಗಿ ಬಂದವರು ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಅವರ ಮುಂದಿನ ಹೆಜ್ಜೆ ಹೇಗಿರುತ್ತದೆ ಅಂತ ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಟೈಗರ್ ಜಿಂದಾ ಹೈ ಎಂಬುದನ್ನು ಕಾಂಗ್ರೆಸ್ ವರಿಷ್ಟರು ಮರೆತರೆ ಅಪಾಯ ಸನಿಹದಲ್ಲೇ ಇರಲಿದೆ.
ರಾಜ್ಯಸಭೆ ಸೀಟಿಗೆ ಪೈಪೋಟಿ
ಹೀಗೆ ಒಂದು ಕಡೆ ಸಿದ್ದರಾಮಯ್ಯ ಅವರ ರಾಜೀನಾಮೆ ಎಪಿಸೋಡು ಮುಗಿದು ಡಿ.ಕೆ.ಶಿವಕುಮಾರ್ ಅವರ ದರ್ಬಾರು ಆರಂಭವಾಗುವುದು ನಿಕ್ಕಿಯಾಗುತ್ತಿದ್ದಂತೆಯೇ, ಮತ್ತೊಂದೆಡೆ ಕರ್ನಾಟಕದಲ್ಲಿ ರಾಜ್ಯಸಭೆ ಟಿಕೆಟಿಗೆ ಪೈಪೋಟಿ ಶುರುವಾಗಿದೆ. ಈಗ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಮೂರು ಸ್ತಾನಗಳು ದಕ್ಕಲಿದ್ದು, ಈ ಪೈಕಿ ಎರಡು ಸೀಟುಗಳಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಶರ್ಮಿಳಾರೆಡ್ಡಿ ಅವರ ಆಯ್ಕೆ ಬಹುತೇಕ ಖಚಿತವಾಗಿದೆ. ಉಳಿದ ಒಂದು ಸೀಟನ್ನು ಪಡೆಯಲು ಹಲವರು ಕಸರತ್ತು ನಡೆಸುತ್ತಿದ್ದು ಮೊನ್ನೆ ದಿಲ್ಲಿಗೆ ಹೋಗಿದ್ದ ಕೆ.ಜೆ.ಜಾರ್ಜ್ ಅವರು, ನಾನು ‘ರಾಜ್ಯಸಭೆಗೆ ಬರಲು ರೆಡಿ’ ಅಂತ ರಾಹುಲ್ ಗಾಂಧಿ ಅವರಿಗೆ ಹೇಳಿದರಂತೆ. ಆದರೆ ಈ ಸೀಟನ್ನು ಮೈಸೂರು ಕಾಂಗ್ರೆಸ್ ಅಧ್ಯಕ್ಷರಾದ ಬಿ.ಜೆ.ವಿಜಯಕುಮಾರ್ ಅವರಿಗೆ ಕೊಡಿಸುವುದು ಸಿದ್ಧರಾಮಯ್ಯ ಅವರ ಪ್ರಪೋಸಲ್ಲು.
ಈ ಮಧ್ಯೆ ದಿಲ್ಲಿಯ ವರಿಷ್ಟರ ಮೇಲೆ ಒತ್ತಡ ಹೇರುತ್ತಿರುವ ಪವನ್ ಖೇರಾ ಸುಪ್ರಿಯಾ ಶ್ರೀನಾಥೆ ಹೇಗಾದರೂ ಮಾಡಿ ಟಿಕೆಟ್ ಗಿಟ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಶರ್ಮಿಳಾರೆಡ್ಡಿ ಅವರಿಗೆ ಟಿಕೆಟ್ ಕೊಡಲು ಬಯಸಿರುವುದರಿಂದ ಇವರಿಬ್ಬರಿಗೆ ಚಾನ್ಸು ಕಡಿಮೆ. ಇದೇ ರೀತಿ ಟಿಕೆಟ್ಟಿಗಾಗಿ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಕೂಡಾ ಫೈಟು ನಡೆಸಿದ್ದು ಪಕ್ಷದ ಹಲ ಹಿರಿಯ ನಾಯಕರು ಅವರ ಪರ ಬ್ಯಾಟ್ ಬೀಸುತ್ತಿದ್ದಾರೆ.

ಉಳಿದಂತೆ ಬಿಜೆಪಿಗೆ ದಕ್ಕುವ ಒಂದು ಸ್ಥಾನದ ಮೇಲೆ ಹಲವರು ಕಣ್ಣಿಟ್ಟಿದ್ದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ನಿರ್ಮಲ್ ಕುಮಾರ್ ಸುರಾನಾ, ಪ್ರಮೋದ್ ಮಧ್ವರಾಜ್ ಅವರು ರೇಸಿನಲ್ಲಿದ್ದಾರೆ. ಒಂದು ವೇಳೆ ದಿಲ್ಲಿಯ ನಾಯಕರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ರಾಜ್ಯಸಭೆಗೆ ಕಳಿಸಲು ಒಲವು ತೋರಿಸಿದರೆ ಕೇಸು ಕ್ಲೋಸಾಗುತ್ತದೆ. ಇಲ್ಲದಿದ್ದರೆ ಬಿಜೆಪಿಯಲ್ಲಿ ಟಿಕೆಟ್ ಪೈಪೋಟಿ ಮುಂದುವರಿಯಲಿದೆ.
ಬಿಜೆಪಿಯಲ್ಲಿ ಎಮ್ಮೆಲ್ಸಿ ದಂಗಲ್
ಇನ್ನು ಮುಂದಿನ ತಿಂಗಳು ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಗಳನ್ನು ಗೆಲ್ಲುತ್ತದಲ್ಲ? ಈ ಎರಡು ಸ್ಥಾನಗಳಿಗೆ ಪ್ರಾತಿನಿಧ್ಯವೇ ಇಲ್ಲದ ಸಮುದಾಯದವರನ್ನು ಕಳಿಸುವ ಚಿಂತನೆ ಅರೆಸ್ಸೆಸ್ ನಲ್ಲಿ ಶುರುವಾಗಿದೆ. ಈ ಹಿಂದೆ ರಾಜ್ಯಸಭೆ, ಪರಿಷತ್ತುಗಳಿಗೆ ಶಾಂತಾರಾಂ ಬುದ್ದಿ, ಅಶೋಕ್ ಗಸ್ತಿ ಅವರಂತವರನ್ನು ಕಳಿಸಲು ಕಾರಣವಾಗಿದ್ದ ಅರೆಸ್ಸೆಸ್ಸೆಸ್, ಈಗ ಪರಿಷತ್ತಿಗೂ ಅಂತವರನ್ನು ಕಳಿಸಲು ಬಯಸುತ್ತಿದೆ.
ಮೂಲಗಳ ಪ್ರಕಾರ, ಪಕ್ಷಕ್ಕೆ ದಕ್ಕುವ ಎರಡು ಸೀಟುಗಳಿಗಾಗಿ ಬಲಗೈನ ಮಹೇಶ್, ಕುರುಬ ಸಮುದಾಯದ ಶರಣ್ ತಳ್ಳಿಕೇರಿ, ಮಡಿವಾಳ ಸಮುದಾಯದ ನಾಯಕ, ಮೈಸೂರಿನ ರಘುಕೌಟಿಲ್ಯ, ಮಹಿಳಾ ಅಯೋಗದ ಮಾಜಿ ಅಧ್ಯಕ್ಷರು, ಒಕ್ಕಲಿಗ ಸಮುದಾಯದ ಮಂಜುಳಾ ಅವರು ಸೇರಿದಂತೆ ಹಲವರು ಪೈಪೋಟಿ ನಡೆಸಿದ್ದಾರೆ.
ಅದರೆ ಬಲಗೈನ ಛಲವಾದಿ ನಾರಾಯಣಸ್ವಾಮಿ ಅವರು ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿ ನೆಲೆಯಾಗಿದ್ದು ಈ ಹಿನ್ನೆಲೆಯಲ್ಲಿ ಅದೇ ಸಮುದಾಯಕ್ಜೆ ಟಿಕೆಟ್ ಬೇಡ ಎಂಬ ಕೂಗು ಬಿಜೆಪಿಯಲ್ಲಿದೆ. ಇದೇ ರೀತಿ ಕಾಂಗ್ರೆಸ್ ಪಕ್ಷ ಈ ಬಾರಿ ಕುರುಬ ಸಮುದಾಯದ ಹೆಚ್.ಎಂ. ರೇವಣ್ಣ ಅವರಿಗೆ ಟಿಕೆಟ್ ನೀಡುವುದರಿಂದ ಇಲ್ಲಿ ಅದೇ ಸಮುದಾಯದವರಿಗೆ ಟಿಕೆಟ್ ಕೊಡುವುದು ಬೇಡ ಎಂಬ ಕೂಗೂ ಕೇಳಿ ಬರುತ್ತಿದೆ. ಪರಿಣಾಮ? ಅರೆಸ್ಸೆಸ್ ನಲ್ಲಿ ನಡೆಯುತ್ತಿರುವ ಚಿಂತನೆ ಮತ್ತು ಬಿಜೆಪಿಯಲ್ಲಿ ಕೇಳಿ ಬರುತ್ತಿರುವ ಕೂಗು ಒಂದೇ ಲಯಕ್ಕೆ ಬಂದು ಪ್ರಾತಿನಿಧ್ಯವಿಲ್ಲದ ಸಮುದಾಯಗಳ ಅಭ್ಯರ್ಥಿಗಳಿಗೆ ಅವಕಾಶ ಸಿಗುವ ಸಾಧ್ಯತೆ ಜಾಸ್ತಿ
ಜಾರಕಿಹೊಳಿ ಪಟ್ಟು ಏನು.?
ಅಂದ ಹಾಗೆ ಡಿ.ಕೆ. ಶಿವಕುಮಾರ್ ಸಿಎಂ ಆಗುತ್ತಿರುವ ಈ ಹೊತ್ತಿನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅವರು ಬರುವುದು ಬಹುತೇಕ ನಿಶ್ಚಿತವಾಗಿದೆ. ಆದರೆ ಒಂದೇ ಸಮಸ್ಯೆ ಎಂದರೆ, ತಮಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜತೆ ಮಂತ್ರಿ ಹುದ್ದೆಯೂ ಬೇಕು ಎಂಬುದು ಸತೀಶ್ ಜಾರಕಿಹೊಳಿ ಅವರ ಪಟ್ಟು. ಹೀಗೆ ಸತೀಶ್ ಜಾರಕಿಹೊಳಿ ಅವರು ಪಕ್ಷಾಧ್ಯಕ್ಷ ಸ್ಥಾನದ ಜತೆ ಮಂತ್ರಿಗಿರಿಗೆ ಪಟ್ಟು ಹಿಡಿಯಲು ಕಾರಣವಿದೆ. ಅದೆಂದರೆ ಬೆಳಗಾವಿ ಜಿಲ್ಲೆಯ ರಾಜಕೀಯದ ಮೇಲೆ ಹಿಡಿತ ಬೇಕು ಎಂಬುದು. ಒಂದು ವೇಳೆ ಮಂತ್ರಿಗಿರಿ ಬಿಟ್ಟು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೇರಿದರೆ ಬೆಳಗಾವಿಯ ರಾಜಕಾರಣದಲ್ಲಿ ಶ್ರೀ ಮತಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಹಿರಿಯ ನಾಯಕ ಲಕ್ಷ್ಮಣ ಸವದಿ ಪವರ್ ಫುಲ್ಲಾಗುತ್ತಾರೆ. ಇವರಿಬ್ಬರ ಪೈಕಿ ಯಾರು ಮಂತ್ರಿಯಾಗಿ, ಜಿಲ್ಲಾ ಉಸ್ತುವಾರಿ ಸಚಿವರಾದರೂ ಜಿಲ್ಲೆಯ ರಾಜಕೀಯದ ಮೇಲೆ ಹಿಡಿತ ಸಾಧಿಸುತ್ತಾರೆ. ಇದು ಎಷ್ಟು ಡೇಂಜರ್ ಎಂಬುದು ಸತೀಶ್ ಜಾರಕಿಹೊಳಿ ಅವರಿಗೆ ಗೊತ್ತು. ಹೀಗಾಗಿ ಅವರು ಮಂತ್ರಿಗಿರಿಯ ಜತೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಿ ಅಂತ ಪಟ್ಟು ಹಿಡಿದಿದ್ದಾರೆ. ಇಲ್ಲ, ಇಲ್ಲ, ಒನ್ ಮ್ಯಾನ್ ಒನ್ ಪೋಸ್ಟ್ ಎಂದರೆ ಮಂತ್ರಿಗಿರಿ ಪಡೆದು ಉಸ್ತುವಾರಿ ಸಚಿವರಾದರೆ ಸಾಕು ಎಂಬ ತೀರ್ಮಾನಕ್ಕೆ ಅವರು ಬರುತ್ತಾರೆ.

ಒಂದು ವೇಳೆ ಅವರು ಮಂತ್ರಿಗಿರಿ ಸಾಕು ಎಂಬ ತೀರ್ಮಾನಕ್ಕೆ ಬಂದರೆ ಹಿಂದುಳಿದ ವರ್ಗಗಳ ನಾಯಕ, ದೇಶದ ಸೆಕ್ಯುಲರಿಸಂ ಬ್ರಾಂಡ್ ಅಗಿ ಬೆಳೆದು ನಿಂತಿರುವ ಬಿ.ಕೆ.ಹರಿಪ್ರಸಾದ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸಿನಲ್ಲಿ ಮುಂದೆ ಬರುತ್ತಾರೆ. ಮೂಲಗಳ ಪ್ರಕಾರ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡಾ ಇದನ್ನು ಬಯಸುತ್ತಾರೆ.
ಲಾಸ್ಟ್ ಸಿಪ್
ಅಂದ ಹಾಗೆ ಸಿಎಂ ಹುದ್ದೆಗೆ ರಾಜೀನಾಮೆ ಕೊಟ್ಟ ನಂತರ ಸಿದ್ದರಾಮಯ್ಯ ಅವರು ದಿಲ್ಲಿಗೆ ಹೋದರಲ್ಲ? ಈ ಸಂದರ್ಭದಲ್ಲಿ ಅವರ ಜತೆ ಮಾತನಾಡಿದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಒಂದು ಪ್ರಸ್ತಾಪ ಮುಂದಿಟ್ಟರಂತೆ.
‘ಸಿದ್ರಾಮಯ್ಯಾಜೀ. ನೀವೇನೋ ರಾಜ್ಯಸಭೆಯ ಟಿಕೆಟ್ ಅನ್ನು ನಿರಾಕರಿಸಿದಿರಿ. ಆದರೆ ಅದೇ ಟಿಕೆಟನ್ನು ನಿಮ್ಮ ಶ್ರೀಮತಿಯವರಿಗೆ ಕೊಡಲು ವರಿಷ್ಟರು ಉತ್ಸುಕರಾಗಿದ್ದಾರೆ. ದಯವಿಟ್ಟು ಇದನ್ನು ಒಪ್ಪಿಕೊಳ್ಳಿ’ಎಂದಿದ್ದಾರೆ.
ಆದರೆ ರಣದೀಪ್ ಸಿಂಗ್ ಸುರ್ಜೇವಾಲ ಅವರ ಮಾತನ್ನು ಕಡ್ಡಿ ಮುರಿದಂತೆ ತಳ್ಳಿ ಹಾಕಿದ ಸಿದ್ದರಾಮಯ್ತ ಅವರು: ನೋ,ನೋ, ಅದೆಲ್ಲ ಬೇಕಾಗಿಲ್ಲ’ಎಂದರಂತೆ.
