ಮಂಗಳೂರು: ಪಿಲಿಕುಳ ನಿಸರ್ಗಧಾಮಕ್ಕೆ ಶುಕ್ರವಾರ ದಿಢೀರ್ ಲೋಕಾಯುಕ್ತ ಪೊಲೀಸರಿಂದ ದಾಳಿ ನಡೆದಿದೆ. ಲೋಕಾಯುಕ್ತ ಪೊಲೀಸರಿಗೆ ಇಲ್ಲಿನ ಆಡಳಿತದಲ್ಲಿ ಭಾರೀ ಲೋಪದೋಷ ಕಂಡು ಬಂದಿದೆ ಎನ್ನಲಾಗಿದೆ.

ಮಂಗಳೂರು ಲೋಕಾಯುಕ್ತ ಉಪಾಧೀಕ್ಷಕರಾದ ಡಾ.ಗಾನ ಪಿ. ಕುಮಾರ್, ಸುರೇಶ್ ಕುಮಾರ್ ಪಿ. ಹಾಗೂ ಪೊಲೀಸ್ ನಿರೀಕ್ಷಕರಾದ ಭಾರತಿ ಜಿ., ಚಂದ್ರಶೇಖರ್ ಕೆ.ಎನ್. ಅವರು ಸಿಬ್ಬಂದಿಯೊಂದಿಗೆ ಮಂಗಳೂರಿನ ಪಿಲಿಕುಳಕ್ಕೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಡಳಿತದಲ್ಲಿ ಸಾಕಷ್ಟು ಲೋಪದೋಷಗಳು ಕಂಡುಬಂದಿದೆ.

ಪಿಲಿಕುಳ ಜೈವಿಕ ಉದ್ಯಾನವನದಿಂದ ಹೆಚ್ಚಿನ ಆದಾಯ ಬರುತ್ತಿದ್ದರೂ ಪ್ರಾಧಿಕಾರವು ಮೃಗಾಲಯದ ಏಳಿಗೆಗೆ ಹಣ ವೆಚ್ಚ ಮಾಡುತ್ತಿಲ್ಲ. ಅಲ್ಲಿನ ಸಿಬ್ಬಂದಿಗೆ ಕಡಿಮೆ ವೇತನ ನೀಡುತ್ತಿದ್ದು, ಯಾವುದೇ ಆರೋಗ್ಯ ಸೌಲಭ್ಯವನ್ನು ಒದಗಿಸುತ್ತಿಲ್ಲ. ಮೃಗಾಲಯದ ನಿರ್ವಹಣೆಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಆದೇಶವಾಗಿದ್ದರೂ ಪ್ರಾಧಿಕಾರ ಈವರೆಗೆ ಹಸ್ತಾಂತರಿಸದೆ ವಿಳಂಬ ಧೋರಣೆ ಮಾಡಿರುವುದು ಕಂಡುಬರುತ್ತದೆ. ಅಲ್ಲದೆ ಲೀಸ್‌ಗೆ ನೀಡಿರುವ ಕೆಲವು ಸಂಸ್ಥೆಗಳಿಂದ ಪ್ರಾಧಿಕಾರವು ತೆರಿಗೆ ಹಣ ಸಂಗ್ರಹಿಸದೆ ಇರುವುದು ಕಂಡುಬರುತ್ತದೆ. ಟೆಂಡರ್ ಪ್ರಕ್ರಿಯೆಯಲ್ಲಿ ಲೋಪದೋಷ ಕಂಡುಬಂದಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಸಮಗ್ರ ವರದಿಯನ್ನು ಲೋಕಾಯುಕ್ತ ಕೇಂದ್ರ ಕಚೇರಿಗೆ ವರದಿ ನೀಡಲಾಗುತ್ತದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿರುತ್ತಾರೆ.
