ಅಂಚೆ ವಿಳಾಸಗಳನ್ನು ತಿಳಿಸುತ್ತಿದ್ದ ಪಿನ್ ಕೋಡ್ ಯುಗ ಮುಕ್ತಾಯವಾಗಲಿದೆ. ಅದರ ಬದಲಿಗೆ ಪ್ರತಿ ಮನೆಗೂ ಡಿಜಿಟಲ್ ಐಡಿ ಬರಲಿದೆ. ಸುದೀರ್ಘ ವರ್ಷದ ನಂತರ ಭಾರತೀಯ ಅಂಚೆ ಇಲಾಖೆ ಬದಲಾವಣೆಗೆ ತೆರೆದುಕೊಳ್ಳುತ್ತಿದೆ.
ಇವತ್ತು ಎಲ್ಲಾ ಇಲಾಖೆಗಳು ಡಿಜಿಟಲ್ ಯುಗಕ್ಕೆ ಮಾರ್ಪಾಡು ಆಗಿದ್ದರೂ, ಭಾರತೀಯ ಅಂಚೆ ಇಲಾಖೆ ಯಾವುದೇ ಬದಲಾವಣೆಗೆ ಒಳಗಾಗದೆ ಓಬಿರಾಯನ ಕಾಲದಂತೆ ಇದ್ದ ಪದ್ಧತಿಯಲ್ಲೇ ಇತ್ತು. ಆದರೆ ಇದೀಗ ಅಂಚೆ ಇಲಾಖೆಯಲ್ಲೂ ಕೂಡ ಡಿಜಿಟಲ್ ಸ್ಪರ್ಶಕ್ಕೆ ತಯಾರಿ ನಡೆಯುತ್ತಿದ್ದು, ಇನ್ಮುಂದೆ ವಿಳಾಸ ಪತ್ತೆಗೆ ಇದ್ದ ಪಿನ್ ಕೋಡ್ ಕಸದ ಬುಟ್ಟಿ ಸೇರಲಿದ್ದು, ಅದರ ಬದಲಿಗೆ ಹತ್ತು ಅಂಕೆಯ ಡಿಜಿಪಿನ್ ರಾರಾಜಿಸಲಿದೆ.
ಯಾವುದೇ ಒಂದು ವಿಳಾಸದ ನಿಖರತೆಗಾಗಿ ಇನ್ನು ಮುಂದೆ ಪಿನ್‌ಕೋಡ್‌ಗಳ ಬದಲು ಡಿಜಿಟಲ್ ವಿಳಾಸವಾದ ಡಿಜಿಪಿನ್( 10 ಅಂಕಿ) ಬಳಸಬಹುದಾಗಿದೆ. ಭಾರತೀಯ ಅಂಚೆ ಇಲಾಖೆ ಈ ನೂತನ ವ್ಯವಸ್ಥೆಯನ್ನು ಜಾರಿ ಮಾಡಿದ್ದು, ಇದು ಯಾವುದೇ ಮನೆ ಅಥವಾ ಕಟ್ಟಡದ ನಿಖರವಾದ ವಿಳಾಸವನ್ನು ನೀಡಲಿದೆ.
ಭಾರತೀಯ ಅಂಚೆ ಇಲಾಖೆಯು ‘ಡಿಜಿಪಿನ್’ ಎಂಬ ಹೊಸ ಡಿಜಿಟಲ್ ವಿಳಾಸವನ್ನು ಪರಿಚಯಿಸಿದೆ ಮತ್ತು ಅದನ್ನು ದೇಶಾದ್ಯಂತ ಜಾರಿಗೆ ತರಲು ಮುಂದಾಗಿದೆ. ಇಡೀ ಪ್ರದೇಶವನ್ನು ಸೂಚಿಸಲು ಸಾಂಪ್ರದಾಯಿಕ ಪಿನ್ ಕೋಡ್ ಬಳಸುವಲ್ಲಿ, ಡಿಜಿಪಿನ್ ಮನೆ ಅಥವಾ ಕಚೇರಿಯ ನಿಖರವಾದ ಸ್ಥಳವನ್ನು ಗುರುತಿಸುತ್ತದೆ. ಇದರಿಂದಾಗಿ, ವಿಳಾಸದ ನಿಖರತೆ ಹೆಚ್ಚಾಗುತ್ತದೆ.
ಡಿಜಿಪಿನ್ ವ್ಯವಸ್ಥೆಯು 10-ಅಂಕಿಯ ಡಿಜಿಟಲ್ ಕೋಡ್ ರೂಪದಲ್ಲಿದೆ. ಇದು ನಾಲ್ಕು ಮೀಟರ್ ವ್ಯಾಪ್ತಿಯೊಳಗೆ ನಿಖರವಾದ ಸ್ಥಳವನ್ನು ಸೂಚಿಸುತ್ತದೆ. ಇದು ಪತ್ರವ್ಯವಹಾರ ಸರಿಯಾದ ವಿಳಾಸವನ್ನು ತಲುಪಲು ಸಹಾಯ ಮಾಡುತ್ತದೆ. ಈ ಹಿಂದಿನ ಸಾಂಪ್ರದಾಯಿಕ ಪಿನ್‌ಕೋಡ್‌ಗಳ ವ್ಯಾಪ್ತಿ ಹೆಚ್ಚು ಇರುವುದರಿ೦ದ ಒಂದು ನಿರ್ದಿಷ್ಟ ಸ್ಥಳವನ್ನು ಗುರುತಿಸುವುದು ಕೆಲವೊಮ್ಮೆ ಕಷ್ಟವಾಗುತ್ತಿತ್ತು.
ಈ ಡಿಜಿಪಿನ್ ಬಳಕೆಯಿಂದಾಗಿ ಆನ್‌ಲೈನ್ ಡೆಲಿವರಿಗಳಲ್ಲಿ, ತುರ್ತು ಸೇವೆಗಳಾದ ಆ್ಯಂಬುಲೆನ್ಸ್ ಹಾಗೂ ಅಗ್ನಿಶಾಮಕ ಸೇವೆಗಳು ಸರಿಯಾದ ಸ್ಥಳವನ್ನು ತಲುಪಲು ಉಪಯುಕ್ತವಾಗಲಿದೆ. ವಿಶೇಷವಾಗಿ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಇದು ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ಡಿಜಿಪಿನ್‌ನ ಬಳಕೆಯು ಪತ್ರವ್ಯವಹಾರಕ್ಕೆ ಮಾತ್ರ ಸೀಮಿತವಾಗಿಲ್ಲ, ಇದನ್ನು ಇ-ಕಾಮರ್ಸ್ ಪಾರ್ಸೆಲ್‌ಗಳಿಗೂ ಪರಿಣಾಮಕಾರಿಯಾಗಿ ಬಳಸಲಾಗುತ್ತದೆ. ಇದು ಗ್ರಾಹಕರು ತಮ್ಮ ಆರ್ಡರ್ ಗಳನ್ನು ಸಮಯಕ್ಕೆ ಮತ್ತು ಸರಿಯಾದ ವಿಳಾಸದಲ್ಲಿ ಸ್ವೀಕರಿಸಲು ಅನುವು ಮಾಡಿಕೊಡುತ್ತದೆ.
ಡಿಜಿಪಿನ್ ಹೇಗೆ ಕಂಡುಹಿಡಿಯುವುದು?
ನಿಮ್ಮಡಿಜಿಪಿನ್ ಪಡೆಯಲು ಭಾರತ ಸರ್ಕಾರದ https://dac.indiapost.gov.in/mydigip-in/home ವೆಬ್‌ಸೈಟ್‌ಗೆ ಹೋಗಿ, ನಿಮ್ಮ ಸ್ಥಳ ಆಯ್ಕೆ ಮಾಡಿ ಮತ್ತು 10-ಅಂಕಿಯ ಕೋಡ್ ಪಡೆಯಿರಿ. ಈ ವ್ಯವಸ್ಥೆಯನ್ನು IIT ಹೈದರಾಬಾದ್, NRSC & ISRO ಸಹಯೋಗದೊಂದಿದೆ ಅಭಿವೃದ್ಧಿಪಡಿಸಲಾಗಿದೆ ಮತ್ತು ಆಫ್‌ಲೈನ್ ಬಳಕೆಯ ಆಯ್ಕೆಯೂ ಲಭ್ಯವಿದೆ.