ಮೋದಿ 75 ಕ್ಕೆ ರಿಟೈರ್ ಮೆಂಟ್? ಹಲ್ ಚಲ್ ಸೃಷ್ಟಿಸಿದ ಆರ್ ಎಸ್ ಎಸ್ ಮುಖ್ಯಸ್ಥರ ಹೇಳಿಕೆ

ರಾಷ್ಟ್ರೀಯ

ರಾಜ್ಯದಲ್ಲಿ ‘ಸೆಪ್ಟೆಂಬರ್ ಕ್ರಾಂತಿ’ ಕೇಂದ್ರದಲ್ಲಿ ’75’ ರದ್ದೇ ಚರ್ಚೆ

ರಾಜ್ಯ ರಾಜಕಾರಣದಲ್ಲಿ ಸೆಪ್ಟೆಂಬರ್ ಅಂತ್ಯಕ್ಕೆ ಸಿದ್ದರಾಮಯ್ಯ ಅವಧಿ ಮುಗಿದು ಡಿಕೆಶಿ ಮುಖ್ಯಮಂತ್ರಿ ಆಗುತ್ತಾರೆ ಅನ್ನುವ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಕೇಂದ್ರದಲ್ಲಿ 75 ವರ್ಷದ ನಿವೃತ್ತಿ ಸುದ್ದಿ ಧೂಳೆಬ್ಬಿಸಿದೆ. ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಯಂತೂ ರಾಷ್ಟ್ರ ರಾಜಕಾರಣದಲ್ಲಿ ಹಲ್ ಚಲ್ ಸೃಷ್ಟಿಸಿದೆ.

ಬಿಜೆಪಿ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ, ಮುರುಳಿ ಮನೋಹರ ಜೋಷಿ ಸೇರಿದಂತೆ ಪ್ರಮುಖ ಬಿಜೆಪಿ ಘಟಾನುಘಟಿ ನಾಯಕರು ತೆರೆಗೆ ಸರಿಯಲು ಮುಖ್ಯ ಕಾರಣವಾಗಿದ್ದು ಬಿಜೆಪಿಯಲ್ಲಿರುವ ಅಘೋಷಿತ 75 ವಯಸ್ಸಿನ ತೂಗುಕತ್ತಿ. 75 ವರ್ಷದ ನಂತರ ರಾಜಕೀಯ ನಿವೃತ್ತಿ ಹೊಂದಬೇಕೆಂಬುದು ಬಿಜೆಪಿ ಈವರೆಗೂ ಪಾಲಿಸಿಕೊಂಡು ಬಂದ ನಿಯಮ. ಮುಂದಿನ ವರ್ಷ ಪ್ರಧಾನಿ ನರೇಂದ್ರ ಮೋದಿ ಯವರಿಗೆ 75 ವರ್ಷ ತುಂಬಲಿದೆ. ಮೋದಿ ರಾಜಕೀಯ ನಿವೃತ್ತಿ ಪಡೆಯುತ್ತರಾ ಅನ್ನುವ ಚರ್ಚೆ ಇದೀಗ ಮುನ್ನೆಲೆಗೆ ಬಂದಿದೆ.

“ಒಬ್ಬ ವ್ಯಕ್ತಿ 75 ವರ್ಷ ವಯಸ್ಸನ್ನು ತಲುಪಿದ ನಂತರ ತನ್ನ ಜವಾಬ್ದಾರಿಗಳನ್ನು ವರ್ಗಾಯಿಸಿ ವಿಶ್ರಾಂತಿ ಪಡೆಯಬೇಕು” ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮಹತ್ವದ ಹೇಳಿಕೆ ನೀಡಿದ್ದಾರೆ. ಮೋಹನ್ ಭಾಗವತ್ ಅವರಿಗೂ ಕೂಡ ಮುಂದಿನ ವರ್ಷ 75 ವರ್ಷ ತುಂಬಲಿದೆ. ಹೀಗಾಗಿ ಅವರ ಹೇಳಿಕೆಗಳ ಪ್ರಕಾರ 75 ಕ್ಕೆ ಸ್ವಯಂ ನಿವೃತ್ತಿಗೆ ಮುಂದಾಗುತ್ತಾರೆ ಅನ್ನಲಾಗಿದೆ. ಭಾಗವತ್ ಹೇಳಿಕೆಯೂ ಬಿಜೆಪಿ ಪಾಳಯದಲ್ಲೂ ತಲ್ಲಣ ಸೃಷ್ಟಿಸಿದೆ. ಏಕೆಂದರೆ ಮುಂದಿನ ವರ್ಷ ಪ್ರಧಾನಿ ಮೋದಿಯವರು ಕೂಡ 75 ವರ್ಷಕ್ಕೆ ಕಾಲಿಡಲಿದ್ದಾರೆ.

ಮೋದಿ ಹಾಗೂ ಆರ್ ಎಸ್ ಎಸ್ ಮಧ್ಯೆ ಸಂಬಂಧ ಅಷ್ಟು ಉತ್ತಮವಾಗಿಲ್ಲ ಅನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಕಳೆದ ಲೋಕಸಭಾ ಚುನಾವಣೆಯಲ್ಲಿ ಆರ್ ಎಸ್ ಎಸ್ ಸೈಲೆಂಟ್ ಮೂಡ್ ಗೆ ಜಾರಿದ ಪರಿಣಾಮ ಮೋದಿ ವರ್ಚಸ್ಸು ಠುಸ್ಸಾಗಿತ್ತು. ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಹೊಂದಿಕೊಳ್ಳುವುದು ಮೋದಿಗೆ ಅನಿವಾರ್ಯವಾಯಿತು. ಇದರ ನಡುವೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಪ್ರಚಾರ ಇಲ್ಲದಿದ್ದರೂ ಆರ್ ಎಸ್ ಎಸ್ ಪೂರ್ಣ ಪ್ರಮಾಣದಲ್ಲಿ ಚುನಾವಣಾ ರಂಗಕ್ಕೆ ಇಳಿದ ಪರಿಣಾಮ ಬಿಜೆಪಿ ಭರ್ಜರಿ ಜಯ ದಾಖಲಿಸಿತ್ತು. ಮೋದಿ ನಿವೃತ್ತಿ ಪಡೆದರೆ ಆರ್ ಎಸ್ ಎಸ್ ನಿತಿನ್ ಗಡ್ಕರಿ ಅಥವಾ ದೇವೇಂದ್ರ ಫಡ್ನವೀಸ್ ಅವರನ್ನು ಪ್ರಧಾನಿ ಹುದ್ದೆಗೆ ಕೂರಿಸಲು ಮುಂದಾಗಿದೆ.

ಈ ಮಧ್ಯೆ ಶಿವಸೇನಾ ಸಂಸದ ಸಂಜಯ್ ರಾವತ್ “ಭಾಗವತ್ 75 ನೇ ವಯಸ್ಸಿನಲ್ಲಿ ನಿವೃತ್ತರಾಗಲು ಬಯಸಿದರೆ, ಅದೇ ನಿಯಮವನ್ನು ಮೋದಿಗೆ ಅನ್ವಯಿಸಬೇಕು. ಅವರಿಗೂ ಈಗ 74 ವರ್ಷ” ಎಂದು ಹೇಳಿದ್ದಾರೆ.

ಮೋದಿ ನಿವೃತ್ತರಾದರೆ ಅಮಿತ್ ಶಾ ಕೂಡ ರಾಜಕಾರಣದಿಂದ ದೂರ ಸಾಗುತ್ತಾರೋ ಅನ್ನುವ ಪ್ರಶ್ನೆ ಇದೀಗ ಎದ್ದಿದೆ. ಇತ್ತೀಚೆಗೆ ಗುಜರಾತ್ ಪ್ರವಾಸದ ಸಂದರ್ಭ ಎರಡು ದಶಕಗಳ ರಾಜಕೀಯ ಜೀವನ ಸಾಕು ಅನ್ನುವ ಅರ್ಥ ಬರುವ ರೀತಿಯ ಹೇಳಿಕೆ ನೀಡಿದ್ದಾರೆ. ರಾಜಕೀಯ ನಿವೃತ್ತಿಯ ನಂತರ ವೇದಗಳು, ಉಪನಿಷತ್ತುಗಳನ್ನು ಓದುವುದರ ಜೊತೆಗೆ ಕೃಷಿಯತ್ತ ಗಮನ ಹರಿಸುವುದಾಗಿ ಹೇಳಿಕೆ ನೀಡಿದ್ದಾರೆ.