ಧರ್ಮಸ್ಥಳ ಪ್ರಕರಣಕ್ಕೆ ಕೋಮು ಬಣ್ಣ ಬಳಿಯುವ ದುಷ್ಟ ಯತ್ನ: ವಸಂತ್ ಗಿಳಿಯಾರ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎಫ್ಐಆರ್

ಕರಾವಳಿ

ಧರ್ಮಸ್ಥಳದಲ್ಲಿ ನಡೆಯುತ್ತಿದ್ದ ಅಸಹಜ ಸಾವಿನ ಪ್ರಕರಣ, ಬೆಚ್ಚಿಬೀಳಿಸುವ ಸರಣಿ ಕುಕೃತ್ಯದ ಬಗ್ಗೆ ಈ ಹಿಂದೆ ಸ್ವಚ್ಛತಾ ಕಾರ್ಮಿಕನಾಗಿ ದುಡಿಯುತ್ತಿದ್ದ ವ್ಯಕ್ತಿ ಪ್ರಾಯಶ್ಚಿತ್ತಗೊಂಡು ದೂರು ನೀಡಲು ಮುಂದೆ ಬಂದಿದ್ದು, ಒಟ್ಟಾರೆ ಘಟನೆಯ ಬಗ್ಗೆ ವಿಶೇಷ ತನಿಖಾ ತಂಡ (ಎಸ್ ಐಟಿ) ತನಿಖೆ ನಡೆಸುತ್ತಿದೆ. ಸರಾಗವಾಗಿ ತನಿಖೆ ನಡೆಯುತ್ತಿರುವ ಹೊತ್ತಿನಲ್ಲಿ ಧಾರ್ಮಿಕ ಭಾವನೆಯನ್ನು ಕೆರಳಿಸಿ ಘಟನೆಯನ್ನು ಹಿಂದೂ -ಮುಸ್ಲಿಂ ರೀತಿ ಚಿತ್ರಿಸಿ ಜಿಲ್ಲೆಯಲ್ಲಿ ಕೋಮುಗಲಭೆ ಎಬ್ಬಿಸಿ ಒಟ್ಟಾರೆ ತನಿಖೆಯ ಹಾದಿಯನ್ನು ದಿಕ್ಕು ತಪ್ಪಿಸುವ ವ್ಯವಸ್ಥಿತ ಷಡ್ಯಂತ್ರ ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ. ಇದೀಗ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಧರ್ಮಸ್ಥಳ ಪ್ರಕರಣದ ಬಗ್ಗೆ ಧಾರ್ಮಿಕ ಭಾವನೆ ಕೆರಳಿಸಿ ಧರ್ಮ ಧರ್ಮಗಳ ನಡುವೆ ದ್ವೇಷ ಭಾವನೆ ಮೂಡಿಸಿ, ಸಮುದಾಯಗಳ ನಡುವೆ ವೈಮನಸ್ಸು ಮೂಡುವಂತೆ ಬರಹ ಪ್ರಕಟಿಸಿದ ವಸಂತ್ ಗಿಳಿಯಾರ್ ವಿರುದ್ಧ ಸಾಮಾಜಿಕ ಮುಖಂಡ ಶೇಖರ್ ಲಾಯಿಲ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

‘ನೀಲಿ ಗುರುತಿನಲ್ಲಿ ಕಾಣಿಸುವುದು ಧರ್ಮಸ್ಥಳ. ಕೆಂಪು ಗುರುತಿನಲ್ಲಿ ಕಾಣಿಸುವುದು ಮಸೀದಿ. ಧರ್ಮ ಕ್ಷೇತ್ರವನ್ನು ಮತಾಂಧರು ಸುತ್ತುವರೆಯುತ್ತಿರುವ ಪರಿಯನ್ನು ನೀವು ಸೂಕ್ಷ್ಮವಾಗಿ ಗಮನಿಸಿ..ಆನಂತರ ಆಲೋಚಿಸಿ..SDPI ಹೋರಾಟಕ್ಕೆ ಧುಮುಕಿದೆ ಯಾಕೆ ಅಂತ ಅರ್ಥಮಾಡಿಕೊಳ್ಳಬೇಕು..ಜಾಗೋ ಹಿಂದೂ’ ಅನ್ನುವ ಸಂದೇಶ ಹರಿಯಬಿಟ್ಟು ಒಟ್ಟಾರೆ ಪ್ರಕರಣಕ್ಕೆ ಮತೀಯ ಬಣ್ಣ ಹಚ್ಚಿ ದಾರಿತಪ್ಪಿಸಲಾಗುತ್ತದೆ. ಸಾಮಾಜಿಕ ಸ್ವಾಸ್ಥ್ಯ ಕೆಡಿಸಲಾಗುತ್ತದೆ ಎಂದು ಬೆಳ್ತಂಗಡಿ ಠಾಣೆಯಲ್ಲಿ ವಸಂತ್ ಗಿಳಿಯಾರ್ ವಿರುದ್ಧ ಶೇಖರ್ ಲಾಯಿಲ ದೂರು ನೀಡಿದ್ದಾರೆ. ಈ ಸಂಬಂಧ ಬೆಳ್ತಂಗಡಿ ಠಾಣೆಯಲ್ಲಿ ಅಕ್ರ : 84/2025 ಕಲಂ. 196 (1) (ಎ) 353(2) ಬಿ.ಎನ್.ಎಸ್. 2023 ರಂತೆ ಪ್ರಕರಣ ದಾಖಲಿಸಲಾಗಿದೆ.