ಮೊದಲ ಬಾರಿಗೆ ಸಾಲ ಪಡೆಯುವವರಿಗೆ ಸಿಬಿಲ್ ಸ್ಕೋರ್ ಇಲ್ಲದ ಕಾರಣಕ್ಕೆ ಬ್ಯಾಂಕ್ ಗಳಲ್ಲಿ ಸಾಲ ನೀಡಲಾಗುತ್ತಿರಲಿಲ್ಲ. ಆದರೆ ಇನ್ನು ಮುಂದೆ ಸಿಬಿಲ್ ಸ್ಕೋರ್ ಕಾರಣ ನೀಡಿ ಸಾಲ ನಿರಾಕರಿಸಲಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ಸಾಮಾನ್ಯವಾಗಿ ಬ್ಯಾಂಕಿನಲ್ಲಿ ಸಾಲ ಪಡೆಯಬೇಕಿದ್ದರೆ ಉತ್ತಮ ಕ್ರೆಡಿಟ್ ಸ್ಕೋರ್ ಇರಬೇಕು ಎನ್ನುತ್ತಾರೆ. ವೈಯಕ್ತಿಕ ಸಾಲಗಳಂತಹ ಅನ್ಸೆಕ್ಯೂರ್ಡ್ ಸಾಲಗಳಿಗೆ ಬ್ಯಾಂಕುಗಳು ಖಂಡಿತಾ ಈ ಸ್ಕೋರ್ ಕೇಳುತ್ತವೆ. 650ಕ್ಕಿಂತ ಹೆಚ್ಚಿನ ಸ್ಕೋರ್ ಹೊಂದಿರುವ ಮತ್ತು ಸಾಲವನ್ನು ಡಿಫಾಲ್ಟ್ ಮಾಡದವರಿಗೆ ಮಾತ್ರ ಬ್ಯಾಂಕುಗಳು ಸಾಲ ನೀಡಲು ಮುಂದೆ ಬರುತ್ತವೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಸಾಲ ಮಂಜೂರಾತಿ ಮಾಡಲು ಆರ್ಬಿಐ ನಿರ್ದಿಷ್ಟ ಕ್ರೆಡಿಟ್ ಸ್ಕೋರ್ ಇರಬೇಕೆಂದು ನಿಯಮ ಮಾಡಿಲ್ಲ ಎಂದಿದ್ದಾರೆ. ಮೊದಲ ಬಾರಿ ಸಾಲಕ್ಕೆ ಅರ್ಜಿ ಸಲ್ಲಿಸುತ್ತಿರುವ ವ್ಯಕ್ತಿಗೆ ಯಾವುದೇ ಕ್ರೆಡಿಟ್ ಹಿಸ್ಟರಿ ಇಲ್ಲವೆಂಬ ಕಾರಣಕ್ಕೆ ಸಾಲ ತಿರಸ್ಕಾರ ಮಾಡಬಾರದು ಎಂದು 2025ರ ಜನವರಿ 6ರಂದು ಆರ್ಬಿಐ ಸಲಹೆ ನೀಡಿರುವ ವಿಚಾರವನ್ನು ಸಚಿವ ಚೌಧರಿ ಉಲ್ಲೇಖಿಸಿದ್ದಾರೆ.

ಸಾಲ ಮಂಜೂರು ಮಾಡುವಾಗ ಕ್ರೆಡಿಟ್ ಸ್ಕೋರ್ ಕನಿಷ್ಠ ಇಷ್ಟು ಇರಬೇಕು ಎನ್ನುವ ಮಾನದಂಡವನ್ನು ಆರ್ಬಿಐ ನಿಗದಿ ಮಾಡಿಲ್ಲ. ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ವಾಣಿಜ್ಯಾತ್ಮಕವಾಗಿ ಅವಲೋಕಿಸುವುದೋ, ಮಂಡಳಿ ಅನುಮೋದನೆ ಪಡೆದೋ ಅಥವಾ ರೆಗ್ಯುಲೇಟರಿ ಮಾರ್ಗಸೂಚಿ ಪ್ರಕಾರವೋ ನಿರ್ಧಾರ ತೆಗೆದುಕೊಳ್ಳಬೇಕು. ಸಾಲ ಪಡೆಯುವವರ ಕ್ರೆಡಿಟ್ ರಿಪೋರ್ಟ್ ಹಲವು ಅಂಶಗಳಲ್ಲಿ ಒಂದಷ್ಟೇ ಎಂದು ಪಂಕಜ್ ಚೌಧರಿ ಹೇಳಿದ್ದಾರೆ.
ಸಿಬಿಲ್ ಸ್ಕೋರ್ ಎನ್ನುವುದು 300 ರಿಂದ 900 ರ ನಡುವಿನ ಮೂರು-ಅಂಕಿಯ ಸಂಖ್ಯೆಯಾಗಿದ್ದು, ಇದು ಮರುಪಾವತಿ ಇತಿಹಾಸ, ಸಕ್ರಿಯ ಸಾಲಗಳು ಮತ್ತು ಆರ್ಥಿಕ ಶಿಸ್ತಿನ ಆಧಾರದ ಮೇಲೆ ವ್ಯಕ್ತಿಯ ಸಾಲ ಅರ್ಹತೆಯನ್ನು ಪ್ರತಿಬಿಂಬಿಸುತ್ತದೆ. ಇದನ್ನು ಕ್ರೆಡಿಟ್ ಮಾಹಿತಿ ಬ್ಯೂರೋ (ಭಾರತ) ಲಿಮಿಟೆಡ್ (CIBIL) ನೀಡುತ್ತದೆ ಮತ್ತು ಸಾಲದ ಅರ್ಹತೆಯನ್ನು ಮೌಲ್ಯಮಾಪನ ಮಾಡಲು ಬ್ಯಾಂಕುಗಳು ಇದನ್ನು ವ್ಯಾಪಕವಾಗಿ ಬಳಸುತ್ತವೆ.
