ಸ್ಪೀಕರ್ ವಿರುದ್ದ ಭ್ರಷ್ಟಾಚಾರ ಆರೋಪ; ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು: ವಿಶ್ವೇಶ್ವರ ಹೆಗಡೆ ಕಾಗೇರಿ

ರಾಜ್ಯ

ಸ್ಪೀಕರ್ ಯು.ಟಿ.ಖಾದರ್‌ ಅವರ ಅವಧಿಯಲ್ಲಿನ ವಿವಾದ, ಗೊಂದಲ, ಭ್ರಷ್ಟಾಚಾರದ ಆರೋಪಗಳ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ನಿಕಟಪೂರ್ವ ವಿಧಾನಸಭಾಧ್ಯಕ್ಷರೂ ಆದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಒತ್ತಾಯಿಸಿದರು. ಮಂಗಳವಾರ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಗೇರಿ ವಿಧಾನಸಭಾಧ್ಯಕ್ಷರ ಕಾರ್ಯಾಲಯದ ಎಲ್ಲ ಟೆಂಡರ್‌ಗಳು ಮಂಗಳೂರು ಮೂಲದ ಕೆಲವರಿಗೇ ಏಕೆ ಸಿಗುತ್ತಿವೆ.? ಈ ಕುರಿತು ವಿಧಾನಸಭಾಧ್ಯಕ್ಷರ ಕಚೇರಿಯ ಅಧಿಕಾರಿಗಳ ಅಭಿಪ್ರಾಯ ಏನು.? ತುರ್ತಾಗಿ ಸಾಮಗ್ರಿಗಳನ್ನು ಖರೀದಿಸುವ ಅಗತ್ಯ ಇಲ್ಲದಿದ್ದರೂ ತರಾತುರಿ ಮಾಡಿರುವುದು ಏಕೆ.? ನನಗೆ ಬಂದಿರುವ ಮಾಹಿತಿ ಪ್ರಕಾರ, ಹಲವು ಖರೀದಿ ಟೆಂಡರ್‌ಗಳನ್ನು ಆರ್ಥಿಕ ಇಲಾಖೆ ತಿರಸ್ಕರಿಸಿದೆ. ನಂತರ ಆರ್ಥಿಕ ಇಲಾಖೆ ಜವಾಬ್ದಾರಿ ಹೊತ್ತ ಮುಖ್ಯಮಂತ್ರಿಯೇ ಒಪ್ಪಿಗೆ ಕೊಡಿಸಿದ ಆರಪವಿದೆ ಎಂದು ದೂರಿದ್ದಾರೆ.

ವಿಧಾನಸಭೆಯ ಬಾಗಿಲಿಗೆ ಬೀಟೆ ಮರದ ಕೆತ್ತನೆಯ ಚೌಕಟ್ಟು ಅಳವಡಿಕೆ, ಸಭಾಂಗಣಕ್ಕೆ ಹೊಸ ಟಿ.ವಿ. ಸೆಟ್‌ ಅಳವಡಿಸಿದ್ದರೂ ಎಐ ಮಾನಿಟರ್‌ ಘಟಕ ಹಾಕಲು ದುಬಾರಿ ಮೊತ್ತ ಖರ್ಚು ಮಾಡಲಾಗಿದೆ. ಎಲ್ಲ ಶಾಸಕರಿಗೆ ಗಂಡಭೇರುಂಡ ಚಿತ್ರದ ಗಡಿಯಾರಗಳನ್ನು ಕೊಟ್ಟಿದ್ದಾರೆ. ಮೊಗಸಾಲೆಯಲ್ಲಿ ಯಂತ್ರ ಅಳವಡಿಸಿ ಮಸಾಜ್‌ ಪಾರ್ಲರ್‌ ಮಾದರಿಯಲ್ಲಿ ಬದಲಾಯಿಸಿದ್ದಾರೆ. ಅಧಿವೇಶನ ನಡೆಯುವಾಗ ಸರ್ಕಾರದಿಂದ ಶಾಸಕರಿಗೆ ಊಟ, ಉಪಚಾರದ ವ್ಯವಸ್ಥೆ ಮಾಡುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು. ಶಾಸಕರ ಭವನಕ್ಕೆ ಮಂಚ, ಟೇಬಲ್ ಹಾಕಿಸಿದ್ದಾರೆ. 123 ಸ್ಮಾರ್ಟ್‌ ಎನರ್ಜಿ ಸೊಲ್ಯೂಷನ್‌, 224 ಸೇಫ್‌ ಲಾಕರ್‌, ಅಷ್ಟೇ ಸಂಖ್ಯೆಯ ಡೋರ್‌ ಲಾಕರ್‌ ಖರೀದಿ ಮಾಡಿದ್ದಾರೆ. ಹಾಸು ಹೊದಿಕೆ, ಕಾರ್ಪೆಟ್‌ ಬದಲಿಸಿ, ಸುಣ್ಣ-ಬಣ್ಣ ಹೊಡೆಸಿದ್ದಾರೆ. ವಿಧಾನಸೌಧದ ಆವರಣದಲ್ಲಿ ನಡೆದ ಪುಸ್ತಕ ಮೇಳಕ್ಕೆ ರೂಪಾಯಿ 4.5 ಕೋಟಿ ಖರ್ಚು ಮಾಡಿದ್ದಾರೆ. ಸರ್ಕಾರವೇ ಪುಸ್ತಕ ಖರೀದಿಸಿ ಹಂಚಿದ್ದರೂ ಇಷ್ಟಾಗುತ್ತಿತ್ತಾ, ಗೊತ್ತಿಲ್ಲ. ಮಳಿಗೆ, ವಿದ್ಯುತ್‌ ಅಲಂಕಾರ ಬಿಟ್ಟರೆ ಬೇರೆ ಏನೂ ಮಾಡಿಲ್ಲ. ಅವರು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದರೊಳಗೆ ಇನ್ನೂ ಏನೋ ಇದೆ ಎಂಬ ಅನುಮಾನಗಳು ಮೂಡುತ್ತಿವೆ ಎಂದರು.

ಯು.ಟಿ. ಖಾದರ್‌ ಅವರು ಈಗ ವಿದೇಶದಲ್ಲೇ ಇದ್ದಾರೆ. ಅವರು ಎಷ್ಟು ದೇಶಗಳಿಗೆ ಹೋಗಿದ್ದಾರೆ. ಸರ್ಕಾರದ ಹಣ ಎಷ್ಟು ಖರ್ಚು ಮಾಡಿದ್ದಾರೆ. ಯಾರ‍್ಯಾರ ಜತೆ ಪ್ರವಾಸ ಮಾಡಿದ್ದಾರೆ ಎನ್ನುವ ಎಲ್ಲ ಅಂಶಗಳೂ ಬಹಿರಂಗವಾಗಬೇಕು. ಹುದ್ದೆಯ ಘನತೆ, ಗೌರವಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಪಕ್ಷಪಾತಿಯಾಗಿದ್ದಾರೆ. ಪೀಠದ ವಿರುದ್ಧವೇ ಆರೋಪಗಳು ಬರುತ್ತಿವೆ. ಹಾಗಾಗಿ, ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ಆರೋಪಗಳ ಕುರಿತು ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು. ವಿಶ್ವೇಶ್ವರ ಹೆಗಡೆ ಕಾಗೇರಿ ನಿಕಟಪೂರ್ವ ವಿಧಾನಸಭಾಧ್ಯಕ್ಷ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಅವರಿಗೆ ಇದುವರೆಗೂ ಸರ್ಕಾರಿ ವಸತಿಗೃಹ ಹಂಚಿಕೆ ಮಾಡಿಲ್ಲ. ಇಂತಹ ನಡೆ ವ್ಯವಸ್ಥೆಗೆ ಗೌರವ ತರುವುದಿಲ್ಲ ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.