ಮುಸ್ಲಿಂ ಪುರುಷ ಎರಡನೇ ವಿವಾಹವಾಗುವ ಮುನ್ನ ಮೊದಲ ಪತ್ನಿಯ ಒಪ್ಪಿಗೆ ಕೇಳುವುದು ಅನಿವಾರ್ಯ: ಕೇರಳ ಹೈಕೋರ್ಟ್ ತಾಕೀತು

ರಾಷ್ಟ್ರೀಯ

ಮುಸ್ಲಿಂ ಕಾನೂನಿನಲ್ಲಿ ವಿವಾಹೇತರ ಸಂಬಂಧ ಹರಾಂ ಎಂದು ಸ್ಪಷ್ಟವಾಗಿ ಹೇಳಿದೆ: ಹೈಕೋರ್ಟ್ ಅಭಿಪ್ರಾಯ

ಮುಸ್ಲಿಂ ಪುರುಷ ಎರಡನೇ ವಿವಾಹವಾಗುವ ಮುನ್ನ ಮೊದಲ ಪತ್ನಿ ಇದಕ್ಕೆ ಒಪ್ಪುತ್ತಾರೋ ಇಲ್ಲವೋ ಎಂದು ಆಕೆಯ ಅಭಿಪ್ರಾಯವನ್ನು ಕೇಳಬೇಕು ಎಂದು ಕೇರಳ ಹೈಕೋರ್ಟ್ ಸಲಹೆ ನೀಡಿದೆ. ನ್ಯಾಯಮೂರ್ತಿ ಪಿ.ವಿ ಕುಂಞಕೃಷ್ಣನ್ “ಎರಡನೇ ಮದುವೆಯನ್ನು ಕೇರಳ ನೋಂದಣಿ (ಸಾಮಾನ್ಯ) ನಿಯಮಗಳು 2008 ರ ಅಡಿಯಲ್ಲಿ ನೋಂದಾಯಿಸಿಕೊಳ್ಳಲು ಬಯಸಿದರೆ ಮೊದಲ ಅಭಿಪ್ರಾಯ ಕೇಳಬೇಕು. ಇಂತಹ ಪರಿಸ್ಥಿತಿಯಲ್ಲಿ ಧರ್ಮವು ಗೌಣವಾಗಿದ್ದು, ಸಾಂವಿಧಾನಿಕ ಹಕ್ಕುಗಳು ಸರ್ವೋಚ್ಚವಾಗುತ್ತವೆ. ಆದ್ದರಿಂದ ಎರಡನೇ ವಿವಾಹವನ್ನು ನೋಂದಾಯಿಸುವ ಪ್ರಶ್ನೆ ಉದ್ಭವಿಸಿದಾಗ ಸಾಂಪ್ರದಾಯಿಕ ಕಾನೂನು ಅನ್ವಯಿಸುವುದಿಲ್ಲ” ಎಂದು ಹೇಳಿದ್ದಾರೆ.

“ಕುರಾನ್ ಅಥವಾ ಮುಸ್ಲಿಂ ಕಾನೂನು ಇನ್ನೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧವನ್ನು ಅನುಮತಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ. ಮೊದಲ ಪತ್ನಿ ಜೀವಂತ ಇರುವಾಗ ಮತ್ತು ಅವರ ಮೊದಲ ವಿವಾಹವು ಅಸ್ತಿತ್ವದಲ್ಲಿರುವಾಗ ಎರಡನೇ ವಿವಾಹವನ್ನು ನೋಂದಾಯಿಸಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತು.