ವಾಮಂಜೂರು ರೋಹಿ ಯಿಂದ ಉಡುಪಿಯ ಸೈಪುದ್ದೀನ್ ವರೆಗಿನ ಹತ್ಯೆಯ ಕಹಾನಿ
ಬಜಾಲ್ ನೌಫಲ್ ಚಾಪ್ಟರ್ ಕ್ಲೋಸ್ ಹಿಂದಿದೆ ಇಂತಹ ಅನುಮಾನ.!
ಇವತ್ತಿನ ಹಾಗೆ ಚಿಲ್ಟು ಪಲ್ಟುಗಳಲ್ಲ. ಬಲಾಢ್ಯ ರೌಡಿಗಳು ಮಂಗಳೂರು ಭೂಗತ ಲೋಕವನ್ನು ಆಳುತ್ತಿದ್ದರು. ಒಬ್ಬೊಬ್ಬರ ಹೆಸರು ಕೇಳಿದಾಗಲೇ ಗಡಗಡ ನಡುಗುವಂತಹ ರೌಡಿಗಳು ಮಂಗಳೂರಿನಲ್ಲಿ ವಿಜೃಂಭಿಸುತ್ತಿದ್ದ ಕಾಲವೊಂದಿತ್ತು. ಆದರೆ ಅವರು ಕಟುಕರು, ರೌಡಿಗಳಾದರೂ ಸ್ವಲ್ಪ ಮಟ್ಟಿನ ಮಾನವೀಯತೆ, ಕರುಣೆ ಎಂಬುದು ಅವರಲ್ಲಿ ಇತ್ತು. ತಮ್ಮ ವಿರೋಧಿ ಗುಂಪಿನವನನ್ನು ಕೊಲ್ಲಲು ಬಂದಾಗ ಆತನ ಜೊತೆ ಹೆಂಡತಿ, ಮಕ್ಕಳು, ತಾಯಿ ಇದ್ದರೆ ಕೊಲ್ಲದೆ ಹಿಂದೆ ಹೋಗುತ್ತಿದ್ದರು. ಆತ ಒಬ್ಬಂಟಿಯಾಗಿ ಕೈಗೆ ಸಿಗುವವರೆಗೂ ಕಾಯುತ್ತಿದ್ದರು. ರೌಡಿಸಂ ನ ಧರ್ಮ ಪಾಲಿಸುತ್ತಿದ್ದರು. ಆದರೆ ಇಂದು ಡ್ರಗ್ಸ್, ಗಾಂಜಾದ ನಶೆಯಲ್ಲಿ ತೇಲುವ ರೌಡಿಗಳೆಲ್ಲ ಮನುಷ್ಯತ್ವವನ್ನೇ ಮರೆತವರಂತೆ ಹೆಂಡತಿ, ಪುಟ್ಟ ಮಕ್ಕಳು, ತಾಯಿಯ ಎದುರಲ್ಲೇ ಕೊಚ್ಚಿ ಕೊಲ್ಲುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮಂಗಳೂರಿನಲ್ಲಿ ಇಂತಹ ಹಲವಾರು ಹೆಣಗಳು ಬಿದ್ದಿದೆ.
ತಲವಾರು ಹಿಡಿದವನ ಬದುಕು ತಲವಾರಿನಿಂದಲೇ ಕೊನೆಯಾಗುತ್ತದೆ ಅನ್ನುವುದು ನಿಜ. ತುಳುವಿನಲ್ಲಿ ಒಂದು ಗಾದೆ ಮಾತಿದೆ ‘ಕಟ್ಟದ ಕೋರಿ ಕಟ್ಟೋಗೆ’. ಇವತ್ತಿನ ರೌಡಿಸಂ ಫೀಲ್ಡಿನಲ್ಲಿ ಎದುರಾಳಿಗಳ ಭಯಕ್ಕಿಂತ ತನ್ನ ಜೊತೆಗಿದ್ದವರೇ ವಿಲನ್ ಆಗುತ್ತಿರುವ ಘಟನೆಗಳೇ ಜಾಸ್ತಿ. ಒಂದೊಮ್ಮೆ ಮಂಗಳೂರಿನ ಹಂಪನಕಟ್ಟೆಯಿಂದ ಮಾರುಕಟ್ಟೆಯವರೆಗೆ ರೌಡಿಸಂ ಲೋಕದ ಹುಡುಗರು ತಲವಾರು ಕೈಯಲ್ಲಿ ಹಿಡಿದು ಬೆನ್ನೆಟ್ಟಿ ಕಿರಣ್ ಅನ್ನುವ ರೌಡಿಯನ್ನು ಕೊಂದು ಹಾಕಿದ್ದರು. ಅವತ್ತು ರೌಡಿಗಳ ನಡುವೆ ನಡೆಯುತ್ತಿದ್ದದ್ದು ನೇರಾ ನೇರ ಫೈಟ್. ಆದರೆ ಇವತ್ತು ಮಂಗಳೂರು ಪಾತಕ ಜಗತ್ತಿನಲ್ಲಿ ನಡೆಯುತ್ತಿರುವುದು ಮೋಸದ ಮರ್ಡರ್ ಗಳು. ವಾಮಂಜೂರು ರೋಹಿ ಯಿಂದ ಹಿಡಿದು ಇತ್ತೀಚಿನ ಉಡುಪಿ ಸೈಪುದ್ದೀನ್ ವರೆಗೆ ನಡೆದಿರುವುದೆಲ್ಲ ಮೋಸದ ಹತ್ಯೆಗಳೇ! ಎದುರಾಳಿಗಳ ಬದಲಾಗಿ ಜೊತೆಗಿದ್ದವರೇ ಕಿರಾತಕರಾಗಿದ್ದರು.

ಮಂಗಳೂರು ರೌಡಿಸಂ ಫೀಲ್ಡಿನಲ್ಲಿ ರೋಹಿದಾಸ್ ಶೆಟ್ಟಿ ಯಾನೆ ವಾಮಂಜೂರು ರೋಹಿಯದ್ದು ದೊಡ್ಡ ಹೆಸರು. ಬಲ್ಲಾಳ್ ಬಾಗ್ ರಘು ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ ನಟೋರಿಯಸ್ ರೌಡಿಯಾಗಿದ್ದ ರೋಹಿ. ಪೊಳಲಿ ಕಮಲಾಕ್ಷ, ಹಫ್ತಾ ನೀಡಲಿಲ್ಲ ಅನ್ನುವ ಕಾರಣಕ್ಕೆ ಕೈಕಂಬ ನಾಗೇಶ್ ಪೂಜಾರಿ ಎಂಬವರನ್ನು ಬರ್ಬರವಾಗಿ ಹತ್ಯೆಮಾಡಿದ ಕಿಂಗ್ ಪಿನ್ ಇದೇ ರೋಹಿ. ಮಂಗಳೂರು ಭೂಗತ ಲೋಕವನ್ನು ಆಳಿದ್ದ ರೋಹಿ ಬಗ್ಗೆ ಎದುರಾಳಿ ಟೀಮಿಗೆ ದೊಡ್ಡ ಮಟ್ಟಿನ ಭಯವಿತ್ತು. ಸುಪಾರಿ ಕಿಲ್ಲಿಂಗ್ ನಲ್ಲಿ ಎತ್ತಿದ ಕೈ ಆಗಿದ್ದ ರೋಹಿ ಯಾವಾಗ ಯಾರನ್ನು ಬೇಕಾದರೂ ಎತ್ತಿಬಿಡುವಷ್ಟು ಸಮರ್ಥನಾಗಿದ್ದ. ಇಂತಹ ರೌಡಿ ರೋಹಿ ಹೆಣವಾಗಿದ್ದು ಒಂದು ಹೆಣ್ಣಿನಿಂದ. ಮಂಗಳನಗರದ ಮನೆಯೊಂದರಲ್ಲಿ ಆಶ್ರಯ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಊಟದಲ್ಲಿ ನಿದ್ದೆ ಮಾತ್ರೆ ಬೆರೆಸಿ ಕೊಟ್ಟಿದ್ದರು ಆ ಮನೆಯವರು. ಪೂರ್ತಿ ನಿದ್ದೆಗೆ ಜಾರಿದಾಗ ಆತನ ವಿರೋಧಿ ಗುಂಪಿಗೆ ಮಾಹಿತಿ ನೀಡಿದ್ದರು. ಬಿಜೈ ರಾಜ ಕಡೆಯ ಹುಡುಗರು ನಿದ್ದೆಯ ಮಂಪರಿನಲ್ಲಿದ್ದ ರೋಹಿಯನ್ನು ಮೇಲಕ್ಕೆ ಕಲಿಸಿದ್ದರು. ಇದು ಮೋಸದ ಮರ್ಡರ್ ಆಗಿತ್ತು. ತಾನು ನಂಬಿದವರೇ ಬೆನ್ನಿಗೆ ಚೂರಿ ಹಾಕಿದ್ದರು.

ಅಪ್ಪ ರೋಹಿ ಹತ್ಯೆಯಲ್ಲಿ ವಾಮಂಜೂರು ಪರಿಸರದವರದ್ದೇ ದೊಡ್ಡ ಪಾತ್ರವಿತ್ತು. ಅಪ್ಪನ ಹತ್ಯೆಗೆ ಪ್ರತೀಕಾರ ತೀರಿಸಲು ರೌಡಿಯಾಗಿ ಬೆಳೆದುಬಿಟ್ಟವ ರೋಹಿ ಪುತ್ರ ಪವನ್. ಗಾಂಜಾ ನಶೆಯಲ್ಲೇ ತೇಲಾಡುತ್ತಿದ್ದ ಪವನ್ ರೌಡಿಸಂ ಹೈಪ್ ಕ್ರಿಯೇಟ್ ಮಾಡಲು ಸಿಕ್ಕಸಿಕ್ಕವರಿಗೆಲ್ಲ ಚೂರಿ ಹಾಕುತ್ತಿದ್ದ. ಪವನ್ ಬೆಳೆದುಬಿಟ್ಟರೆ ತಮಗೆಲ್ಲ ಕಷ್ಟ ಅಂದುಕೊಂಡ ರೋಹಿ ಹತ್ಯೆಯಲ್ಲಿ ಪರೋಕ್ಷ ಪಾತ್ರಧಾರಿಗಳೆಲ್ಲ ಆತನ ಜೊತೆಗೆ ಇದ್ದವರನ್ನೇ ಸೆಟ್ ಮಾಡಿಕೊಂಡು ಪವನ್ ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಮಂಗಳೂರು ಪಾತಕ ಲೋಕದಲ್ಲಿ ಅಪ್ಪ ಮಗ ಮೋಸದ ಹತ್ಯೆಗೆ ಬಲಿಯಾದರು.

ಉಳ್ಳಾಲದ ಮುಸ್ಲಿಂ ಏರಿಯಾದಲ್ಲಿ ಗ್ಯಾಂಗ್ ಕಟ್ಟಿಕೊಂಡು ಡೀಲ್, ಸೆಟ್ಲ್ ಮೆಂಟ್ ಗೆ ಇಳಿದಿತ್ತು ಟೀಮ್. ಆ ಗ್ಯಾಂಗ್ ಹೆಸರೇ ಟಾರ್ಗೆಟ್. ಇದರ ಗ್ಯಾಂಗ್ ಲೀಡರ್ ಇಲ್ಯಾಸ್. ಈತ ಹದಿನೆಂಟರ ಹರೆಯದಲ್ಲೇ ಕ್ರಿಮಿನಲ್ ಜಗತ್ತಿಗೆ ಕಾಲಿಟ್ಟವ. ಮುಸ್ಲಿಂ ಡಾನ್ ಆಗಿ ಹೈಪ್ ಕ್ರಿಯೇಟ್ ಮಾಡಿದವ. ಕಿಡ್ನ್ಯಾಪ್, ರೇಪ್, ಹನಿಟ್ರ್ಯಾಪ್ ಕುಲಕಸುಬು ಮಾಡುತ್ತಾ ನಟೋರಿಯಸ್ ಆಗಿ ಬೆಳೆದಿತ್ತು ಗ್ಯಾಂಗ್. ನಂತರ ಈ ಗ್ಯಾಂಗ್ ಸಿಡಿದು ಮೂರು ಹೋಳಾಯಿತು. ಅದರಲ್ಲೊಂದು ಟೀಂ ಜೆಪ್ಪು ಮೊರ್ಗನ್ಸ್ ಗೇಟ್ ಪ್ಲ್ಯಾಟ್ ನಲ್ಲಿ ವಾಸವಿದ್ದ ಇಲ್ಯಾಸ್ ಮನೆಗೆ ನುಗ್ಗಿ ತಾಯಿಯ ಎದುರಲ್ಲೇ ಮಲಗಿದ್ದ ಇಲ್ಯಾಸ್ ಕಥೆ ಕ್ಲೋಸ್ ಮಾಡಿ ಹೊರಟು ಹೋಗಿದ್ದರು. ಮನೆಗೆ ಬಂದಿದ್ದ ಹಂತಕರು ಇಲ್ಯಾಸ್ ನ ಹಳೆಯ ಸ್ನೇಹಿತರಾಗಿದ್ದರು. ಆ ಕಾರಣದಿಂದ ತಾಯಿ ಬಾಗಿಲು ತೆರೆದು ಇಲ್ಯಾಸ್ ಮಲಗಿದ್ದ ಕೋಣೆ ತೋರಿಸಿದ್ದರು. ಸ್ನೇಹಿತರೆಂದು ವಿಶ್ವಾಸದಿಂದ ಬಾಗಿಲು ತೆರೆದು ಕೊಟ್ಟಿದ್ದೇ ಇಲ್ಯಾಸ್ ಹತ್ಯೆಗೆ ಕಾರಣವಾಗಿತ್ತು. ಇದೊಂದು ಮೋಸದ ಹತ್ಯೆಯಾಗಿತ್ತು. ಇಲ್ಯಾಸ್ ನನ್ನು ತಾಯಿಯ ಎದುರಲ್ಲೇ ಕೊಂದಿದ್ದ ಸಮೀರ್ ಕಡಪ್ಪರ ನನ್ನು ವರ್ಷದ ಹಿಂದೆ ತೊಕ್ಕೊಟ್ಟು ಬಳಿಯಲ್ಲೇ ತಾಯಿ, ಪತ್ನಿ, ಮಕ್ಕಳ ಎದುರಲ್ಲೇ ಹಂತಕ ಟೀಂ ಕೊಚ್ಚಿ ಹಾಕಿತ್ತು.

ರೌಡಿಸಂ ಫೀಲ್ಡಿನ ಸ್ಪುರದ್ರೂಪಿ ಯುವಕನೆಂದು ಗುರುತಿಸಿಕೊಂಡಿದ್ದ ಸುರೇಂದ್ರ ಬಂಟ್ವಾಳ್ ಹಿಂದೂ ಯುವ ಸೇನೆಯಲ್ಲಿದ್ದ. ಚಲನಚಿತ್ರ ನಟನೂ ಆಗಿದ್ದ. ಬಡ್ಡಿಗೆ ದುಡ್ಡು ಕೊಡುತ್ತಿದ್ದ. ಬಂಟ್ವಾಳ ಬೈಪಾಸ್ ಬಳಿ ಪ್ಲ್ಯಾಟ್ ನಲ್ಲಿ ವಾಸವಾಗಿದ್ದ. ಈತನೊಬ್ಬ ರೌಡಿಶೀಟರ್ ಆಗಿದ್ದ, ರಸ್ತೆಯಲ್ಲಿ ತಲವಾರು ಹಿಡಿದು ಕೊಂಡು ಹೋದ ಪೋಟೋ ಭಾರೀ ವೈರಲ್ ಕೂಡ ಆಗಿತ್ತು.
ಸುರೇಂದ್ರ ಬಂಟ್ವಾಳ್ ಕೋಟಿಗಟ್ಟಲೆ ದುಡ್ಡನ್ನು ಬಡ್ಡಿಗೆ ಬಿಡುತ್ತಿದ್ದ.ಬಡ್ಡಿ ವಸೂಲಿ ಮಾಡಲು ಸತೀಶ ಎಂಬಾತನನ್ನು ನಿಯೋಜಿಸಿದ್ದ. ಆಕಾಶ ಭವನ ಶರಣ್ ಗ್ಯಾಂಗ್ ಜೊತೆ ವೈರತ್ವ ಕಟ್ಟಿಕೊಂಡಿದ್ದ. ಶರಣ್ ಗ್ಯಾಂಗ್ ನ ಬಂಟರು ಸುರೇಂದ್ರ ಜೊತೆ ಬಡ್ಡಿ ವಸೂಲಿ ಮಾಡುತ್ತಿದ್ದ ಸತೀಶ್ ನನ್ನೇ ಬುಕ್ ಮಾಡಿಕೊಂಡು ಆತನ ಪ್ಲ್ಯಾಟಿನಲ್ಲಿ ಸುರೇಂದ್ರನಿಗೆ ಕಂಠಪೂರ್ತಿ ಕುಡಿಸಿ ಚೂಪಾದ ಕತ್ತಿ (ಕೋಳಿಗೆ ಕಟ್ಟುವ ಬಾಲ್) ನಿಂದ ಸುರೇಂದ್ರ ಕಥೆ ಮುಗಿಸಿದ್ದರು. ನಂಬಿಸಿ ಮೋಸದಿಂದ ಹತ್ಯೆ ಮಾಡಿದ್ದರು.

ತೀರಾ ಇತ್ತೀಚೆಗೆ ಉಡುಪಿಯಲ್ಲಿ ನಡೆದಿದ್ದು ಕೂಡ ಮೋಸದ ಮರ್ಡರ್. ಎಕೆಎಂಎಸ್ ಬಸ್ ಮಾಲೀಕರಾಗಿ ಉಡುಪಿ ಪಾತಕ ಲೋಕದಲ್ಲಿ ಹವಾ ಕ್ರಿಯೇಟ್ ಮಾಡಿದ್ದ ಸೈಪುದ್ದೀನ್ ಹತ್ಯೆಗೆ ಕಾರಣವಾಗಿದ್ದು ಕೂಡ ಒಂದು ಹೆಣ್ಣು. ಕೊಡವೂರು ಸಾಲ್ಮರ ತನ್ನ ಮನೆಯಲ್ಲೇ ತಾನೇ ಸಾಕಿದ ಹುಡುಗರಿಂದ ಹತನಾಗಿದ್ದ. ಹೆಣ್ಣನ್ನು ನಂಬಿ ಹೋಗಿ ಹೆಣವಾಗಿದ್ದ. ಮೋಸದಿಂದಲೇ ತನ್ನ ಜೊತೆಗಾರರೇ ಸೈಪುದ್ದೀನ್ ಗೆ ಚಟ್ಟ ಕಟ್ಟಿದ್ದರು.
ಮೊನ್ನೆಯಷ್ಟೇ ಕರಾವಳಿ ಭಾಗದ ಕುಖ್ಯಾತ ನೌಫಲ್ ಚಾಪ್ಟರ್ ಕ್ಲೋಸ್ ಆಗಿದೆ. ಮಂಜೇಶ್ವರ ಪೊಲೀಸ್ ಸ್ಟೇಷನ್ ಲಿಮಿಟಿನಲ್ಲಿ ಬರುವ ಉಪ್ಪಳ ರೈಲ್ವೇ ಗೇಟ್ ಬಳಿ ಈತನ ಡೆಡ್ ಬಾಡಿ ಪತ್ತೆಯಾಗಿತ್ತು. ಕೆಲವೊಂದು ಮೂಲಗಳ ಪ್ರಕಾರ ಈತನನ್ನು ಕಡಿದು ಬಿಸಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೊಂದು ಮೂಲಗಳ ಪ್ರಕಾರ ರೈಲು ಬಡಿದು ಸತ್ತಿದ್ದಾನೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ನೌಫಲ್ ಕಥೆ ನಿಗೂಢವಾಗಿದೆ. ಕ್ರೈಂ ಇತಿಹಾಸ ಬಲ್ಲವರು ನೌಫಲ್ ನದ್ದು ಮರ್ಡರ್ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ನೌಫಲ್ ನನ್ನು ಜೊತೆಗಾರರೇ ಮೋಸದ ಜಾಲಕ್ಕೆ ಸಿಲುಕಿಸಿದರಾ.? ಒಬ್ಬಂಟಿಯಾಗಿ ತೆರಳಿದ ಹಿಂದೆ ಯಾರೋ ಮೋಸದಿಂದ ಆತನನ್ನು ಕರೆಸಿಕೊಂಡರಾ? ಅನ್ನುವ ಪ್ರಶ್ನೆ ಮೂಡುತ್ತಿದೆ. ನೌಫಲ್ ನಿಗೂಢ ಸಾವು ಕೂಡ ಒಂದು ರೀತಿಯಲ್ಲಿ ಮೋಸದ ಬಲೆ ಸೃಷ್ಟಿಸಿ ಯೋಜಿತವಾಗಿ ಮುಗಿಸಿ ಹಾಕಲಾಗಿದೆ ಅನ್ನುವ ಅನುಮಾನಕ್ಕೆ ಕಾರಣವಾಗಿದೆ.

ಪಾತಕ ಲೋಕದಲ್ಲಿ ಮೆರೆದಾಡುವವರಿಗೆ ಇದೊಂದು ಪಾಠವಾಗಬೇಕಿದೆ. ಮಚ್ಚು ಎತ್ತುವ ಮುನ್ನ, ಡ್ರಗ್ಸ್ ಸುಲಿಗೆ ಸಿಲುಕುವ ಮುನ್ನ ಇತಿಹಾಸ ನೋಡಿದರೆ ಯಾರೂ ತಲವಾರು ಎತ್ತುವ ಕೆಲಸ ಮಾಡಲ್ಲ. ಪಾತಕ ಲೋಕದಲ್ಲಿ ಮೆರೆದಾಡಿದವರು ಯಾರೂ ಉಳಿದಿಲ್ಲ. ಮೋಸದ ಜಾಲಕ್ಕೆ ಸಿಲುಕಿ ಬಲಿಯಾದವರೇ ಹೆಚ್ಚು. ಕ್ರಿಮಿನಲ್ ಜಗತ್ತಿಗೆ ಕಾಲಿಡುವ ಮುನ್ನ ಇನ್ನಾದರೂ ಯುವ ಸಮೂಹ ಎಚ್ಚೆತ್ತು ಕೊಂಡರೆ ಒಳ್ಳೆಯದು. ಸಮಾಜಕ್ಕೂ ಬೇಡವಾಗಿ, ಮನೆಯವರಿಗೂ ಭಾರವಾಗಿ ಬದುಕು ಕಟ್ಟಿಕೊಳ್ಳುವುದಕ್ಕಿಂತ ಒಂದು ಒಳ್ಳೆಯ ಬದುಕು ಕಟ್ಟಿಕೊಳ್ಳಿ.
