ಸತ್ಯ, ನ್ಯಾಯದ ಪರ ಧ್ವನಿ ಎತ್ತಿದರೆ ಗೆಲುವು ಖಚಿತ; ಕಾಂಗ್ರೆಸಿನಲ್ಲಿ ಬಕೆಟ್ ಹಿಡಿಯುವ ಮುಸ್ಲಿಂ ರಾಜಕಾರಣಿಗಳಿಗೆ ದೊಡ್ಡ ಮೆಸೇಜ್ ಕೊಟ್ಟ ಬಜಪೆ ರಿಸಲ್ಟ್

ಕರಾವಳಿ

ಅಂತೂ ಇಂತೂ ಬಜಪೆ ಪಟ್ಟಣ ಪಂಚಾಯತ್ ರಿಸಲ್ಟ್ ಹೊರಬಿದ್ದು 24 ಗಂಟೆ ಕಳೆದಿದೆ. ಆದರೆ ಈ ರಿಸಲ್ಟ್ ಜಿಲ್ಲೆಯ ಅಲ್ಪ ಸಂಖ್ಯಾತ ರಾಜಕಾರಣಕ್ಕೊಂದು ಹೊಸ ಸಂದೇಶ ಕಳುಹಿಸಿದೆ ಅಂದರೆ ತಪ್ಪಲ್ಲ. ಅದರಲ್ಲೂ ಜಿಲ್ಲೆಯ ಕಾಂಗ್ರೆಸ್ಸಿನ ಮುಸ್ಲಿಂ ನಾಯಕರಿಗೆ, ಕಾರ್ಯಕರ್ತರಿಗೆ ಸಿರಾಜ್ ಗೆಲುವು ದೊಡ್ಡ ಮೆಸೇಜ್ ಅನ್ನು ರವಾನಿಸಿದೆ. ಅಷ್ಟಕ್ಕೂ ಆ ಮೆಸೇಜ್ ಯಾವುದು ಗೊತ್ತಾ.?

ಸಮುದಾಯದ ಪರ, ಸತ್ಯದ ಪರ, ನ್ಯಾಯದ ಪರ,ಅನ್ಯಾಯದ ವಿರುದ್ದ ಗಟ್ಟಿಯಾಗಿ ನಿಂತ ಕಾರಣಕ್ಕೆ ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತ ಸಿರಾಜ್ ಬಜಪೆ ಅವರನ್ನು ಕಾಂಗ್ರೆಸ್ ಟಿಕೆಟ್ ನೀಡದೆ ವಂಚಿಸಿತ್ತು. ಸಿರಾಜ್ ಅಲ್ಲಿ ಕಾಂಗ್ರೆಸ್ಸಿನಿಂದ ಗೆದ್ದುಬಿಟ್ಟರೆ ಕಾಂಗ್ರೆಸ್ಸಿನೊಳಗಿರುವ ಕೆಲವು ಬಕೆಟ್ ವೀರರಿಗೆ ನೆಲೆ ಇಲ್ಲ. ಬಜಪೆಯಲ್ಲಿ ಸಿರಾಜ್ ನದ್ದೇ ಹವಾ ಆಗಿ ಬಿಡುತ್ತದೆ. ಕಾಂಗ್ರೆಸ್ಸಿನಿಂದ ಆತನನ್ನು ದೂರ ತಳ್ಳಿಬಿಟ್ಟರೆ ಆತನ ರಾಜಕೀಯ ಯುಗ ಮುಗಿಯಿತು. ಬಜಪೆಯಲ್ಲಿ ತಮ್ಮದೇ ಅಧಿಪತ್ಯ ಎಂದು ಅಂದುಕೊಂಡಿದ್ದರು. ಅದಕ್ಕೆ ಇಂಬು ನೀಡುವಂತೆ ಕಾಂಗ್ರೆಸ್ಸಿನೊಳಗೆ ಇದ್ದು ಅನ್ಯಾಯದ ಪರ ಧ್ವನಿ ಎತ್ತಿದ ವಿಚಾರವನ್ನು ದೊಡ್ಡ ದೊಡ್ಡ ನಾಯಕರ ಕಿವಿಗೆ ತಲುಪಿಸಿ ಸಿರಾಜ್ ಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದರು. ಸಿರಾಜ್ ಗೆ ಟಿಕೆಟ್ ಇಲ್ಲ, ಇನ್ನೇನಿದ್ದರೂ ನಮ್ಮದೇ ದರ್ಬಾರ್ ಅಂದುಕೊಂಡು ಅಧ್ಯಕ್ಷಗಿರಿಗೆ ಸೂಟ್ ಬೂಟು ರೆಡಿ ಮಾಡಿಟ್ಟುಕೊಂಡ ಕಾಂಗ್ರೆಸ್ಸಿನ ಕೆಲವು ಬಂಟರಿಗೆ ಫಲಿತಾಂಶ ಕೆನ್ನೆಗೆ ಬಾರಿಸುವ ರೀತಿ ಬಂದಿತ್ತು. ಯಾರನ್ನೂ ಮುಗಿಸಲು ಸಂಚು ಹೂಡಿದರೋ ಆತ ಫೀನಿಕ್ಸ್ ನಂತೆ ಎದ್ದು ಬಂದಿದ್ದ. ಸೋಲಿಸಲು ಹೊಂಚು ಹಾಕಿದವರೆಲ್ಲ ಮುಖ ಸಪ್ಪೆ ಮಾಡಿಕೊಂಡು ಹೊರಟು ಬಿಟ್ಟರು.

ಸಿರಾಜ್ ಬಜ್ಪೆ ಬಂಡಾಯವಾಗಿ ಸ್ಪರ್ಧಿಸಿ ಭರ್ಜರಿ ಜಯ ದಾಖಲಿಸಿರುವ ಹಿಂದೆ ಆತ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು, ಸರ್ವಧರ್ಮೀಯರೊಂದಿಗೆ ಉತ್ತಮ ಒಡನಾಟ, ಮೇಲಾಗಿ ಮುಸ್ಲಿಂ ಸಮುದಾಯದ ಮೇಲೆ ಆಗುತ್ತಿರುವ ಅನ್ಯಾಯವನ್ನು ನೋಡಿಕೊಂಡು ಕೈ ಕಟ್ಟಿ ಕೂರದೆ ನಾಯಕರ ವಿರುದ್ಧವೇ ಧ್ವನಿ ಎತ್ತಿದ್ದರು. ನಾಯಕರಿಗೆ ಬಕೆಟ್ ಹಿಡಿಯಲಿಲ್ಲ, ಸೆಲ್ಫಿ ತೆಗೆಯಲಿಲ್ಲ, ಕಾಂಗ್ರೆಸ್ ಪಕ್ಷದೊಳಗಡೆಯೇ ನಿಂತು ಸಮುದಾಯಕ್ಕೆ ಅನ್ಯಾಯ ಆದಾಗ ಧ್ವನಿ ಎತ್ತಿದರು. ಕಾಂಗ್ರೆಸ್ ಸರಕಾರ ಇರುವಾಗಲೇ ಅಮಾಯಕ ಅಬ್ದುಲ್ ರಹಿಮಾನ್ ಕೊಲೆಯ ಬಗ್ಗೆ ನಾಯಕರ ಮುಂದೆ ನಿಂತು ಎದೆಗಾರಿಕೆಯಿಂದ ಪ್ರಶ್ನಿಸಿದರು. ಇದರ ಪ್ರತಿಫಲವಾಗಿ ಕಾಂಗ್ರೆಸ್ ಟಿಕೆಟ್ ನೀಡದಿದ್ದರೂ, ಬಂಡಾಯವಾಗಿ ನಿಂತರು. ಸಿರಾಜ್ ದಿಟ್ಟ ಧ್ವನಿ ಕ್ಷೇತ್ರದ ಜನತೆಗೆ ಇಷ್ಟವಾಯಿತು. ಘಟಾನುಘಟಿ ನಾಯಕರು, ತಮ್ಮ ಮೆಚ್ಚಿನ ನಾಯಕರು ಕ್ಯಾನ್ ವಾಸ್ ಗೆ ಬಂದರೂ ಸಿರಾಜ್ ಸಮುದಾಯದ ಪರ ರಾಜಿ ರಹಿತ ಧ್ವನಿ ಎತ್ತಿದ ಕಾರಣಕ್ಕೆ ಗೆಲ್ಲಿಸಿಬಿಟ್ಟರು. ಜಿಲ್ಲೆಯ ಬ್ಯಾರಿ ನಾಯಕರೊಬ್ಬರು ಸಿರಾಜ್ ಗೆ ಪಕ್ಷದಿಂದ ಟಿಕೇಟು ನೀಡಲೇಬಾರದು, ಬೇರೆ ಯಾರಿಗೂ ಕೊಟ್ಟರೆ ಚಿಂತೆ ಇಲ್ಲ ಆತನಿಗೆ ಕೊಡಬೇಡಿ ಎಂದ ಫರ್ಮಾನು ಹೊರಡಿಸಿದರು.

ಒಂದು ವೇಳೆ ಸಿರಾಜ್ ಅನ್ಯಾಯದ ವಿರುದ್ಧ ಧ್ವನಿ ಎತ್ತದಿದ್ದರೆ, ನಾಯಕರಿಗೆ ಜೈಕಾರ ಹಾಕಿ ಕಾಲಕಳೆಯುತ್ತಿದ್ದರೆ ಆತನನ್ನು ಯಾರೂ ಗೆಲ್ಲಿಸುತ್ತಿರಲಿಲ್ಲ. ಸಮುದಾಯದ ಪರ ನಿಂತ ಕಾರಣಕ್ಕೆ ಗೆದ್ದರು. ತಮಗೆ ಪಂಚಾಯತ್ ಸೀಟ್ ತಪ್ಪಬಹುದು, ನಿಗಮ ಮಂಡಳಿ ತಪ್ಪಬಹುದು, ಪಕ್ಷದ ಜುಜುಬಿ ಹುದ್ದೆ ತಪ್ಪಬಹುದು ಎಂಬ ಭಯದಿಂದ ಸಮುದಾಯಕ್ಕೆ ಅನ್ಯಾಯವಾದಾಗ ಪಕ್ಷದೊಳಗಿದ್ದುಕೊಂಡು ಧ್ವನಿ ಎತ್ತದೆ ಸುಮ್ಮನಿರುವ ನಾ(ಲಾ)ಯಕರೇ ಪಕ್ಷ ನಿಮ್ಮನ್ನು ಕಡೆಗಣಿಸಿದರೂ, ನೀವು ಪ್ರಾಮಾಣಿಕ ಸೇವೆ ಮಾಡಿದರೆ ಕ್ಷೇತ್ರದ ಜನ ನಿಮ್ಮನ್ನು ಖಂಡಿತ ಕೈ ಬಿಡಲಾರರು. ಕೇವಲ ಸೆಲ್ಫಿ, ಜೈಕಾರ, ಬಕೆಟ್ ಹಿಡಿಯುವುದಕ್ಕೆ ಮಾತ್ರ ಸೀಮಿತರಾಗಬೇಡಿ. ಅನ್ಯಾಯ ಕಂಡಾಗ ಪಕ್ಷದೊಳಗೆ ಇದ್ದುಕೊಂಡೇ ಪ್ರತಿಭಟಿಸಿ. ನಿಮ್ಮನ್ನು ಜನತೆ ಖಂಡಿತ ನಾಯಕರಾಗಿ ಸೃಷ್ಟಿಸುತ್ತಾರೆ. ಇದು ಬಜಪೆ ರಿಸಲ್ಟ್ ತೋರಿಸಿಕೊಟ್ಟಿದೆ.

ಮತ್ತೊಂದು ವಿಚಾರವೆಂದರೆ, ಎಸಿ ಕಾರಿನಲ್ಲಿ ತಿರುಗುವ ನಾಯಕರು ಲೋಕಲ್ ರಾಜಕಾರಣವನ್ನು ತಿಳಿಯುವ ಪ್ರಯತ್ನ ಮಾಡಬೇಕಿದೆ. ಮರಳು ವ್ಯಾಪಾರಿಗಳು, ದೋ ನಂಬರ್ ದಂಧೆಕೋರರು, ತಮ್ಮ ಹಿಂದೆ ಮುಂದೆ ಸುತ್ತಾಡುವವರು ಮಾತ್ರ ಪಕ್ಷದ ಕಾರ್ಯಕರ್ತರು ಅಲ್ಲ. ಅವರು ಅವರ ಲಾಭಕ್ಕಾಗಿ ಹುಲಿ, ಸಿಂಹ, ಚಿಪಾಂಜಿ ರೀತಿ ನಿಮ್ಮನ್ನು ಚಿತ್ರಿಸುತ್ತಾರೆ. ಜೈಘೋಷ ಹಾಕುತ್ತಾರೆ. ಅದು ಅವರ ಸ್ವಾರ್ಥ. ಅವರ ಕೆಲಸ ಕಾರ್ಯ ಮುಗಿದ ನಂತರ ಕಣ್ಣಿಗೆ ಕಾಣದಂತೆ ಎಸ್ಕೇಪ್ ಆಗಿ ಬಿಡುತ್ತಾರೆ. ತಳ ಮಟ್ಟದಲ್ಲೂ ಪಕ್ಷ ಕಟ್ಟುವ ಪ್ರಾಮಾಣಿಕ ಕಾರ್ಯಕರ್ತರು ಈಗಲೂ ಇದ್ದಾರೆ. ಅವರ ಶ್ರಮಕ್ಕೆ ಬೆಲೆನೇ ಇರುವುದಿಲ್ಲ. ನಾಯಕರು ನಂಬುವುದು ತಮ್ಮ ಹಿಂದೆ ಮುಂದೆ ಖಡಕ್ಕ್ ಇಸ್ತ್ರಿ ಹಾಕಿ ಶ್ವೇತ ವಸ್ತ್ರ ತೊಟ್ಟವರು, ಸಣ್ಣ ಸಣ್ಣ ವಿಚಾರವನ್ನು ದೊಡ್ಡದು ಮಾಡಿ ನಾಯಕರ ಕಿವಿ ಹೂಡುವ ಕೆಲವು ಕಂತ್ರಿಗಳನ್ನು. ಇಂತಹವರನ್ನು ನಂಬಿ ಪಕ್ಷ ಮೂರು ಕಾಸಿಗೆ ಬೆಲೆ ಇಲ್ಲದಂತಾಗಿದೆ. ಇನ್ನಾದರೂ ನಾಯಕರು ಅರ್ಥ ಮಾಡಿಕೊಳ್ಳದಿದ್ದರೆ ಮುಂದಿನ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತ್ ಗಳಲ್ಲೂ ಬಜಪೆ ರೀತಿ ಫಲಿತಾಂಶ ಹೊರಬೀಳಬಹುದು. ಕಾರ್ಯಕರ್ತರು ಇದ್ದರೆ ಮಾತ್ರ ನಾಯಕರು. ಪ್ರಾಮಾಣಿಕ ಕಾರ್ಯಕರ್ತರ ಶ್ರಮಕ್ಕೆ ಇನ್ನಾದರೂ ಬೆಲೆ ನೀಡಲಿ.