ಬಜ್ಪೆ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಒಂದು ಪಾಠ

ಕರಾವಳಿ

ಕಾಂಗ್ರೆಸ್ ನಾಯಕತ್ವದ ಸ್ವಯಂಕೃತ ಅಪರಾಧಗಳಿಂದ ಉಂಟಾದ ಈ ಸ್ಥಿತಿಗೆ ಈಗ ಅನುಕಂಪ ತೋರುವವರು ಯಾರೂ ಉಳಿದಿಲ್ಲ: ಮುನೀರ್ ಕಾಟಿಪಳ್ಳ

ಬಜ್ಪೆ, ಕಿನ್ನಿಗೋಳಿ ಪಟ್ಟಣ ಪಂಚಾಯತ್ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಒಂದು ಪಾಠ (ಕಲಿಯಲು/ಅರ್ಥ ಮಾಡಿಕೊಳ್ಳಲು ಸಿದ್ದರಿರುವುದು ಅನುಮಾನ) ಅಲ್ಪ ಸಂಖ್ಯಾತ ಸಮುದಾಯದ ಮತದಾರರು ನಿರ್ಣಾಯಕರಾಗಿದ್ದ ಈ ಪಟ್ಟಣ ಪಂಚಾಯತ್ ಗಳು ಎಲ್ಲಾ ಕಾಲದಲ್ಲೂ ಬಿಜೆಪಿ ಪಾಲಿಗೆ ಕಬ್ಬಿಣದ ಕಡಲೆಯಾಗಿತ್ತು. ಈ ಸಲದ ಚುನಾವಣೆಯಲ್ಲಿ‌ ಮಾತ್ರ ಯಾವ ಅಡತಡೆಯೂ ಇಲ್ಲದೆ ಗೆಲುವಿನ ಗೆರೆ ದಾಟಿದ್ದಾರೆ.

ಈ ಸೋಲು ದಕ್ಷಿಣ ಕನ್ನಡ‌ ಜಿಲ್ಲೆಯಲ್ಲಿ ಕಾಂಗ್ರೆಸ್ ನ ಪಾಲಿಗೆ ಬಹುಷ ಚೇತರಿಸಲು ಅಸಾಧ್ಯ ಅನ್ನಬಹುದಾದ ಏಟು ನೀಡಿದೆ. ಮುಂಬರುವ ಪಂಚಾಯತ್, ಪುರಸಭೆ, ನಗರ ಪಾಲಿಕೆ ಚುನಾವಣೆಗಳಲ್ಲಿ ಕಾಂಗ್ರೆಸ್ ನ ಸ್ಥಿತಿ ಹೇಗಿರಬಹುದು ಎಂಬುದನ್ನೂ ಈಗಲೆ ಹೇಳಿ ಬಿಡಬಹುದು. ಕಾಂಗ್ರೆಸ್ ನ ಈ ಸ್ಥಿತಿ ಜಿಲ್ಲೆಯಲ್ಲಿ ಬಿಜೆಪಿಗೆ ಚುನಾವಣಾ ಎದುರಾಳಿಗಳೆ ಇಲ್ಲ ಎಂಬಂತೆ ಮಾಡಿಬಿಟ್ಟಿದೆ.

ವಿಧಾನ ಸಭಾ ಚುನಾವಣೆಯಲ್ಲಿ ಉಂಟಾದ ಸೋಲಿನಿಂದ ಕಾಂಗ್ರೆಸ್ ಪಕ್ಷ ಪಾಠ ಕಲಿಯಲಿಲ್ಲ. ರಾಜ್ಯದಲ್ಲಿ ತಮ್ಮದೆ ಸರಕಾರ ಇದ್ದರೂ, ಬಿಜೆಪಿಯ ಗೆಲುವಿನ ಸೂತ್ರವಾದ ಕೋಮುವಾದವನ್ನು ಹಿಮ್ಮೆಟ್ಟಿಸಲು, ಸೌಹಾರ್ದತೆ, ಜಾತ್ಯಾತೀತತೆಯನ್ನು ಜನರ ನಡುವೆ ಗಟ್ಟಿಗೊಳಿಸಲು ಯಾವ‌ ಪ್ರಯತ್ನವನ್ನೂ ಮಾಡಲಿಲ್ಲ.

ಬಿಜೆಪಿಯ ಕಟ್ಟರ್ ಹಿಂದುತ್ವ ಕ್ಕೆ (ಕೋಮುವಾದ) ಪ್ರತಿಯಾಗಿ (ಪೂರಕವಾಗಿ) ಮೃದು ಹಿಂದುತ್ವ. ಬಿಜೆಪಿ ಶಾಸಕರುಗಳ ಕಂಬಳಕ್ಕೆ ಪ್ರತಿಯಾಗಿ ಕಾಂಗ್ರೆಸ್ ಶಾಸಕರು, ಸೋತ ಅಭ್ಯರ್ಥಿಗಳಿಂದಲು ಕಂಬಳ, ಹುಲಿ ಕುಣಿತಕ್ಕೆ ಎದುರಾಗಿ ತಮ್ಮ ಪ್ರಾಯೋಜಕತ್ವದಲ್ಲೂ ಹುಲಿಕುಣಿತ, ದೋಸೆ ಹಬ್ಬ, ಫುಡ್ ಫೆಸ್ಟ್ ಗಳಿಗೆ ಪ್ರತಿಯಾಗಿ ಆಟಿಡೊಂಜಿ ದಿನ, ಆಹಾರ ಮೇಳ, ಆಡಂಬರದ ಕ್ರಿಕೆಟ್ ಪಂದ್ಯಾಟಗಳನ್ನು ಆಯೋಜಿಸುತ್ತಾ, ದುಡ್ಡು ಚೆಲ್ಲುತ್ತಾ ಬಿಜೆಪಿಯನ್ನು ಹಿಮ್ಮೆಟ್ಟಿಸುತ್ತಿದ್ದೇವೆ ಎಂಬ ಭ್ರಮೆಗೆ ಬಿದ್ದರು.

ಬಿಜೆಪಿ ಶಾಸಕರುಗಳು, ಸಂಸದರುಗಳ ವೈಫಲ್ಯ, ಅದರಿಂದ ಸಂತ್ರಸ್ತರಾದ ಜನರನ್ನು ಸಂಘಟಿಸಿ ಯಾವ ಹೋರಾಟ, ಕಾರ್ಯಕ್ರಮಗಳನ್ನೂ ಸಂಘಟಿಸಲಿಲ್ಲ, ಕನಿಷ್ಟ ಬಹಿರಂಗ ಹೇಳಿಕೆಗಳನ್ನೂ ಹೊರಡಿಸಲಿಲ್ಲ. ದಮನಿತ ಜಾತಿಗಳು, ಬಡವರು, ಸಂತ್ರಸ್ತ ಜನತೆಯ ಪರವಾಗಿ ನಿಂತು ಧೈರ್ಯ ತುಂಬಲಿಲ್ಲ, ರಾಜಕಾರಣ ನಡೆಸಲಿಲ್ಲ. ಕೋಮುವಾದದ ಧಾಳಿಗೆ ಒಳಗಾದ ಅಲ್ಪಸಂಖ್ಯಾತ ಸಮುದಾಯಗಳ ಪರವಾಗಿ ನಿಲ್ಲುವ, ಮಾತಾಡುವ, ಹೋರಾಡುವ ಕನಿಷ್ಟ ಪ್ರಯತ್ನವನ್ನೂ ಮಾಡಲಿಲ್ಲ. ತಳಮಟ್ಟದಲ್ಲಿ‌ ಬಿಜೆಪಿ ಎದುರಾಗಿ ಸಣ್ಣ ಶಬ್ದ ಎತ್ತಲೂ ಕಾಂಗ್ರೆಸ್ ಪಕ್ಷದ ನಾಯಕರು ಸಿದ್ದರಾಗಲಿಲ್ಲ.

ಅದೆಲ್ಲದರ ಪರಿಣಾಮ ಬಜ್ಪೆ, ಕಿನ್ನಿಗೋಳಿಯ ಚುನಾವಣಾ ಫಲಿತಾಂಶದಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಬಿಜೆಪಿ‌ ಗೆಲ್ಲಲಾಗದ ಕಡೆಯಲ್ಲೂ ಅಧಿಕಾರ ಹಿಡಿದಿದೆ. ಬಿಜೆಪಿ ಎದುರಾಗಿ ಕಾಂಗ್ರೆಸ್ ನ ಇಡುಗಂಟು ವೋಟ್ ಬ್ಯಾಂಕ್ ಆಗಿದ್ದ ಮುಸ್ಲಿಮರು, ಕ್ರೈಸ್ತರು ಕಾಂಗ್ರೆಸ್ ನ ಆಡಳಿತ, ನಾಯಕರ ವರ್ತನೆಗಳಿಂದ ರೋಸಿಹೋಗಿ ತಮ್ಮದೇ ದಾರಿ ಹುಡುಕಿಕೊಂಡಿದ್ದಾರೆ (ಇದು ನಕಾರಾತ್ಮಕ ದಾರಿಯೇ ಇರಬಹುದು, ಮತ್ತಷ್ಟು ಹಾನಿಗೆ ಕಾರಣ ಆಗಬಹುದು)

ಕಾಂಗ್ರೆಸ್ಸೇತರ ಸೆಕ್ಯುಲರ್ ಗೆಳೆಯರ (ಚಳವಳಿಗಳ) ಸಹಾನುಭೂತಿಯನ್ನು ದುರಹಂಕಾರದಿಂದ ಮೊದಲೇ ಕಳೆದುಕೊಂಡು ಕಾಂಗ್ರೆಸ್ ಪಕ್ಷ ಕರಾವಳಿಯಲ್ಲಿ ಎದ್ದೇಳಾಗದ ಸ್ಥಿತಿಗೆ ತಲುಪುತ್ತಿರುವುದ‌ಂತೂ ಸತ್ಯ. ಕಾಂಗ್ರೆಸ್ ನಾಯಕತ್ವದ ಸ್ವಯಂಕೃತ ಅಪರಾಧಗಳಿಂದ ಉಂಟಾದ ಈ ಸ್ಥಿತಿಗೆ ಈಗ ಅನುಕಂಪ ತೋರುವವರು ಯಾರೂ ಉಳಿದಿಲ್ಲ.