ಬಂಟ, ಬ್ರಾಹ್ಮಣರಂತೆ ಬ್ಯಾರಿ ಹುಡುಗರಿಗೂ ವಧು ಸಿಗುತ್ತಿಲ್ಲ.! ಮಸೀದಿ, ಮೊಹಲ್ಲಾ, ಸಂಘ ಸಂಸ್ಥೆಗಳ ಕರ್ತವ್ಯವೇನು.? ಸಮುದಾಯ ಇನ್ನಾದರೂ ಚಿಂತಿಸಲಿ
ಮುಸ್ಲಿಂ ಸಮುದಾಯದಲ್ಲಿ ಅದರಲ್ಲೂ ಬ್ಯಾರಿ ಜನಾಂಗದಲ್ಲಿ ಈ ಹಿಂದೆ ವರದಕ್ಷಿಣೆಯ ಪಿಡುಗು ದೊಡ್ಡ ಸಮಸ್ಯೆಯಾಗಿ ತಲೆದೋರಿತ್ತು . ವಿವಾಹವಾಗುವ ಹೆಣ್ಣು ಕುಟುಂಬಗಳು ವರದಕ್ಷಿಣೆ ನೀಡಲು ಸಾಧ್ಯವಾಗದೇ 30-35 ವರ್ಷ ಮೀರಿದರೂ ಮದುವೆ ಮಾಡಲು ಸಾಧ್ಯವಾಗದೇ ಮನೆಯಲ್ಲೇ ಉಳಿಯುವಂತಾಗುತ್ತಿತ್ತು. ಇಸ್ಲಾಂ ನಲ್ಲಿ ಮಹರ್ ಪದ್ಧತಿ ಜಾರಿಯಲ್ಲಿದ್ದರೂ ಅನಪೇಕ್ಷಿತವಾಗಿ ನುಸುಳಿಕೊಂಡ ವರದಕ್ಷಿಣೆ ಪಿಡುಗು ಸಮುದಾಯವನ್ನು ದೊಡ್ಡ ಇಕ್ಕಟ್ಟಿಗೆ ಸಿಲುಕಿಸಿತ್ತು. ಇದರ ವಿರುದ್ಧ ಸಮುದಾಯದೊಳಗಡೆ ಹಲವು ಸಂಘ ಸಂಸ್ಥೆಗಳು, ಧಾರ್ಮಿಕ ನೇತಾರರು, ಧರ್ಮಗುರುಗಳು ಜನಜಾಗೃತಿಗೆ ಇಳಿದಿದ್ದರು. ಮಸೀದಿ ಮೊಹಲ್ಲಾ ಸಮಿತಿಗಳು ವರದಕ್ಷಿಣೆ ವಿರುದ್ಧ ಫತ್ವಾ ಹೊರಡಿಸಿತ್ತು. ವರದಕ್ಷಿಣೆ ಪಡೆಯುವ ಮದುವೆಗಳಿಗೆ ಭಾಗಿಯಾಗುವುದಿಲ್ಲ ಎಂದು ಉಲೆಮಾಗಳು ಘಂಟಾಘೋಷವಾಗಿ ಸಾರಿದರು. ವರದಕ್ಷಿಣೆ ವಿರುದ್ಧ ಸಾಮೂಹಿಕ ವಿವಾಹಗಳು ಅಲ್ಲಲ್ಲಿ ಜರುಗಿದವು. 10-20 ವರ್ಷಗಳ ಹಿಂದೆ ಸಮುದಾಯದೊಳಗೆ ದೊಡ್ಡ ಸಮಸ್ಯೆಯಾಗಿ ಭಾಧಿಸಿದ್ದ ವರದಕ್ಷಿಣೆ ಎಂಬ ಸಮಸ್ಯೆ ಇಂದು ಮರೆಯಾಗಿದೆ.
ಆದರೆ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಮುಸ್ಲಿಂ ಸಮುದಾಯದ ಮದುವೆಯಲ್ಲಿ ಮತ್ತೊಂದು ದೊಡ್ಡ ಸಮಸ್ಯೆ ಕಾಡುತ್ತಿದೆ. ಬಂಟರು, ಬ್ರಾಹ್ಮಣರು, ಕೈಸ್ತರಲ್ಲಿ ಕಂಡುಬರುತ್ತಿದ್ದ ವಧು ಸಮಸ್ಯೆ ಇಂದು ಬ್ಯಾರಿ ಗಳಲ್ಲೂ ಕಂಡುಬರುತ್ತಿದೆ. ಈಗೀಗ ಬ್ಯಾರಿ ಹುಡುಗರಿಗೆ ಮದುವೆಯಾಗಲು ವಧು ಸಿಗುತ್ತಿಲ್ಲ. ಬ್ಯಾರಿ ಹುಡುಗರ ಮನೆಯ ಸಮಸ್ಯೆ, ಆರ್ಥಿಕ ಸಮಸ್ಯೆ ಇನ್ನಿತರ ಕಾರಣಕ್ಕಾಗಿ ಎಸ್ಸೆಸ್ಸೆಲ್ಸಿ, ಪಿಯುಸಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿ ಉದ್ಯೋಗಕ್ಕೆ ವಿದೇಶ, ಹೊರ ರಾಜ್ಯ, ಜ್ಯೂಸ್ ಅಂಗಡಿ, ಬಟ್ಟೆಯಂಗಡಿ, ತರಕಾರಿ ಮಾರ್ಕೆಟ್, ಗುಜರಿ ವ್ಯಾಪಾರ, ಮೀನು ಮಾರ್ಕೆಟ್ ಗಳಲ್ಲಿ ದುಡಿಯುತ್ತಿದ್ದಾರೆ. ಆದರೆ ಮುಸ್ಲಿಂ ಹೆಣ್ಮಕ್ಕಳು ಡಿಗ್ರಿ, ಡಬ್ಬಲ್ ಡಿಗ್ರಿ ಪಡೆದು ಉನ್ನತ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಉನ್ನತ ವಿದ್ಯಾಭ್ಯಾಸ ಪಡೆದ ಮುಸ್ಲಿಂ ಹೆಣ್ಮಕ್ಕಳು ಎಸ್ಸೆಸ್ಸೆಲ್ಸಿ, ಪಿಯುಸಿ ಓದಿ ಸೇಲ್ಸ್ ಮ್ಯಾನ್, ಗುಜರಿ ಅಂಗಡಿ ಗಳಲ್ಲಿ ದುಡಿಯುವ ಹುಡುಗರನ್ನು ಮದುವೆಯಾಗಲು ಒಪ್ಪುತ್ತಿಲ್ಲ. ಇಂದು ಪ್ರತಿ ಮನೆಯ ಹೆಣ್ಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ, ಆದರೆ ಗಂಡು ಮಕ್ಕಳು ಕ್ರಿಕೆಟ್, ಮೋಜು ಮಸ್ತಿ, ಲವ್, ಮಾದಕ ಜಾಲದ ಹಿಂದೆ ಬಿದ್ದು ಶಿಕ್ಷಣವನ್ನೇ ಅರ್ಧದಲ್ಲಿ ಮೊಟಕುಗೊಳಿಸುತ್ತಾರೆ. ಕಲಿಯುವ ವಯಸ್ಸಿನಲ್ಲಿ ವಿದೇಶಕ್ಕೊ, ಹೊರ ರಾಜ್ಯಕ್ಕೊ ತೆರಳಿ ದುಡಿಯುತ್ತಿದ್ದಾರೆ. ಇಂದು ನಡೆಯುವ ಪ್ರತಿ ಪರೀಕ್ಷೆಯ ರಿಸಲ್ಟ್ ನಲ್ಲಿ ಮುಸ್ಲಿಂ ಹೆಣ್ಣು ಮಕ್ಕಳೆ ಮುಂದು, ಆದರೆ ಗಂಡು ಮಕ್ಕಳನ್ನು ಬೂತಗನ್ನಡಿ ಹಿಡಿದು ನೋಡಿದರೂ ಕಾಣ ಸಿಗದು. ಬಹಳ ಅಪರೂಪ.!

ಇವತ್ತು ಉನ್ನತ ವಿದ್ಯಾಭ್ಯಾಸ ಪಡೆಯುತ್ತಿರುವ ಹೆಣ್ಣು ಮಕ್ಕಳ ಪ್ರಮಾಣ 75 ಶೇಕಡಾ. ಆದರೆ ಗಂಡು ಮಕ್ಕಳದ್ದು ಬರೀ 25 ಶೇಕಡಾ. ಗಂಡು ಹೆಣ್ಣಿನ ಉನ್ನತ ವಿದ್ಯಾಭ್ಯಾಸದ ಅಂತರ ಶೇಕಡಾ 50 ರಷ್ಟಿದೆ. ಉನ್ನತ ವಿದ್ಯಾಭ್ಯಾಸ ಪಡೆದ ಹೆಣ್ಣೊಬ್ಬಳು ತನಗೆ ಮದುವೆಯಾಗಲು ಉನ್ನತ ವಿದ್ಯಾಭ್ಯಾಸ ಪಡೆದ ಗಂಡು ಬೇಕೆಂದು ಬಯಸುತ್ತಾಳೆ. ಅದು ಸಹಜ ಕೂಡ. ತನಗೆ ಉತ್ತಮ ಶೈಕ್ಷಣಿಕ ಅರ್ಹತೆ ಹೊಂದಿರುವ ಹುಡುಗ ಬೇಕೆಂದು ಬಯಸುವುದು ಅವಳ ಆಯ್ಕೆ ಕೂಡ ಆಗಿರುತ್ತದೆ. ಈ ಪ್ರಮಾಣ ಹೀಗೆ ಮುಂದುವರೆದರೆ ಶೇಕಡಾ 50 ರಷ್ಟು ಗಂಡು ಮಕ್ಕಳಿಗೆ ಖಂಡಿತವಾಗಿಯೂ ಹೆಣ್ಣು ಸಿಗಲಾರದು.
ಈ ಹಿಂದೆ ಮುಸ್ಲಿಂ ಸಮುದಾಯದಲ್ಲಿ ಹೆಣ್ಣು ಮಕ್ಕಳು ಕಲಿಯಬೇಕು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ ಪರಿಣಾಮ ಇಂದು ಪ್ರತಿ ಮನೆಯಲ್ಲೂ ಕನಿಷ್ಠ 2-3 ಮಂದಿ ಪದವೀಧರ ಹೆಣ್ಣು ಮಕ್ಕಳಿದ್ದಾರೆ. ಆದರೆ ಗಂಡು ಮಕ್ಕಳು ಹೈಸ್ಕೂಲ್, ಪಿಯುಗೆ ವಿಧಾಯ ಹೇಳಿ, ಮನೆಯ ಸ್ಥಿತಿ ಅರಿತು ಹೊಟ್ಟೆ ಪಾಡಿಗೆ ಉದ್ಯೋಗದ ಬೆನ್ನು ಬಿದ್ದು ಶಾಲೆಗೆ ಗುಡ್ ಬೈ ಹೇಳುತ್ತಿದ್ದಾರೆ. ಹೆಣ್ಣು ಮಕ್ಕಳು ಕಲಿತರೆ ಅವರ ಮಕ್ಕಳಿಗೂ ವಿದ್ಯಾಭ್ಯಾಸ ಕೊಡಬಹುದು ಅನ್ನುವ ಕಾರಣಕ್ಕೆ ಹೆಣ್ಣು ಮಕ್ಕಳು ಇಷ್ಟಪಡುವಷ್ಟು ಕಲಿಸುತ್ತಾರೆ. ಆದರೆ ಈಗ ಇದುವೇ ಸಮುದಾಯದೊಳಗಡೆ ದೊಡ್ಡ ಸಮಸ್ಯೆಗೆ ಕಾರಣವಾಗಿದೆ. ಅಂದು ವರದಕ್ಷಿಣೆ ಪಿಡುಗು ಮೊಹಲ್ಲಾಗಳಲ್ಲಿ, ಜಮಾಅತ್ ಗಳಲ್ಲಿ, ಸಮುದಾಯದ ನಡುವೆ ಹೇಗೆ ಸಮಸ್ಯೆಯನ್ನು ಸೃಷ್ಟಿಸಿತ್ತೋ, ಅದೇ ರೀತಿಯಾಗಿ ಇಂದು ಹುಡುಗರಿಗೆ ಮದುವೆಯಾಗಲು ಹೆಣ್ಣು ಮಕ್ಕಳು ಸಿಗುತ್ತಿಲ್ಲ ಅನ್ನುವುದು ದೊಡ್ಡ ಸಮಸ್ಯೆಯಾಗಿ ಪರಿವರ್ತನೆಗೊಂಡಿದೆ. ಮಾತ್ರವಲ್ಲದೆ 30 ಪ್ರಾಯ ದಾಟಿದ ಸಮುದಾಯದ ಗಂಡು ಮಕ್ಕಳು ಹೆಣ್ಣು ಸಿಗದೆ ಕಾರಣ ಚಿಂತೆಗೀಡಾಗಿದ್ದಾರೆ.

ಹೆಣ್ಣು ಮಕ್ಕಳು ಕಲಿಯಲಿ. ಅದೇ ರೀತಿ ಗಂಡು ಮಕ್ಕಳು ಕೂಡ ಉನ್ನತ ಶಿಕ್ಷಣದ ಕಡೆಗೆ ತಮ್ಮ ಗಮನ ಕೇಂದ್ರೀಕರಿಸಬೇಕು. ಕಲಿಯುವ ಸಮಯದಲ್ಲಿ ಅತಿಯಾದ ಮೊಬೈಲ್ ಬಳಕೆ, ಮೋಜು ಮಸ್ತಿ, ಕೇವಲ ಪ್ರೀಮಿಯರ್ ಲೀಗ್, ಮಾದಕ ಜಾಲ, ಮೋಜು ಮಸ್ತಿಗಳ ಹಿಂದೆ ಹೋಗುವುದನ್ನು ನಿಲ್ಲಿಸಿ ಉನ್ನತ ವಿದ್ಯಾಭ್ಯಾಸದತ್ತ ಮುಖ ಮಾಡಬೇಕಿದೆ. ವರದಕ್ಷಿಣೆ ಸಮಸ್ಯೆಯನ್ನು ಸಮುದಾಯದ ಮಸೀದಿ, ಮೊಹಲ್ಲಾ, ಸಂಘ ಸಂಸ್ಥೆಗಳು ಒಟ್ಟಾಗಿ ನಿಂತು ಹೇಗೆ ಸೋಲಿಸಿತೋ ಅದೇ ರೀತಿ ಗಂಡು ಮಕ್ಕಳು ಹೈಸ್ಕೂಲ್, ಪಿಯು ಗಳಲ್ಲಿ ಕಾಲೇಜು ತೊರೆಯದೇ ಉನ್ನತ ಶಿಕ್ಷಣ ಪಡೆಯಲು ಪ್ರೇರೇಪಿಸಬೇಕು. ಇಲ್ಲವಾದರೆ ಬಂಟರು, ಬ್ರಾಹ್ಮಣರು, ಕೈಸ್ತ ಸಮುದಾಯಗಳಂತೆ ಬ್ಯಾರಿ ಗಳಲ್ಲೂ ವಿವಾಹವಾಗಲು ವಧು ಸಿಗದು. ಈ ಬಗ್ಗೆ ಸಮುದಾಯ ಚಿಂತಿಸಬೇಕಿದೆ.
