ಎಐಸಿಸಿ ಯಲ್ಲಿ ಹಿರಿತಲೆಗಳಿಗೆ ಬೀಳಲಿದೆ ಬ್ರೇಕ್.. ಇನ್ಮುಂದೆ ಯುವಕರ ಪಾರುಪತ್ಯಕ್ಕೆ ಕಾಂಗ್ರೆಸ್ ನಲ್ಲಿ ನಡೆಯುತ್ತಿದೆ ಮೆಗಾ ಪ್ಲ್ಯಾನ್.!
ದೇಶವಾಳಿದ ಕಾಂಗ್ರೆಸ್ ಸ್ಥಿತಿ ಅಧೋಗತಿಗೆ ಇಳಿದಿದೆ. ಕೆಲವೇ ಕೆಲವು ಸೀಮಿತ ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಸ್ಮಿತೆ ಉಳಿದಿದೆ ಅಷ್ಟೇ. ಕರ್ನಾಟಕದಂತಹ ದೊಡ್ಡ ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಸ್ವಂತ ಬಲದಿಂದ ಅಧಿಕಾರದಲ್ಲಿದೆ. ಇನ್ನುಳಿದ ಎರಡು ಸಣ್ಣ ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದೆ ಅಷ್ಟೇ. ಉಳಿದೆಲ್ಲ ಕಡೆ ಕಾಂಗ್ರೆಸ್ ಕಥೆ ಹರೋಹರ. ಅರವತ್ತು ವರ್ಷ ದೇಶವಾಳಿದ ಕಾಂಗ್ರೆಸ್ ಸಂಕಷ್ಟದ ದಿನಗಳಲ್ಲಿದೆ. ಕಾಂಗ್ರೆಸ್ ಮುಕ್ತ ಭಾರತದ ಅಂಚಿನಲ್ಲಿದೆ. ಮೋದಿ -ಷಾ ಆಟ ಒಂದು ಕಡೆ, ಹಿಂದುತ್ವದ ಧ್ರುವೀಕರಣ ಮತ್ತೊಂದು ಕಡೆ. ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಪೆಟ್ಟು ನೀಡುತ್ತಿದೆ. ಇದರ ಮಧ್ಯೆ ಕಾಂಗ್ರೆಸ್ ಪಕ್ಷದ ಸ್ವಯಂಕೃತ ಅಪರಾಧಗಳು ಕೂಡ ಪಕ್ಷಕ್ಕೆ ದೊಡ್ಡ ಡ್ಯಾಮೇಜ್ ನೀಡುತ್ತಿದೆ.
ಈಗಿನದ್ದು 5G ಜಮಾನ. ಈ ಜಮಾನಕ್ಕೆ ತಕ್ಕಂತೆ ಕಾಂಗ್ರೆಸ್ ಬದಲಾಗುತ್ತಿಲ್ಲ. 25 ವರ್ಷಗಳ ಹಿಂದೆ ಯಾವ ಅಭ್ಯರ್ಥಿ ಕಾಂಗ್ರೆಸ್ ನಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೋ ಇಂದು ಕೂಡ ಕಾಂಗ್ರೆಸ್ ಪಕ್ಷದಲ್ಲಿ ಅದೇ ಅಭ್ಯರ್ಥಿ ಚುನಾವಣೆಯಲ್ಲಿ ಸ್ಪರ್ದಿಸುತ್ತಿದ್ದಾರೆ. ಎರಡು ಮೂರು ಬಾರಿ ಸೋತರೂ ಅಭ್ಯರ್ಥಿ ಬದಲಾವಣೆ ಮಾಡುತ್ತಿಲ್ಲ. ಇತ್ತ ಬಿಜೆಪಿ ಹೆಚ್ಚು ಕಮ್ಮಿ ಎರಡು ಬಾರಿ ಶಾಸಕರಾದವರನ್ನು ಮೂರನೇ ಬಾರಿ ಕಣಕ್ಕೆ ಇಳಿಸುವುದು ಬಾರಿ ಅಪರೂಪ. ಚುನಾವಣಾ ಕಣದಲ್ಲಿ ಭಾಜಪಾ ಜನತೆಗೆ ಚೇಂಜ್ ಕೊಡುತ್ತಿದೆ. ಕಾಂಗ್ರೆಸ್ ಪಕ್ಷದ ಅದೇ ಅಭ್ಯರ್ಥಿ ನೋಡಿ ನೋಡಿ ಸಾಕಾಗಿ ಅನಿವಾರ್ಯ ಇಲ್ಲದೆ ಬಿಜೆಪಿಯನ್ನು ಬೆಂಬಲಿಸುತ್ತಾ ಬರುತ್ತಿದ್ದಾರೆ. ಅದರ ಜೊತೆಗೆ ವಿರೋಧ ಸ್ಥಾನದಲ್ಲಿ ಇದ್ದುಕೊಂಡು ಆಡಳಿತ ಪಕ್ಷದ ಹುಳುಕನ್ನು ಮುನ್ನಲೆಗೆ ತಂದು ಮತವಾಗಿ ಪರಿವರ್ತಿಸುವ ಕಲೆಯನ್ನು ಕಾಂಗ್ರೆಸ್ ಮರೆತೇ ಹೋಗಿದೆ. ಕೂತಲ್ಲೇ ಅಧಿಕಾರ ಸಿಗಲು ಇದು ನೆಹರೂ, ಇಂದಿರಾ ಕಾಲವಲ್ಲ. ಬೆವರು ಹರಿಸಬೇಕಿದೆ. ಆದರೆ ಕಾಂಗ್ರೆಸ್ ಆ ಕೆಲಸ ಮಾಡುತ್ತಿಲ್ಲ.

ಪಂಚರಾಜ್ಯಗಳ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಸಣ್ಣದಾದ ಸಿಹಿ ಕೊಟ್ಟರೂ ಇಂಡಿಯಾ ಮೈತ್ರಿಕೂಟದ ಪರವಾಗಿ ನೋಡಿದಾಗ ಕಾಂಗ್ರೆಸ್ ಗೆ ದೊಡ್ಡ ನಷ್ಟವೆಂದೇ ಹೇಳಬೇಕು. ಪಶ್ಚಿಮ ಬಂಗಾಳ, ತಮಿಳು ನಾಡಿನಲ್ಲಿ ಕಾಂಗ್ರೆಸ್ ಮೈತ್ರಿಕೂಟದ ಪಕ್ಷಗಳು ನೆಲಕಚ್ಚಿವೆ. ಅಸ್ಸಾಂ ನಲ್ಲಿ ಆಡಳಿತ ವಿರೋಧಿ ಅಲೆಯನ್ನು ಎನ್ ಕ್ಯಾಶ್ ಮಾಡಿಕೊಳ್ಳಲು ಕಾಂಗ್ರೆಸ್ ಸೋತಿದೆ. ಕೇರಳಂ ರಾಜ್ಯ ಹೊಸದಾಗಿ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದೆ. ಇದು ಕಾಂಗ್ರೆಸ್ ಪಕ್ಷದ ದೃಷ್ಟಿಯಿಂದ ಶುಭ ಸೂಚನೆ ಎಂದರೂ ತಪ್ಪಲ್ಲ.
ಇನ್ನು ತಮಿಳು ನಾಡಿನಲ್ಲಿ ಈ ಬಾರಿ ವಿಜಯ್ ರ ಟಿವಿಕೆ ಪಕ್ಷ ಗೆಲ್ಲಬಹುದು ಅನ್ನುವ ಅಂದಾಜು ಕಾಂಗ್ರೆಸ್ ಪಕ್ಷಕ್ಕಿಟ್ಟು. ಡಿಎಂಕೆ ಸಖ್ಯ ಮುರಿದು ಟಿವಿಕೆ ಜೊತೆ ಸೇರಿಕೊಂಡಿದ್ದರೆ ಕನಿಷ್ಠ 25 ಸ್ಥಾನ ಕಾಂಗ್ರೆಸ್ ಗೆ ದಕ್ಕುತ್ತಿತ್ತು. ರಾಹುಲ್ ಗಾಂಧಿ ಟಿವಿಕೆ ಜೊತೆ ಹೋಗುವ ಪ್ಲ್ಯಾನ್ ಮಾಡಿದ್ದರು. ಆದರೆ ದೆಹಲಿಯ ಹಿರಿತಲೆಗಳಾದ ಮಲ್ಲಿಕಾರ್ಜುನ ಖರ್ಗೆ, ಚಿದಂಬರಂ ಕಾಂಗ್ರೆಸ್ ಟಿವಿಕೆ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ರಾಹುಲ್ ಮಾಡೆಲ್ ಒಪ್ಪಿಕೊಂಡಿದ್ದರೆ ಕಾಂಗ್ರೆಸ್ ತಮಿಳುನಾಡಿನಲ್ಲಿ ಸಾಕಷ್ಟು ಸೀಟು ಪಡೆದುಕೊಳ್ಳುವ ಅವಕಾಶ ಇತ್ತು.

ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಗಾಂಧಿ ತೀರ್ಮಾನ ಎಲ್ಲಾ ಸಂದರ್ಭಗಳಲ್ಲೂ ಫೈನಲ್ ಆಗುತ್ತಿಲ್ಲ. ದೆಹಲಿಯಲ್ಲಿ ಕೂತ ಹತ್ತಾರು ಮುದಿ ಹಿರಿತಲೆಗಳು ಕಾಂಗ್ರೆಸ್ ಪಕ್ಷವನ್ನು ಕಪಿಮುಷ್ಠಿಯಲ್ಲಿ ಇಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸಮಾಧಿ ತೋಡುತ್ತಿದ್ದಾರೆ. ಕಾಂಗ್ರೆಸ್ ಮತ್ತೆ ಫೀನಿಕ್ಸ್ ನಂತೆ ಎದ್ದೇಳಬೇಕಾದರೆ ಈ ಜಮಾನಕ್ಕೆ ತಕ್ಕಂತೆ ಕಾಂಗ್ರೆಸ್ ಬದಲಾಗಬೇಕಿದೆ. ರಾಹುಲ್ ಮಾಡೆಲ್ ಅಳವಡಿಸಿಕೊಂಡರೆ ಕಾಂಗ್ರೆಸ್ ಮತ್ತೆ ಚೇತರಿಸಿಕೊಳ್ಳಬಹುದು. ಎಐಸಿಸಿ ಹುದ್ದೆಯಲ್ಲಿ ಕುಳಿತ ಕೆಲವು ಹಿರಿತಲೆಗಳು ಕಾಂಗ್ರೆಸ್ ಪಕ್ಷಕ್ಕೆ ಸಮಾಧಿ ಕಟ್ಟುತ್ತಿದ್ದು, ಎಐಸಿಸಿ ಗೆ ಕ್ರಿಯಾಶೀಲ ಯುವಕರನ್ನು ಸೇರ್ಪಡೆಗೊಳಿಸಿ ಹಿರಿತಲೆಗಳಿಗೆ ಗೇಟ್ ಪಾಸ್ ನೀಡಲು ರಾಹುಲ್ ಗಾಂಧಿ ಉತ್ಸುಕರಾಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಕೂಡ ರಾಹುಲ್ ಮಾಡೆಲ್ ಅನುಷ್ಠಾನಗೊಳಿಸುವಂತೆ ಆಗ್ರಹಗಳು ಕೂಡ ಕೇಳಿ ಬರುತ್ತಿದೆ.
